ಮೈಸೂರು,ಜನವರಿ,19,2021(www.justkannada.in): ಭದ್ರಾವತಿಯಲ್ಲಿ ನಡೆದ ಅಮಿತ್ ಶಾ ಕಾರ್ಯಕ್ರಮದಲ್ಲಿ ಕೇವಲ ಹಿಂದಿ ಭಾಷೆ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡೆಗಣನೆ ಮಾಡಿದ ವಿಚಾರ ಕುರಿತು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ , ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿ ಹಿಂದಿಯಲ್ಲಿ ಮಾತ್ರ ಕಾರ್ಯಕ್ರಮ ಮಾಡಲಾಗಿದೆ. ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಮೇಲೆ ಹಿಂದಿ ಹೇರಿಕೆ ಮಾಡಲು ಬರಬೇಡಿ. ವಿವಿಧ ಭಾಷಾ ಸಮುದಾಯಗಳ ಮೇಲೆ ಹಿಂದಿ ಹೇರಿಕೆ ನೀಚತನದ ಉದ್ದೇಶ. ಇದಕ್ಕಿಂತ ದೊಡ್ಢ ದೇಶ ದ್ರೋಹ ಇನ್ನೊಂದಿಲ್ಲ. ದೇಶ ಬಹುತ್ವದೊಂದಿಗೆ ಒಂದಾಗಿರಲು ಬಿಡಿ. ಭಾರತ ಒಕ್ಕೂಟ ಬಲಗೊಳಿಸುವ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡುವುದನ್ನು ಬಿಡಿ ಎಂದು ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ಕಿಡಿಕಾರಿದರು.
ಮಹಾರಾಷ್ಟ್ರ ಮುಖ್ಯಮಂತ್ರಿಯ ಗಡಿ ಖ್ಯಾತೆ: ಕರ್ನಾಟಕದ ತಂಟೆಗೆ ಬರದಂತೆ ಲಕ್ಷ್ಮಣ್ ಎಚ್ಚರಿಕೆ
ಮಹಾರಾಷ್ಟ್ರ ಮುಖ್ಯಮಂತ್ರಿಯ ಉದ್ಧವ್ ಠಾಕ್ರೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಬೆಳಗಾವಿ ಗಡಿ ಬಗ್ಗೆ ಮಹಾಜನ್ ವರದಿಯೇ ಅಂತಿಮ. ಇತ್ಯಾರ್ಥವಾಗಿರುವ ವಿಚಾರವನ್ನು ನಿಮ್ಮ ರಾಜಕೀಯಕ್ಕಾಗಿ ಕೆಣಕಿ ರಾಜಕೀಯ ಮಾಡುವುದನ್ನು ಉದ್ದವ್ ಠಾಕ್ರೆ ಬಿಡಬೇಕು. ನೀವು ಈಗ ಕೇವಲ ಶಿವಸೇನೆ ಮುಖ್ಯಸ್ಥರಲ್ಲ, ಮಹಾರಾಷ್ಟ್ರದ ಮುಖ್ಯಮಂತ್ರಿ ಆದ್ದರಿಂದ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕರ್ನಾಟಕದ ನೆಲ, ಜಲ ಭಾಷೆಯ ರಕ್ಷಣೇ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಎಂದೂ ರಾಜಕೀಯ ಮಾಡುವುದಿಲ್ಲ ಮತ್ತು ರಾಜಿಯೂ ಆಗಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಎಚ್ಚರಿಕೆ ನೀಡಿದರು.
Key words: mysore-KPCC spokesperson- M Laxman –opposes- Hindi- imposition – state.