ಮೈಸೂರು, ಏಪ್ರಿಲ್ 12,2024 (www.justkannada.in): ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರನ್ನ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಮಾಜಿ ಮೇಯರ್ ಗಳು ಮನವಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರಸ್ ಮಾಜಿ ಮಹಾಪೌರರ ಪರಿಷತ್ತಿನ ವತಿಯಿಂದ ಸುದ್ದಿಗೋಷ್ಠಿ ನಡೆಯಿತು. ಸಂಚಾಲಕರಾದ ನರಸಿಂಹ ಅಯ್ಯಂಗಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ನರಸಿಂಹ ಅಯ್ಯಂಗಾರ್, ಪುರುಷೋತ್ತಮ್, ಅಯೂಬ್ ಖಾನ್, ಭೈರಪ್ಪ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ, ಪುಷ್ಪಲತಾ ಜಗನ್ನಾಥ್, ಸೇರಿದಂತೆ ಹಲವರು ಭಾಗಿಯಾಗಿದ್ದರು.
ಮೈಸೂರು ನಗರಕ್ಕೆ ಅಗತ್ಯವಾಗಿ ಆಗಬೇಕಾದ ಪ್ರಮುಖ ಕಾರ್ಯಕ್ರಮಗಳು, ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಒತ್ತುಕೊಡುವ ನಿಟ್ಟಿನಲ್ಲಿ ಪ್ರಸ್ತಾಪ ಮಾಡಿದರು.
ಕಳೆದ 10 ವರ್ಷಗಳಿಂದ ಮೈಸೂರು ನಗರಕ್ಕೆ ಬಿಜೆಪಿ ಸರ್ಕಾರ ಏನು ಕೊಡುಗೆ ಕೊಟ್ಟಿದೆ. ಇದರ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಏನ್ ಮಾಡಿತ್ತು ಎಲ್ಲವನ್ನೂ ತುಲನೆ ಮಾಡಬೇಕು. ಮೋದಿ ಅವರು ಮೈಸೂರು ನಗರವನ್ನು ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು. ಅದು ಆಯ್ತಾ.? ಬರಿ ಸುಳ್ಳು ಹೇಳಿ ಹೋದರು. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 110 ಕೋಟಿ ಕೊಟ್ಟು ಕಬಿನಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಿದ್ದರು. ಯುಪಿಎ ಸರ್ಕಾರ ನಮಗೆ ಹೆಚ್ಚು ಅನುದಾನ ಕೊಟ್ಟಿದ್ದರು. ಆದರೆ ಮುಂದೆ ಬಂದ ಎನ್ ಡಿಎ ಸರ್ಕಾರ ಮೈಸೂರು ನಗರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿತು. ಮುಂದೆ ಮೈಸೂರು ನಗರದಲ್ಲಿ ಕುಡಿಯುವ ನೀರಿನ ಕಬಿನಿ 2ನೇ ಹಂತದ ಯೋಜನೆ ಆಗಬೇಕು, ಕಸ ವಿಲೇವಾರಿ ವೈಜ್ಞಾನಿಕ ನಿರ್ವಹಣೆಗೆ ಹೊರ ವಲಯದಲ್ಲಿ ಸ್ಥಳ ಗುರುತಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಹಾಗಾಗಿ ಈ ಎಲ್ಲಾ ಯೋಜನೆಗಳು ಜಾರಿಯಾಗಬೇಕು ಎಂದರೆ ನಮ್ಮ ಪಕ್ಷದ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಮಾಜಿ ಮೇಯರ್ ಗಳ ಸಹಮತ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಅಭಿವೃದ್ಧಿ ಶೂನ್ಯ. ಇವರ ಅವಧಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ ಅತ್ಯಾಚಾರ, ಭ್ರಷ್ಟಾಚಾರ, ಜಾತಿ ವೈಷಮ್ಯಗಳು ಹೆಚ್ಚಿದೆ. ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಆದ ಬೆಳವಣಿಗೆ ದೇಶದಲ್ಲಿ ಅಪಾರವಾಗಿದೆ. ಇನ್ನೊಮ್ಮೆ ಮೋದಿ ಸರ್ಕಾರ ಬಂದರೆ ಈ ದೇಶವನ್ನು 100 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮತದಾರರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು. ನಾವೆಲ್ಲರು ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
Key words: mysore, M.Laxman, former mayors