ಮೈಸೂರು,ಜು,17,2020(www.justkannada.in) ಆಷಾಢ ಮಾಸ ಬಂತೆಂದರೇ ಸಾಕು ಸಾಂಸ್ಕೃತಿಕ ಮೈಸೂರಿನಲ್ಲಿ ಹಬ್ಬದ ವಾತಾವರಣ. ಅದರಲ್ಲೂ ಪ್ರತಿ ಆಷಾಢ ಶುಕ್ರವಾರ ಚಾಮುಂಡಿಬೆಟ್ಟ ಭಕ್ತರಿಂದ ಗಿಜುಗುಡುತಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಇದರಿಂದಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿ ವರ್ಷ ಸಂಭ್ರಮ, ಸಡಗರ ಮನೆ ಮಾಡುತ್ತಿತ್ತು. ಆದರೆ ಈ ಬಾರಿ ಕರೋನಾ ಎಫೆಕ್ಟ್ ನಿಂದಾಗಿ ಇದೆಲ್ಲವೂ ಇಲ್ಲವಾಗಿದೆ.
ಹೌದು, ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನಿಂದಾಗಿ ಈ ಭಾರಿ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟದ ದೇಗುಲ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಇಂದು ಕಡೆಯ ಆಷಾಢ ಶುಕ್ರವಾರವಾಗಿದ್ದು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಡಾ.ಶಶೀಶೇಖರ್ ದೀಕ್ಷೀತ್ ನೇತೃತ್ವದಲ್ಲಿ ಇಂದು ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ನಡೆದ ಬಳಿಕ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬೀಗ ಹಾಕಲಾಯಿತು. ಈ ಮೂಲಕ ಕೊನೆಯ ಆಷಾಢ ಶುಕ್ರವಾರ ನಿತ್ಯ ಪೂಜೆಗೆ ಸೀಮಿತವಾಯಿತು.
ಪ್ರತಿ ವರ್ಷ ಬೆಳಗ್ಗೆ 5.30ರಿಂದ ರಾತ್ರಿ 10ರವರೆಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಆದರೆ ಈ ಬಾರಿ ಇಂದು ಬೆಳಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನ ಮುಗಿಸಿ ಬೀಗ ಹಾಕಲಾಗಿದ್ದು, ಇಂದೂ ಕೂಡಾ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಪ್ರಸಾದ ವಿತರಣೆಗೂ ನಿರ್ಬಂಧ ಹೇರಲಾಗಿದ್ದು, ಇದರಿಂದಾಗಿ ಚಾಮುಂಡಿಬೆಟ್ಟದಲ್ಲಿ ಕೊನೆ ಶುಕ್ರವಾರವೂ ಕೂಡಾ ಭಕ್ತರಿಲ್ಲದೇ ಖಾಲಿ ಖಾಲಿಯಾಗಿದ್ದ ದೃಶ್ಯ ಕಂಡು ಬಂತು.
Key words: mysore- last –ashada Friday-chamundi hills-worship-devotees