ಮೈಸೂರು,ಏಪ್ರಿಲ್,19,2021(www.justkannada.in): ಪೌರಕಾರ್ಮಿಕರ ಕುರಿತು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ. ಶಿವಣ್ಣ ಕಿಡಿಕಾರಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿದ ವಿಚಾರ ಕುರಿತು ಮಾತನಾಡಿದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ. ಶಿವಣ್ಣ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಅಲ್ಲಿ 45 ರಿಂದ 50 ಕುಟುಂಬಗಳ ಮನೆಗಳಿವೆ. ಅಲ್ಲಿಯ ಪೌರಕಾರ್ಮಿಕರ ಕಾಲೋನಿಯಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಕಾಲೋನಿ ದುಃಸ್ಥಿತಿ ಕುರಿತು ಸಾಕಷ್ಟು ದೂರುಗಳು ಬಂದಿತ್ತು. ಅಲ್ಲಿನ ನಿವಾಸಿಯೊಬ್ಬರು ಅಲ್ಲಿನ ಸಮಸ್ಯೆಗಳ ಕುರಿತು ವಿಡಿಯೋ ಮಾಡಿರುವುದು ನನ್ನ ಗಮನಕ್ಕೆ ಬಂದಿತ್ತು. ಅಲ್ಲಿನ ವಾಸ್ತವತೆ ಪರಿಶೀಲಿಸಲು ಭೇಟಿ ನೀಡಿ ಬಂದಿದ್ದೇನೆ. ಅಲ್ಲಿನ ಸ್ಥಿತಿ ನಿಜಕ್ಕೂ ಶೋಚನೀಯವಾದದ್ದು ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲಿನ ಪೌರಕಾರ್ಮಿಕರು ವಾಸ ಮಾಡುವುದಕ್ಕೆ ಯೋಗ್ಯವಲ್ಲದ ಮನೆಗಳು, ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಯಾರಿಗೂ ಹಕ್ಕುಪತ್ರ ದೊರಕಿಲ್ಲ. ಮಲ ಮೂತ್ರ ಹರಿಯುವ ಜಾಗದಲ್ಲೇ ವಾಸಿಸುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಅಲ್ಲಿನ ಜನ ವಂಚಿತರಾಗಿದ್ದಾರೆ ಎಂದು ಕಾಲೋನಿ ನಿವಾಸಿಗಳ ಸ್ಥಿತಿ ಕುರಿತು ಎಂ. ಶಿವಣ್ಣ ವಿಷಾದ ವ್ಯಕ್ತಪಡಿಸಿದರು.
ಇಓ ಅವರಿಗೆ ನಿರ್ದೇಶನ ನೀಡಿದ್ದೇನೆ. ಅಲ್ಲಿನ ಸ್ಥಿತಿ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಜಿಲ್ಲಾಧಿಕಾರಿ, ತಹಸೀಲ್ದಾರ್, ಇಓ, ಎಲ್ಲರನ್ನೂ ಸೇರಿಸಿಕೊಂಡು ಸಭೆ ನಡೆಸಿ ಅಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಲಾಗುವುದು. ಕಾಲೋನಿಯಲ್ಲಿ 65 ವರ್ಷ ಮೇಲ್ಪಟ್ಟ ಸಾಕಷ್ಟು ಜನರಿದ್ದಾರೆ. ಅವರಿಗೆ ಈ ಕೂಡಲೇ ವೃಧ್ಧಾಪ್ಯ ವೇತನ ನೀಡುವಂತೆ ಆದೇಶ ನೀಡಿದ್ದೇನೆ ಎಂದು ಎಂ.ಶಿವಣ್ಣ ಹೇಳಿದರು.
ಕೊರೊನಾದಿಂದ ಪೌರಕಾರ್ಮಿಕರು ತತ್ತರಿಸಿರುವ ಹಿನ್ನೆಲೆ, ಅವರಿಗೆ ಕೊರೊನಾ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಸದ್ಯದಲ್ಲೇ ಮೇಯರ್ ಜೊತೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತೇನೆ. ಬರೀ ಕೈಯಿಂದಲೇ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿರುವುದನ್ನು ಖುದ್ದು ನಾನೇ ಕಂಡಿದ್ದೇನೆ. ಪೌರಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲೂ ಸಿದ್ಧ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಇನ್ನೆರೆಡು ಮೂರು ದಿನಗಳಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪೌರಕಾರ್ಮಿಕರಿಗೆ ಕೊರೊನಾ ಸುರಕ್ಷತಾ ಪರಿಕರಗಳನ್ನು ನೀಡುವಂತೆ ಕೂಡಲೇ ನಿರ್ದೇಶಿಸುತ್ತೇನೆ ಎಂದು ಎಂ. ಶಿವಣ್ಣ ಹೇಳಿದರು.
Key words: mysore-M. Shivanna- against -officers – neglect -civic