ಮೈಸೂರು,ಮಾ,5,2020(www.justkannada.in): ಹೆಸರಿಗೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಆದರೆ ಈ ಶಾಲೆಗಳಲ್ಲಿ ಮಾತ್ರ ಮೂಲಭೂತ ಸೌಕರ್ಯಗಳೇ ಇಲ್ಲವಾಗಿದೆ. ಶೌಚಾಲಯ, ಆಟದ ಮೈದಾನದ ಕೊರತೆ, ಅಷ್ಟೇ ಅಲ್ಲ ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಜೀವಭಯದಲ್ಲಿ ಪಾಠ ಕೇಳುತ್ತಿದ್ದಾರೆ ವಿದ್ಯಾರ್ಥಿಗಳು. ಅಷ್ಟಕ್ಕೂ ಆ ಶಾಲೆ ಯಾವುದೇ ಗೊತ್ತೆ..?
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಉನ್ನತೀಕರಿಸಿದ ಅಂಗ್ಲಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಈ ಎಲ್ಲಾ ಕೊರತೆಗಳು ಕಂಡು ಬಂದಿವೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಸುಮಾರು 180 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಈ ಮಕ್ಕಳಿಗೆ ಇರುವುದು ಮೂರು ಕೊಠಡಿಗಳು ಮಾತ್ರ. ಈ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಕೊಠಡಿಗೆ ಹಾಕಿರುವ ಮೇಲ್ಚಾವಣಿ ಹಂಚುಗಳು ಬೀಳುತ್ತಿವೆ. ಇದರಿಂದಾಗಿ ಮಕ್ಕಳು ಜೀವಭಯದಲ್ಲಿ ಪಾಠ ಕೇಳುವ ಸಂದರ್ಭ ಎದುರಾಗಿದೆ.
ಇನ್ನು ಈ ಶಾಲೆಯು ಆರ್ ಎಂಎಸ್ ಎ( ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ಶಾಲೆಯಾಗಿದ್ದು ಈ ನಿಯಮಾವಳಿ ಪ್ರಕಾರ ಶಾಲೆಗೆ ಸ್ಮಾರ್ಟ್ ಕ್ಲಾಸ್, ಲ್ಯಾಬ್, ಗ್ರಂಥಾಲಯ ಕಂಪ್ಯೂಟರ್ ಮುಂತಾದ ಸೌಲಭ್ಯಗಳು ಇರಬೇಕು. ಆದರೆ ಈ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯ, ಆಟದ ಮೈದಾನ ಇಲ್ಲದೇ ಮಕ್ಕಳು ಸಂಕಷ್ಟದಲ್ಲಿ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಈ ದುಸ್ಥಿತಿ ಬಗ್ಗೆ ಆರ್ ಟಿಐ ಕಾರ್ಯಕರ್ತ ರವೀಂದ್ರ ಅವರು ಮಾಹಿತಿ ಹಂಚಿಕೊಂಡಿದ್ದು ಹೀಗೆ…
ಆರ್ ಟಿಐ ಕಾರ್ಯಕರ್ತ ಹಾಗೂ ವಿಶ್ವಪ್ರಜ್ಞಾ ಟ್ರಸ್ಟ್ ಮುಖ್ಯಸ್ಥರಾದ ರವೀಂದ್ರ ಅವರು ಶಾಲೆಗೆ ಭೇಟಿ ನೀಡಿದ ವೇಳೆ ಈ ಎಲ್ಲಾ ವಿಷಯಗಳು ತಿಳಿದು ಬಂದಿವೆ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿರುವ ಅವರು, ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿಗೆ ಮಾತ್ರ ಉನ್ನತೀಕರಿಸಿದ ಶಾಲೆಯಾಗಿದೆ. ಆದರೆ ಇಲ್ಲಿ ಮೂಲಭೂತ ಸಮಸ್ಯೆಗಳೇ ಎದ್ದು ಕಾಣುತ್ತಿವೆ. ಈ ಶಾಲೆ 1960ರಲ್ಲಿ ಸ್ಥಾಪನೆಯಾಗಿದ್ದು ಈ ಒಂದು ವರ್ಷದ ಹಿಂದೆ ಆರ್ ಎಂಎಸ್ ಎ ಶಾಲೆಯಾಗಿದೆ. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ 180 ವಿದ್ಯಾರ್ಥಿಗಳಿಗೆ ಕೇವಲ ಮೂರು ಕೊಠಡಿಗಳಿವೆ. ಆ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಮೇಲ್ಚಾವಣಿ ಹಂಚುಗಳು ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಮಕ್ಕಳು ಭಯದಿಂದ ಪಾಠ ಕೇಳುವಂತಾಗಿದ್ದು, ಏನಾದರೂ ಮಕ್ಕಳಿಗೆ ತೊಂದರೆಯಾದರೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸ್ಥಾಪನೆಗೊಂಡ ವೇಳೆ ಇದ್ದ ಸ್ಥಿತಿಯಲ್ಲೇ ಇರುವ ಈ ಶಾಲೆಗೆ ಉನ್ನತೀಕರಿಸಿದ ಶಾಲೆ ಎಂಬ ಹೆಸರಿಗೆ ತಕ್ಕಂತೆ ಬೇಕಾದ ಮೂಲಭೂತ ಸೌಲಭ್ಯಗಳನ್ನ ಒದಗಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ವಿಶ್ವಪ್ರಜ್ಞಾ ಟ್ರಸ್ಟ್ ಮುಖ್ಯಸ್ಥರಾದ ರವೀಂದ್ರ ಆಗ್ರಹಿಸಿದ್ದಾರೆ.
Key words: mysore- kupparavalli-Upgraded –School- no infrastructure.