ಮೈಸೂರು, ಆ,11,2020(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಕೆಎಎಸ್ ಹಾಗೂ ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ತಿಂಗಳ ಆನ್ ಲೈನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನ 12.08.2020ರ ಬುಧವಾರ ಆಯೋಜಿಸಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನಿಂದಲೇ ಆನ್ ಲೈನ್ ನಲ್ಲಿ ನಾಡಿನ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಸುವರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, 190 ಪುಟದ ಮಕ್ತ ಭಂಡಾರ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡುವರು. ಕರ್ನಾಟಕ ಸರ್ಕಾರದ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮ ಮುಖ್ಯ ಆಡಳಿತಾಧಿಕಾರಿ ಎ.ಎಂ. ಯೋಗೀಶ್ ಮತ್ತು ಬೆಂಗಳೂರು ನಗರ ಜಿಲ್ಲೆ ವಿಶೇಷ ಜಿಲ್ಲಾಧಿಕಾರಿ ಬಸವರಾಜು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗುವರು. ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಉಪಸ್ಥಿತರಿರುವರು.
2011ರಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಹಲವು ತರಬೇತಿಗಳನ್ನು ಆಯೋಜಿಸುತ್ತಾ ಬಂದಿದೆ. ಅದರಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳ ತರಬೇತಿಯೂ ಸೇರಿದೆ. ಕೊರೊನಾ ಕಾರಣದಿಂದ ಆನ್ ಲೈನ್ ತರಬೇತಿಯನ್ನೂ ಆಯೋಜಿಸಲಾಗಿದ್ದು, 60 ದಿನಗಳ ತರಬೇತಿ ಮುಗಿದಿದೆ ಎಂದು ತಿಳಿಸಿದ್ದಾರೆ.
ದಿನಾಂಕ 10.06.2020 ರಂದು ಕೆಎಎಸ್ ಪರೀಕ್ಷಾ ತರಬೇತಿ ಶಿಬಿರ ಪ್ರಾರಂಭವಾಯಿತು. ಉದ್ಘಾಟನೆಯು ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪ ಅವರಿಂದ ತರಬೇತಿಗೆ ಚಾಲನೆ ನೀಡಲಾಯಿತು. ಪ್ರಸ್ತುತ ಆನ್ಲೈನ್ ನಲ್ಲಿ 60 ದಿನ ತರಬೇತಿ ನಡೆದು ದಿನಾಂಕ:12.08.2020ರಂದು ಮುಕ್ತಾಯವಾಗಲಿದೆ. ಕೆ.ಎ.ಎಸ್ ಮತ್ತು ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 450 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.
Key words: mysore-KSOU-Tomorrow – closing ceremony – Competitive Exams -Online Training Camp