ಮಂಡ್ಯ, ಅ.31, 2019 : ( www.justkannada.in news ) ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮನ್ಮುಲ್) ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡು, ವಾಹನ ಸವಾರರು ಪರದಾಡುವಂತಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ. 4 ರಂದು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಲು ಸಮಯ ನಿಗಧಿಯಾಗಿದೆ. ರೈತರ ಪಾಲಿಗೆ ಕರಾಳ ಶಾಸನವಾಗುವ ಈ ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು ಎಂದು ಆಗ್ರಹಿಸಿ ಈ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಹೈನೋದ್ಯಮದಲ್ಲಿ ಈಗಾಗಲೇ ಪ್ರಗತಿ ಸಾಧಿಸಿರುವ ದೇಶಗಳಾದ ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಿಂದ ತೆರೆಗೆ ರಹಿತವಾದ ಹಾಲು ಭಾರಿ ಪ್ರಮಾಣದಲ್ಲಿ ಭಾರತಕ್ಕಾಗಮಿಸಿದರೆ, ಇಲ್ಲಿನ ಹಾಲು ಉತ್ಪಾದಕರಿಗೆ ಹೊಡೆತ ಬಿಳುತ್ತದೆ ಎಂಬುದು ರೈತರ ಆತಂಕಕ್ಕೆ ಕಾರಣ.
ಆದ್ದರಿಂದಲೇ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಮಾರಾಟ ಪ್ರತಿನಿಧಿಗಳ ಜೊತೆಗೆ ರೈತರು ಮತ್ತು ವಿವಿಧ ಸಹಕಾರ ಸಂಘಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ಬಾಡಿಗೆ ಬಸ್ ಗಳಲ್ಲಿ ಆಗಮಿಸಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ಪರಿಣಾಮ ಎರಡು ಗಂಟೆಗಳ ಕಾಲ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿತ್ತು. ಸುಮಾರು ಮೂರು ಕಿ.ಮೀ. ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲ ವಾಹನಗಳ ಸವಾರರು ಬದಲಿ ಮಾರ್ಗ ಹುಡುವಷ್ಟರಲ್ಲೇ ಹೈರಾಣಾದರು.
key words : mysore-mandya-protest-formers-against-RCEP-modi