ಮೈಸೂರು,ನವೆಂಬರ್,27,2020(www.justkannada.in): “ಪರೀಕ್ಷೆಗೆ ತಯಾರಾಗಲು ಯೋಜನೆ ಬೇಕಾಗುತ್ತದೆ. ನಿಮಗೆ ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬೇಕು. ಇಂಟರ್ ನೆಟ್ ನಲ್ಲಿ ಮಾಹಿತಿ ಸಿಗುತ್ತದೆ ಎಂದು ನಂಬುವ ಬದಲು ವಿಷಯಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಪುಸ್ತಕಗಳ ಪರಾಮರ್ಶೆಯನ್ನು ವಿಸ್ತೃತವಾಗಿ ಮಾಡಬೇಕು ಎಂದು ಐಎಎಸ್ ಅಧಿಕಾರಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷ ಹೇಳಿದರು.
ಶುಕ್ರವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಏರ್ಪಡಿಸಿದ್ದ 2020-21 ರ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್ಲೈನ್ ಶಿಬಿರವನ್ನು ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಅಲ್ಲಿಂದಲೇ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯೇ ದೊಡ್ಡ ಸಮಸ್ಯೆಯಾಗಿರುತ್ತಿತ್ತು. ಆದರೆ ಇಂದಿನ ಕೋವಿಡ್ ಸಮಯದಲ್ಲೂ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಹಲವಾರು ಪರೀಕ್ಷೆಗಳ ಆನ್ಲೈನ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದನಿಯ. ಪರೀಕ್ಷಾ ತಯಾರಿ ಬಗ್ಗೆ ಹೇಳುವುದಾದರೆ ಇಂಥ ಪ್ರಯತ್ನ ನಿಮ್ಮಲ್ಲಿರುವ ವಿಷಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ದೂರ ಮಾಡುತ್ತದೆ. ಸಮಯದ ಮಿತಿ ಹಾಕಿಕೊಂಡು ಪ್ರಶ್ನೆ ರೂಪಿಸಿ ಅದಕ್ಕೆ ಉತ್ತರ ನೀಡಬೇಕು. ಆಗ ನೀವು ಕೊಟ್ಟ ಉತ್ತರ ಸರಿ ಇದೆಯೋ ಇಲ್ಲವೋ ಎಂದು ನೋಡಿಕೊಂಡಾಗ ಖಚಿತವಾಗುತ್ತಾ ಹೋಗುತ್ತೀರಿ, ಆನಂತರ ಗೊಂದಲ ಇರುವ ವಿಷಯಕ್ಕೆ ಕೊನೆಯ ಎರಡು ತಿಂಗಳು ಹೆಚ್ಚೆಚ್ಚು ಒತ್ತು ಕೊಟ್ಟರೆ ಅದನ್ನು ಸರಿಪಡಿಸಿಕೊಳ್ಳಬಹುದು ” ಎಂದು ನುಡಿದರು.
ಸ್ವಂತ ಪರಿಶ್ರಮದಿಂದ ಉದ್ಯೋಗ ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಬೇಕು- ಡಾ. ಎ.ಎನ್. ಪ್ರಕಾಶ್ಗೌಡ…
ಪರೀಕ್ಷಾ ಅಧ್ಯಯನ ಕ್ರಮದ ಬಗ್ಗೆ ಮಾತನಾಡಿದ ಐಪಿಎಸ್ ಅಧಿಕಾರಿ ಡಾ. ಎ.ಎನ್. ಪ್ರಕಾಶ್ಗೌಡ ಅವರು, ಕೇವಲ ವೈದ್ಯಕೀಯ ಇಲ್ಲವೇ ಎಂಜಿನಿಯರಿಂಗ್ ಮುಗಿಸಿದವರು ಐಎಎಸ್ ಪಾಸಾಗಬಹುದು. ಬೇರೆ ವಿಷಯಗಳನ್ನು ವ್ಯಾಸಂಗ ಮಾಡಿದವರೆಲ್ಲ ದಡ್ಡರು ಎಂದು ಭಾವಿಸುವ ಅಗತ್ಯವೇ ಇಲ್ಲ. ನಿಮ್ಮಲ್ಲಿರುವ ಆಸಕ್ತಿ ಆಧರಿಸಿ, ಪದವಿ ಪಡೆದ ವಿಷಯಗಳನ್ನೆ ಅಲ್ಲದೆ ಇತರ ಮೂಲಗಳಿಂದ ವಿಷಯ ಸಂಗ್ರಹಣೆ ಮಾಡಿಕೊಂಡಾಗ ತಯಾರಿ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
