ಮೈಸೂರು,ಜೂ,1,2019(www.justkannada.in): ಆಸ್ಪತ್ರೆಗೆ ಬರುವ ರೋಗಿಗಳ ಕುಟುಂಬಸ್ಥರಿಂದ ನಮ್ಮ ಮೇಲೆ ಹಲ್ಲೆ ನಡೆಯುತ್ತಿದೆ. ವೈದ್ಯರಾದ ನಮಗೆ ರಕ್ಷಣೆ ಇಲ್ಲ ಎಂದು ಇತ್ತೀಚೆಗೆ ವೈದ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಮೈಸೂರಿನ ಕೆ.ಆರ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳೇ ರೋಗಿಗೆ ಚಿಕಿತ್ಸೆ ನೀಡಿದೆ ನಿರ್ಲಕ್ಷ್ಯ ವಹಿಸಿ ರೋಗಿಯ ಕುಟುಂಬಕ್ಕೆ ಕಿರುಕುಳ ನೀಡುರುವಂತಹ ಘಟನೆ ನಡೆದಿದೆ.
ಸುಟ್ಟಗಾಯಗಳಾಗಿದ್ದ ಮಗುವಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪೋಷಕರು ಕೆ.ಆರ್ ಆಸ್ಪತ್ರಗೆ ಆಗಮಿಸಿದ್ದರು. ಆದರೆ ಕೆ.ಆರ್ ಆಸ್ಪತ್ರೆ ವೈದ್ಯರು ಸತತ 2ಗಂಟೆಗಳ ಕಾಲ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದು, ವೈದ್ಯರ ಬೇಜವಾಬ್ದಾರಿ ವರ್ತನೆಯನ್ನ ರೋಗಿಯ ಸಂಬಂಧಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಸುಟ್ಟಗಾಯಗಳಿಂದ ಬಳಲುತ್ತಿದ್ದ ತಮ್ಮ ಮಗುವಿಗೆ ಚಿಕಿತ್ಸೆ ನೀಡುವಂತೆ ಸಂಬಂಧಿಕರು ಮನವಿ ಮಾಡಿದರೂ ವೈದ್ಯರು ಈ ಬಗ್ಗೆ ಕ್ಯಾರೆ ಎನ್ನದೇ ಸೆಕ್ಯೂರಿಟಿ ಕರೆಸಿ ಹೊರಗೆ ಕಳುಹಿಸಲು ಸೂಚನೆ ನೀಡಿದ್ದಾರೆ, ಈ ಸಂದರ್ಭದಲ್ಲಿ ರೋಗಿಯ ಪೋಷಕರು ಚಿಕಿತ್ಸೆ ನೀಡಲು ಆಗದಿದ್ದರೇ ಬರೆದುಕೊಡಿ ಎಂದು ವೈದ್ಯರಿಗೆ ತಿಳಿಸಿದ್ದಾರೆ.
ಇದಕ್ಕೂ ವೈದ್ಯರು ಪ್ರತಿಕ್ರಿಯೆ ನೀಡದೆ ಬೇಜವಾಬ್ದಾರಿತನ ತೋರಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ವಿಡಿಯೋ ಮಾಡುತ್ತಿದ್ದ ವೇಳೆ ವಿಡಿಯೋ ಸೆರೆ ಹಿಡಿಯದಂತೆ ಹೇಳಿ ಆಸ್ಪತ್ರೆಯ ಲೈಟ್ ಆಫ್ ಮಾಡಿದ್ದು, ನಂತರ ಸೆಕ್ಯೂರಿಟಿ ಗಾರ್ಡ್ ಕರೆದು ಅವರನ್ನ ಹೊರಕ್ಕೆ ಕಳುಹಿಸುವಂತೆ ಆದೇಶಿಸಿದ್ದಾರೆ. ಈ ಮೂಲಕ ಇಂತಹ ದೊಡ್ಡ ಆಸ್ಪತ್ರೆಯಲ್ಲೇ ವೈದ್ಯರು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಸೆರೆ ಹಿಡಿದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಆರೋಗ್ಯ ಸಚಿವರೇ ಕೆ.ಆರ್.ಆಸ್ಪತ್ರೆಯತ್ತ ನೋಡಿ ಎನ್ನುತ್ತಿದ್ದಾರೆ ರೋಗಿಯ ಸಂಬಂಧಿಗಳು.
ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲರಾದ ವೈದ್ಯರ ಮೇಲೆ ರೋಗಿಯ ಸಂಬಂದಿಕರು ಹಲ್ಲೆ ನಡೆಸುತ್ತಿದ್ದು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇನ್ನು ಇತ್ತೀಚೆಗೆ ರೋಗಿಯ ಸಂಬಂಧಿಕರಿಂದಲೇ ನಮ್ಮ ಮೇಲೆ ಹಲ್ಲೆ ನಡೆಯುತ್ತಿದೆ. ನಮಗೆ ರಕ್ಷಣೆಯೇ ಇಲ್ಲ ಎಂದು ವೈದ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ರೋಗಿಯ ಸಂಬಂಧಿಕರು ಎಚ್ಚೆತ್ತುಕೊಂಡಿದ್ದು ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ದ ಹೇಗೆ ಪ್ರತಿಭಟನೆ ಎಂಬುದನ್ನ ಅರಿತಿರುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಚಿಕಿತ್ಸೆ ನೀಡುವಂತೆ ಕೇಳಿದಾಗ ವೈದ್ಯರು ಬೇಜವಾಬ್ದಾರಿ ಉತ್ತರ, ವಿಡಿಯೋ ಸೆರೆ ಹಿಡಿಯುವಾಗ ಆಸ್ಪತ್ರೆಯ ಲೈಟ್ ಆಫ್ ಮಾಡುವುದು, ಹೀಗೆ ಚಿಕಿತ್ಸೆಗಾಗಿ ಬಂದ ರೋಗಿಯ ಕುಟುಂಬಕ್ಕೆ ಆಸ್ಪತ್ರೆಯ ಸಿಬ್ಬಂದಿ ಕಿರುಕುಳ ನೀಡಿರುವುದು ಕಂಡುಬಂದಿದ್ದು ಈ ಬಗ್ಗೆ ಆರೋಗ್ಯ ಸಚಿವರು ಕ್ರಮ ಜರುಗಿಸಬೇಕಿದೆ.
Key words: mysore-kr hospital- Mysore -against -neglected -doctors.