ರಾಜ್ಯಮಟ್ಟದ ಪತ್ರಿಕೆಗಳಿಗೆ ‘ ಜಾಹಿರಾತು ಸಂದರ್ಶನ’ದ ಮೂಲಕ ಆರೋಪ ಸಮರ್ಥನೆ ಮುಂದಾದ ಕೆಎಸ್ಒಯು ಕುಲಪತಿ: ರಾಜ್ಯಪಾಲರಿಗೆ ದೂರು.

 

ಮೈಸೂರು, ಅಕ್ಟೋಬರ್ ೪, ೨೦೨೧ (www.justkannada.in): ರಾಜ್ಯಮಟ್ಟದ ಪತ್ರಿಕೆಗಳಲ್ಲಿ ‘ ಜಾಹಿರಾತು ಸಂದರ್ಶನದ’ ಮೂಲಕ ತಮ್ಮ ಮೇಲಿನ ಆರೋಪಗಳ ಸಮರ್ಥನೆಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕರ್ನಾಟಕ ರಾಜ್ಯಪಾಲರಿಗೆ, ವಿಶ್ರಾಂತ ಕುಲಪತಿ, ಇಗ್ನೋದ ಪ್ರಾದೇಶಿಕ ಸೇವೆಗಳ ವಿಭಾಗದ ಮಾಜಿ ನಿರ್ದೇಶಕ ಡಾ.ಎನ್.ಎಸ್.ರಾಮೇಗೌಡ ಸೆ.27 ರಂದು  ಪತ್ರ ಬರೆದಿದ್ದಾರೆ. ರಾಜ್ಯಮಟ್ಟದ ನಾಲ್ಕು ಪತ್ರಿಕೆಗಳಲ್ಲಿ ಜಾಹಿರಾತು ಸಂದರ್ಶನ ನೀಡಿರುವ ಡಾ.ವಿದ್ಯಾಶಂಕರ್ ಅವರ ಪ್ರತಿ ಆರೋಪಗಳಿಗೆ ಎಳೆಎಳೆಯಾಗಿ ವಿವರಣೆ ನೀಡಿರುವ ರಾಮೇಗೌಡ, 50 ಪುಟಗಳ ಸುದೀರ್ಘ ಪತ್ರವನ್ನ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಜತೆಗೆ ಈ ಸಂಬಂಧದ ವಿಚಾರಣೆಗೆ ಕರೆದಲ್ಲಿ ತಾವು ಖುದ್ದು ಹಾಜರಿರುವುದಾಗಿಯೂ ಪತ್ರದಲ್ಲಿ ಡಾ.ರಾಮೇಗೌಡ ಸ್ಪಷ್ಟಪಡಿಸಿದ್ದಾರೆ.

ಇದೇ ಪತ್ರಗಳನ್ನು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಯುಜಿಸಿ ಮುಖ್ಯಸ್ಥರಿಗೆ ಸಹ ಕಳುಹಿಸಿದ್ದಾರೆ. ಈ ಪತ್ರದ ಪ್ರತಿ ‘ ಜಸ್ಟ್ ಕನ್ನಡ’ ಗೆ ಲಭಿಸಿದ್ದು, ಅವರ ಪೂರ್ಣ ಸಾರಂಶ ಹೀಗಿದೆ.

ಸೆಪ್ಟೆಂಬರ್ ೪, ೨೦೨೧ರಂದು ರಾಜಭವನಕ್ಕೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ ಕೆಎಸ್‌ಒಯುನ ಉಪಕುಲಪತಿ ಡಾ. ವಿದ್ಯಾಶಂಕರ್ ಅವರ ದುಷ್ಕೃತ್ಯಗಳ ಕುರಿತು ಗಮನಕ್ಕೆ ತಂದಿದ್ದೆ. ಆ ಭೇಟಿಯ ಮುಂದುವರಿಕೆಯಾಗಿ ಡಾ. ವಿದ್ಯಾಶಂಕರ್ ಅವರ ದುಷ್ಕೃತ್ಯಗಳು ಈಗಲೂ ಮುಂದುವರೆದಿರುವುದನ್ನು ತಮ್ಮ ಆದ್ಯ ಗಮನಕ್ಕೆ ತರಲು ಬಯಸುತ್ತೇನೆ.

ದೂರ ಶಿಕ್ಷಣದ ಒಡಿಎಲ್ ವ್ಯವಸ್ಥೆಯನ್ನು ನಡೆಸುವ ಸಂಬಂಧ ಯು.ಜಿ.ಸಿ.ಯ ೨೦೧೭, ೨೦೧೮ ಹಾಗೂ ೨೦೨೦ರ ಹೊಸ ನಿಯಮಾವಳಿಗಳ ಉಲ್ಲಂಘನೆ (ಪ್ರತಿಗಳನ್ನು ಲಗತ್ತಿಸಿದೆ) ಆಗಿದ್ದು, ಇದರಿಂದಾಗಿ ಕೆಎಸ್‌ಒಯುನ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ನಾಶವಾಗಿದ್ದು, ವಿಶ್ವವಿದ್ಯಾಲಯದ ಹಣ ದೊಡ್ಡ ಮೊಟ್ಟದಲ್ಲಿ ದುರುಪಯೋಗವಾಗಿದೆ. ಈ ಹಿಂದೆ, ಅಂದರೆ ೨೦೧೩ ರಿಂದ ೨೦೧೫ರ ನಡುವೆ ಕೆಎಸ್‌ಒಯುನ ಎಲ್ಲಾ ಪದವಿಗಳನ್ನೂ ಸಹ ಯುಜಿಸಿ ಅನರ್ಹಗೊಳಿಸಿತ್ತು. ಈಗ ಮತ್ತೊಮ್ಮೆ ಅದೇ ಸನ್ನಿವೇಶ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ.

ಈ ಮೇಲೆ ತಿಳಿಸಿರುವ ಎಲ್ಲಾ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಕೆಎಸ್‌ಒಯು ಸಂಪೂರ್ಣವಾಗಿ ವಿನಾಶ ಹೊಂದುವುದಕ್ಕೆ ಮುಂಚೆ ಸೂಕ್ತ ವಿಚಾರಣೆ ನಡೆಸಿ ವಿಶ್ವವಿದ್ಯಾಲಯವನ್ನು ಉಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ಕಳಕಳಿಯಿಂದ ಕೋರುತ್ತೇನೆ.

ಈ ಪತ್ರದೊಂದಿಗೆ ಕೆಎಸ್‌ಒಯುನ ಹಾಲಿ ಉಪಕಲುಪತಿ ಡಾ. ವಿದ್ಯಾಶಂಕರ್ ಅವರ ದುಷ್ಕೃತ್ಯಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಹಾಗೂ ಪೂರಕ ದಾಖಲೆಗಳನ್ನು ತಮ್ಮ ಗಮನಕ್ಕಾಗಿ ಕಳುಹಿಸುತ್ತಿದ್ದು, ಮತ್ತೊಮ್ಮೆ ತಾವು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ.”


key words : mysore-KSOU-scam-governor-letter-ramegowda-open.university