ಶೂದ್ರರಂತೆ ಇಡೀ ಮಹಿಳಾ ಕುಲವನ್ನೂ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿತ್ತು: ಸಿ.ಎಂ ಸಿದ್ದರಾಮಯ್ಯ

ಮೈಸೂರು ನವೆಂಬರ್, 13,2024 (www.justkannada.in): ಶೂದ್ರರಂತೆ ಇಡೀ ಮಹಿಳಾ ಕುಲವನ್ನೂ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿತ್ತು. ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

170 ಕೋಟಿ ರೂಪಾಯಿ ವೆಚ್ಚದ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ವಸತಿ ನಿಲಯ ಕಟ್ಟಡ ಹಾಗೂ ವಿಜ್ಞಾನ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ  ಹಾಗೂ 49 ಕೋಟಿ ರೂ ವೆಚ್ಚದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 3,4 ನೇ ಅಂತಸ್ತಿನ ಕಟ್ಟಡ ಹಾಗೂ ವಸತಿ ನಿಲಯದ 3 ನೇ ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನೂ ನೆರವೇರಿಸಿ ಮಾತನಾಡಿದರು.

ಮಹಿಳೆಯರು ದುರ್ಬಲರಲ್ಲ. ಹಿಂದುಳಿದವರು ಅಷ್ಟೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯಕ್ರಮಗಳನ್ನು, ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ, ನೀವು ವಿದ್ಯಾರ್ಥಿನಿಯರು ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದೀರಿ ತಾನೇ ಎಂದು ಪ್ರಶ್ನಿಸಿದರು. ವಿದ್ಯಾರ್ಥಿನಿಯರು ಹೌದೂ ಎಂದು ಎರಡೂ ಕೈಗಳನ್ನು ಎತ್ತಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ 325 ಕೋಟಿ ಫ್ರೀ ಟಿಕೆಟ್ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಮಹಿಳೆಯರು, ಯುವತಿಯರು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಲು ಸಾಧ್ಯ ಎಂದರು.

ಮಹಿಳೆಯರಿಗೆ ಮೊದಲಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು ಬಸವಣ್ಣನವರಾದರೆ, ಶಿಕ್ಷಣ ಮಹಿಳೆಯರ ಹಕ್ಕಾಗಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರು. ಆದ್ದರಿಂದ ನೀವೆಲ್ಲಾ ಜಾತ್ಯತೀತರಾಗಿ, ವಿಶ್ವ ಮಾನವರಾಗಿ ಬೆಳೆದು ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ,  ಶಿಕ್ಷಣ ಕಲಿತೂ ಜಾತಿವಾದಿಗಳಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ.ತಿಮ್ಮಯ್ಯ, ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Key words: mysore, Maharani collage, CM, Siddaramaiah