ಮೈಸೂರು, ಏ.27, 2020 : ( www.justkannada.in news ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈಗಾಗಲೇ ಆನ್ ಲೈನ್ ವ್ಯವಸ್ಥೆಗೆ ತೆರೆದುಕೊಂಡಿದ್ದು, ವಿವಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವೂ ಆನ್ ಲೈನ್ ತರಗತಿಗಳನ್ನು ಸೋಮವಾರದಿಂದ ಆರಂಭಿಸಿದೆ.
ಕೊರೊನಾ ಲಾಕ್ ಡೌನ್ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಅಣಿಯಾಗುತ್ತಿದ್ದು ಇದರಿಂದ ತೊಂದರೆಯಾಗಬಾರದು ಎನ್ನುವ ಕರಾಮುವಿವಿ ಕುಲಪತಿ ಪ್ರೊಎಸ್. ವಿದ್ಯಾಶಂಕರ್ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಆನ್ ಲೈನ್ ತರಗತಿ ಶುರು ಮಾಡಲಾಗಿದೆ. ಮೊದಲ ಬ್ಯಾಚ್ ನಲ್ಲಿ ಕೆಸೆಟ್ ಪರೀಕ್ಷೆ ಗಳಿಗೆ ತರಬೇತಿ ಶುರುವಾಗಿದೆ.
ಕರಾಮುವಿ ಕುಲಪತಿ ಕಚೇರಿಯಲ್ಲಿ ಕೆಸೆಟ್ ಪರೀಕ್ಷೆಗಳ ಆನ್ ಲೈನ್ ತರಗತಿಗಳಿಗೆ ಚಾಲನೆ ದೊರಕಿತು. ಈ ವೇಳೆ ಮಾತನಾಡಿದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಕೊರೊನಾದಿಂದ ಜಗತ್ತಿನಾದ್ಯಂತ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡು ತಿಂಗಳೇ ಕಳೆದಿದೆ. ವಿದ್ಯಾರ್ಥಿಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುವ ಅಭ್ಯರ್ಥಿಗಳಿಗೆ ಅಡಚಣೆಯಾಗಿದೆ. ಇದನ್ನು ಮನಗಂಡು ದೂರಶಿಕ್ಷಣ ನೀಡುವ ನಮ್ಮ ವಿಶ್ವ ಆನ್ ಲೈನ್ ತರಗತಿ ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಕ಼ೇತ್ರದಲ್ಲಿ ನಿರಂತರತೆ ಇದ್ದಾಗ ವಿದ್ಯಾರ್ಥಿಗಳು ಸಕ್ರಿಯರಾಗಿರುತ್ತಾರೆ. ಈಗಿನ ಕಾಲದಲ್ಲಿ ಆನ್ ಲೈನ್ ಶಿಕ್ಷಣ ಜನಪ್ರಿಯವಾಗಿದ್ದು, ಮುಂದೆ ಇದೇ ವ್ಯವಸ್ಥೆ ಬಲಗೊಳ್ಳಲಿದೆ. ಇದರಿಂದಲೇ ವಿವಿ ಕೂಡ ಆನ್ ಲೈನ್ ಬಳಸಿಯೇ ವಿದ್ಯಾರ್ಥಿಗಳ ನಿರಂತರ ಸಂಪರ್ಕದಲ್ಲಿರಲಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ಗಳಿಗಂತೂ ಸತತ ಪ್ರಯತ್ನ ಇದ್ದರೆ ಮಾತ್ರ ಯಶಸ್ವಿಯಾಗೋದು. ಇದಕ್ಕಾಗಿಯೇ ವಿವಿ ಸ್ಪರ್ಧಾತ್ಮಕ ಪರೀಕ್ಷೆ ಗಳ ತರಬೇತಿ ಕೇಂದ್ರ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಿವಿಯಿಂದ ಎಲ್ಲ ರೀತಿಯ ಸಹಕಾರವನ್ನು ತರಬೇತಿಗೆ ನೀಡಲಾಗುವುದು ಎಂದು ನುಡಿದರು.
ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ದೇಶದಲ್ಲಿ ಬಹಳಷ್ಟು ವಿಶ್ವವಿದ್ಯಾಲಯಗಳು ಆನ್ ಲೈನ್ ತರಗತಿ ಆರಂಭಿಸಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು ವಿಶ್ವವಿದ್ಯಾಲಯ ಆನ್ ಲೈನ್ ತರಗತಿ ಈಗ ಆರಂಭಿಸುತ್ತಿರುವುದು ಮೊದಲನೆಯದ್ದು. ಅಭ್ಯರ್ಥಿಗಳಿಗೆ ನೆರವಾದರೆ ನಮ್ಮ ಶ್ರಮ ಸಾರ್ಥಕ ಎಂದು ಹೇಳಿದರು.
ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಖಾದರ್ ಪಾಶಾ ಹಾಜರಿದ್ದರು. ಮೊದಲ ದಿನ ಮೈಸೂರು ಸಿದ್ದಾರ್ಥನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಸನ್ನಕುಮಾರ್ ತರಗತಿ ನಡೆಸಿದರು.
ಇಂಥ ಸಮಯದಲ್ಲೂ ತರಗತಿಗಳನ್ನು ಆಯೋಜಿಸಿದ್ದಕ್ಕೆ ರಾಜ್ಯದ ನಾನಾ ಭಾಗಗಳಿಂದ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು..
ಸಹಜ ಸ್ಥಿತಿಗೆ ಮರಳಿದ ನಂತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಮೈಸೂರಿನಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆ ಗಳ ತರಬೇತಿ ಕೇಂದ್ರದಲ್ಲೇ ತರಗತಿ ಎಂದಿನಂತೆ ನಡೆಯಲಿದ್ದು, ಅಗತ್ಯಕ್ಕನುಗುಣವಾಗಿ ಆನ್ ಲೈನ್ ತರಗತಿಗಳು ಇರಲಿವೆ ಎಂದು ಕೇಂದ್ರದ ಸಂಯೋಜನಾಧಿಕಾರಿಗಳಾದ ಜೈನಹಳ್ಳಿ ಸತ್ಯ ನಾರಾಯಣ ಗೌಡ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ದೂರವಾಣಿ 0821 2515944 ಗೆ ಸಂಪರ್ಕಿಸಬಹುದು…
https://onlineclass.ksoumysuru.ac.in/b/coa-k7k-z2p
key words : mysore-KSOU-online-class-vc