ಮೈಸೂರು,ಫೆಬ್ರವರಿ,27,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಶಾಸಕ ಜಿಟಿ ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಗೈರಾಗಿ ಮತ ಚಲಾಯಿಸದೇ ಇರುವುದಕ್ಕೆ ನಗರದ ಜೆಡಿಎಸ್ ಮುಖಂಡರು ಗರಂ ಆಗಿದ್ದು ಇಬ್ಬರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಜಿಟಿ ದೇವೇಗೌಡರಿಗೆ ಕೆಲಸ ಆಗಬೇಕು, ಅವರಿಗೆ ಕುಟುಂಬವೊಂದಿದ್ದರೆ ಸಾಕು ಅವರಿಗೆ ಯಾವುದೇ ಪಕ್ಷವಿಲ್ಲ. ಸಾರ್ವಜನಿಕವಾಗಿ ಕೆಲಸ ಮಾಡುವುದನ್ನು ಬಿಟ್ಟು ಕುಟುಂಬಕ್ಕೆ ಕೆಲಸ ಮಾಡಲು ಜಿಟಿ ದೇವೇಗಗೌಡರು ಶಾಸಕರಾಗಿದ್ದಾರೆ ಎಂದು ಕಿಡಿಕಾರಿದರು.
ಶಾಸಕ ಜಿಟಿಡಿಗೆ ಚಲುವೇಗೌಡ ಒಪನ್ ಚಾಲೆಂಜ್…
ಇದೇ ವೇಳೆ ಶಾಸಕ ಜಿಟಿಡಿಗೆ ಒಪನ್ ಚಾಲೆಂಜ್ ಹಾಕಿದ ಚಲುವೇಗೌಡ, ಮೊದಲು ರಾಜೀನಾಮೆ ನೀಡಿ ನಂತರ ಜೆಡಿಎಸ್ ಪಕ್ಷದ ಕುರಿತು ಮಾತನಾಡಲಿ. ಸ್ವತಂತ್ರವಾಗಿ ಗೆಲ್ಲುವುದಿದ್ದರೆ ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಲಿ ಎಂದು ಓಪನ್ ಚಾಲೆಂಜ್ ಹಾಕಿದರು.
ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಹೈಕಮಾಂಡ್ ಅವರನ್ನು ದೂರವಿಡುವ ಕೆಲಸ ಮಾಡಬೇಕು. ಅವರಿಬ್ಬರಿಗೂ ಪಕ್ಷ ನಿಷ್ಠೆಯಿಲ್ಲ. ಅವರಿಬ್ಬರನ್ನೂ ಪಕ್ಷದಿಂದ ಅಮಾನತುಗೊಳಿಸಬೇಕು. ಜಿಟಿಡಿ ಹಾಗೂ ಸಂದೇಶ್ ನಾಗರಾಜ್ ಅವರನ್ನು ಅಮಾನತು ಪಡಿಸದಿದ್ದರೆ ಜೆಡಿಎಸ್ ನಗರ ಹಾಗೂ ಗ್ರಾಮಾಂತರ ಮುಖಂಡರುಗಳ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಎಚ್ಚರಿಕೆ ನೀಡಿದರು.
ವಿರೋಧ ಪಕ್ಷದ ಸ್ಥಾನದಲ್ಲಿ ಕೂರೂವುದಕ್ಕೂ ಜೆಡಿಎಸ್ ಸಿದ್ಧವಿತ್ತು…
ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಡೆ ಬಗ್ಗೆ ವಿವರಿಸಿದ ಚಲುವೇಗೌಡರು, ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ನಿಲುವು ಬೇರೆಯದ್ದೆ ಇತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಹೋಗಬಾರದೆಂದು ನಿರ್ಧರಿಸಿದ್ದೆವು. ವಿರೋಧಪಕ್ಷದ ಸ್ಥಾನದಲ್ಲಿ ಕೂರೂವುದಕ್ಕೂ ಜೆಡಿಎಸ್ ಸಿದ್ಧವಿತ್ತು. ಜೊತೆಗೆ ಮೇಯರ್ ಚುನಾವಣೆಯಲ್ಲಿ ನಾವು ಯಾವ ಪಕ್ಷಕ್ಕೂ ಭರವಸೆ ನೀಡಿರಲಿಲ್ಲ. ನಮ್ಮ ಪಕ್ಷದ ಅಲ್ಪಸಂಖ್ಯಾತ ಸದಸ್ಯರು ಬಿಜೆಪಿ ಕೋಮುವಾದಿ ಪಕ್ಷ ಹಾಗಾಗಿ ಆ ಪಕ್ಷಕ್ಕೆ ಬೆಂಬಲ ಬೇಡವೆಂದರು. ಹಾಗಾಗಿ ಕೊನೆಗಳಿಗೆಯಲ್ಲಿ ಶಾಸಕ ತನ್ವೀರ್ ಸೇಠ್ ಹಾಗೂ ಧ್ರುವನಾರಾಯಣ್ ಕೋಮವಾದಿ ಬಿಜೆಪಿ ಪಕ್ಷವನ್ನು ದೂರವಿಡುವ ದೃಷ್ಟಿಯಿಂದ ತೀರ್ಮಾನ ಮಾಡಿ ನಮಗೆ ಮೇಯರ್ ಪಟ್ಟ, ಕಾಂಗ್ರೆಸ್ ಪಕ್ಷಕ್ಕೆ ಉಪ ಮೇಯರ್ ಸಿಗಲು ಕಾರಣರಾದರು ಎಂದು ತಿಳಿಸಿದರು.
Key words: mysore-mayor-election- GT Devegowda- sandesh nagaraju- suspend-JDS-KT Cheluvegowda