ಇಂದು ಬಹುತೇಕ ಮಂದಿ ಕೆಲಸ ಕೊಡಿಸಿ ಎಂದು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಗುವರು. ಅದರ ಬದ್ಲು ಸ್ವಂತ ಪರಿಶ್ರಮದಿಂದ ಉದ್ಯೋಗ ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಯಾವ ರೀತಿ ಉದ್ಯೋಗ ಪಡೆಯಬಹುದು ಎಂಬ ಮಾಹಿತಿಯ ಕೊರತೆ ಹಲವರಿಗೆ ಇದೆ.” ಮಧ್ಯಮ ವರ್ಗದ ಕುಟುಂಬದಿಂದಲೇ ಬಂದ ನನಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಐಎಎಸ್ ಅಧಿಕಾರಿಯಾಗುವ ಆಸೆಯಿತ್ತು. ಎಂಎಸ್ಡಬ್ಲೂ ಮುಗಿಸಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡೆ. ಪದವಿ ಓದುತ್ತಿರುವಾಗಲೇ ಪರೀಕ್ಷಾ ತಯಾರಿಯನ್ನೂ ಮಾಡುತ್ತಿದ್ದೆ. ದೀರ್ಘ ಅಧ್ಯಯನ, ಮನನ ಮತ್ತು ಮಾನಸಿಕ ಸ್ಥೈರ್ಯದಿಂದ ಪರೀಕ್ಷಾ ತಯಾರಿ ನಡೆಸಬೇಕು ಹಾಗೂ ಹಣ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ, ವಿಫಲರಾಗಿರುವವರು ಹಬ್ಬಿಸುವ ಸುದ್ದಿಗೆ ಕಿವಿಗೊಡಬೇಡಿ ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ಆನ್ಲೈನ್ನಲ್ಲಿ ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಎಸ್.ಬಿ. ರವಿಕುಮಾರ್ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೆಎಎಸ್ ಅಧಿಕಾರಿಗಳಾದ ವಾಣಿಜ್ಯ ತೆರಿಗೆ ಇಲಾಖೆ ಅಸಿಸ್ಟೆಂಟ್ ಕಮಿಷನರ್ ಎಂ.ಬಿ ಚೆನ್ನಕೇಶವ, ನಗರ ಸಭೆ ಗ್ರೇಡ್-1 ಚೀಪ್ ಆಫೀಸರ್ ಎಂ. ಮಾನಸ ಇಬ್ಬರು ಪರೀಕ್ಷೆ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರಾಮುವಿ ಕುಲಪತಿ ಪ್ರೊ..ಎಸ್.ವಿದ್ಯಾಶಂಕರ್ ಮಾತನಾಡಿ, ಲಾಕ್ಡೌನ್ನಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಆಭ್ಯರ್ಥಿಗಳ ಸಿದ್ಧತೆ ತೊಡಕಾಗಬಾರದೆಂಬ ಉದ್ದೇಶದಿಂದ ಕೇವಲ ಒಂದೇ ವಾರದಲ್ಲಿ ಜೂಮ್ ಗೆ ಪರ್ಯಾಯವಾಗಿ ಆ್ಯಪ್ ರೂಪಿಸಿದೆವು. ಕೆಎಸ್ಓಯು ಸ್ಟುಡೆಂಟ್ ಆ್ಯಪ್ ಎಂಬ ವಿಡಿಯೋ ಪ್ಲಾಟ್ಫಾರಂ ಸೃಷ್ಟಿಸಿದ್ದೇವೆ. ಈಗ ಆನ್ಲೈನ್ ಕಲಿಕೆಯಲ್ಲಿ ಅತ್ಯುತ್ತಮ ವೇದಿಕೆಯಾಗಿ ಕೆಎಸ್ಓಯು ಹೊರಹೊಮ್ಮಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕರಾಮುವಿ ಕುಲಸಚಿವ ಪ್ರೊ. ಲಿಂಗರಾಜಗಾಂಧಿ, ಹಣಕಾಸು ಅಧಿಕಾರಿ ಡಾ. ಎ. ಖಾದರ್ಪಾಷ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿದ್ದರು.
Key words: mysore- KSOU- Look – trusted books- instead – getting information – Internet- IAS officer -Akrapampasha