ಮೈಸೂರು, ಡಿ.29, 2021 : (www.justkannada.in news ) ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜಯಂತಿಯನ್ನು ಆಚರಿಸುವುದಷ್ಟೇ ಅಲ್ಲದೆ, ಅವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ ಅವರು ಹೇಳಿದಿಷ್ಟು..
ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಆ ಮಗುವನ್ನು ವಿಶ್ವಮಾನವನನ್ನಾಗಿ ಮಾಡುವುದೇ ‘ವಿದ್ಯೆಯ ಕರ್ತವ್ಯವಾಗಬೇಕು ಎಂದು ಕುವೆಂಪು ಅವರು ಹೇಳಿದ್ದಾರೆ. ಅದರಂತೆ ನಾವೆಲ್ಲರೂ ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡುವ ಮುಖಾಂತರ ‘ವಿಶ್ವಮಾನವನನ್ನಾಗಿ ಮಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಪ್ರಜೆಯಾಗಿ ವಿಶ್ವಕ್ಕೆ ಮಾದರಿಯಾಗುವಂತೆ ರೂಪಿಸೋಣ. ವಿದ್ಯಾರ್ಥಿಗಳು ಕುವೆಂಪು ಅವರನ್ನು ಮಾದರಿಯಾಗಿಟ್ಟುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ಕುವೆಂಪು ಅವರು ಓದುತ್ತಿರುವಾಗಲೇ ಓದಿನ ಜೊತೆ ಜೊತೆಗೆ ಶೆಲ್ಲಿ, ವರ್ಡ್ಸ್ ವರ್ತ, ಜಾನ್ ಕಿಟ್ ಮುಂತಾದ ಆಂಗ್ಲ ಕವಿಗಳ ಬಗೆಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಅವರೆಲ್ಲರ ಪ್ರಭಾವದಿಂದಾಗಿ ಇಂಗ್ಲಿಷ್ ಸಾಹಿತ್ಯದತ್ತ ಹೆಜ್ಜೆಯಿರಿಸಿದರು. ಆದರೆ, ನಂತರ ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಸಾಧನೆ ಮಾಡಿದರು. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕಥೆ, ಕವನ. ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರ ಕೃತಿಗಳು ನಗ್ನ ಸತ್ಯವನ್ನು ಅನಾವರಣಗೊಳಿಸುತ್ತವೆ ಎಂದು ಹೇಳಿದರು.
ಕುವೆಂಪು ಅವರು 1929ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಉಪಪ್ರಾಧ್ಯಾಪಕ, ಪಿನ್ಸಿಪಾಲರಾಗಿ ಸೇವೆಯನ್ನು ಸಲ್ಲಿಸಿದರು. 1956ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿರುವುದು ನಮ್ಮ ವಿಶ್ವವಿದ್ಯಾನಿಲಯಕ್ಕೆ ಲಭ್ಯವಾದ ಆಸ್ತಿಯೆಂದೇ ಹೇಳಬಹುದು. ಅವರ ಪಾಠ-ಪ್ರವಚನ ಕೇಳಿರುವ ಶೋತೃಗಳೇ ಅತ್ಯಂತ ಪುಣ್ಯವಂತರು. ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಕೊಡುಗೆಗಳಿಂದಾಗಿ ಅನೇಕ ಮನ್ನಣೆ ಪ್ರಶಸ್ತಿಗಳು ಅವರಿಗೆ ದೊರೆತವು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪ್ರೊ. ಎಂ.ಜಿ. ಮಂಜುನಾಥ ಮಾತನಾಡಿ, ಕುವೆಂಪು ಅವರು ನಿಜವಾದ ಅರ್ಥದಲ್ಲಿ ಯುಗದ ಕವಿ ಜಗದ ಕವಿ. ಅವರ ಅಮೂಲ್ಯ ಛಾಯಾಚಿತ್ರಗಳನ್ನು ನಮ್ಮ ಸಂಸ್ಥೆಯ ಮ್ಯೂಸಿಯಂಗೆ ತರುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ತೇಜಸ್ವಿ ಅವರಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ನಮ್ಮ ಮ್ಯೂಸಿಯಂಗೆ ಕೊಡಿ ಎಂದು ಈ ಹಿಂದೆ ರಾಜೇಶ್ವರಿ ತೇಜಸ್ವಿ ಅವರನ್ನು ಕೇಳಿಕೊಂಡಿದ್ದೆವು. ಕೊಡಲು ಒಪ್ಪಿದ್ದ ಅವರು ಇತ್ತೀಚಿಗೆ ನಿಧನರಾಗಿದ್ದು, ಕುಟುಂಬಸ್ಥರೊಂದಿಗೆ ಮಾತನಾಡಲಾಗುವುದು ಎಂದರು.
ಸಂದರ್ಶನ ಪ್ರಾಧ್ಯಾಪಕರಾದ ಪ್ರೊ.ಪ್ರಧಾನ್ ಗುರುದತ್ , ಕುವೆಂಪು ಅವರ ಸಾಹಿತ್ಯದ ಅನನ್ಯತೆ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಧ್ಯಾಪಕರಾದ ಪ್ರೊ. ನಂಜಯ್ಯ ಹೊಂಗನೂರು, ಪ್ರೊ.ಲೋಲಾಕ್ಷಿ ಸೇರಿದಂತೆ ಇತರರು ಇದ್ದರು. ಕುವೆಂಪು ಸಾಹಿತ್ಯದ ದೃಶ್ಯಗಳನ್ನು ಕುರಿತು ರಂಗಕರ್ಮಿ ಯು.ಎಸ್.ರಾಮಣ್ಣ ಏಕಪಾತ್ರಭಿನಯ ಮಾಡಿ ಗಮನ ಸೆಳೆದರು.
key words : Mysore-kuvempu-birth-day-celebration-university-of-Mysore-vc-hemanth.kumar
ENGLISH SUMMARY…
Kuvempu birth anniversary program
Mysuru, December 29, 2021 (www.justkannada.in): The Kuvempu Kannada Adhyayana Samsthe had organized a program on the occasion of the birth anniversary of National Poet Kuvempu.
Speaking on the occasion, Prof. G. Hemanth Kumar, Vice-Chancellor, University of Mysore, expressed his view that not only celebrating the anniversary, we should also all follow on the path which the great poet has left behind.
“Every child is great when it is born it is we who make it unworthy. It should be the responsibility of education to make all the children great once again,” he opined. “Let us all become good citizens of the country and become a model for the world. Youngsters should inculcate interest in literature and work on it,” he added.
Prof. Pradhana Gurudutt, guest lecturer, delivered a lecture on Kuvempu’s literature. Prof. Nanjaiah Honganuru, Prof. Lolakshi and others were present.
Keywords: Kuvempu/ birth anniversary/ University of Mysore