ಮೈಸೂರು,ಜೂನ್,11,2021(www.justkannada.in): ಮೈಸೂರು ಮೇಯರ್ ಚುನಾವಣೆಗೆ ತಡೆಯಾಜ್ಞೆ ತಂದ ಪಾಲಿಕೆ ಕಾಂಗ್ರೆಸ್ ಸದಸ್ಯ ಪ್ರದೀಪ್ ಚಂದ್ರ ಅವರಿಗೆ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಡಿ ಕಾರಣ ಕೇಳಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಸದಸ್ಯ ಪ್ರದೀಪ್ ಚಂದ್ರ ಅವರಿಗೆ ನೋಟೀಸ್ ಜಾರಿ ಮಾಡಿರುವ ಆರ್. ಮೂರ್ತಿ, ದಿನಾಂಕ 11.06.2021 ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಿಗದಿಯಾಗಿದ್ದು, ದಿನಾಂಕ 09.06.2021 ರಂದು ಸಾಯಂಕಾಲ 5 ಗಂಟೆಗೆ ನಗರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹೈಕಮಾಂಡ್ ಸೂಚನೆಯ ಮೇರೆಗೆ ಕಾರ್ಯಾಧ್ಯಕ್ಷರು ಮತ್ತು ನಗರ ಶಾಸಕರು ಹಾಗೂ ಮಾಜಿ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಾವು ಭಾಗವಹಿಸಿ ಪಕ್ಷದ ವಿಪ್ ಅನ್ನು ಕೂಡ ಸ್ವೀಕರಿಸಿದ್ದೀರಿ. ಅಂದಿನ ಸಭೆಯಲ್ಲಿ ಮೇಯರ್ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಗರಪಾಲಿಕೆ ಸದಸ್ಯರ ಮುಕ್ತ ಅಭಿಪ್ರಾಯವನ್ನು ಕೂಡ ಕೇಳಲಾಗಿದ್ದು, ತಾವು ಭಾಗವಹಿಸಿ ‘ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿರುತ್ತೀರಿ. ಆದರೆ ದಿನಾಂಕ 10.06.2021 ರಂದು ಹೈಕೋರ್ಟ್ನಿಂದ ಪಾಲಿಕೆ ಮೇಯರ್ ಚುನಾವಣೆಗೆ ತಡೆಯಾಜ್ಞೆ ತಂದಿದ್ದೀರಿ.
ಈ ವಿಚಾರ ಪಕ್ಷದ ಹೈಕಮಾಂಡ್ ಗೆ ಮತ್ತು ನಮ್ಮೆಲ್ಲಾ ಮುಖಂಡರಿಗೆ ಆಶ್ಚರ್ಯ ಹಾಗೂ ಆಘಾತ ವಿಷಯವಾಗಿದ್ದು, ನಗರದ ಜನತೆಯು ಈ ತಡೆಯಾಜ್ಞೆಯನ್ನು ಕಾಂಗ್ರೆಸ್ ಪಕ್ಷದ ತೀರ್ಮಾನವೆಂದು ಭಾವಿಸಿರುವುದು ಭಾರೀ ಮುಜುಗರ ಉಂಟುಮಾಡಿದೆ. ಇಂತಹ ಪಕ್ಷ ವಿರೋಧಿ ಚಟುವಟಿಕೆಗಳನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸಲ್ಲ. ತಾವು ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಗೆಲುವನ್ನು ಸಾಧಿಸಿದ್ದು, ನಿಮ್ಮ ವಾರ್ಡ್ನಲ್ಲಿ ಟಿಕೆಟ್ ನೀಡುವಾಗ ಇತರೆ ಕಾಂಗ್ರೆಸ್ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದ್ದರೂ ಸಹ, ನೀವು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೀರಿ ಎಂಬ ಭರವಸೆಯನ್ನಿಟ್ಟು, ನಿಮಗೇ ಟಿಕೆಟ್ ನೀಡಿ ಗೆಲುವನ್ನು ಸಾಧಿಸಲು ಪಕ್ಷವು ಸಹಕರಿಸಿದ್ದರೂ ಸಹ ನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದೀರಿ ಎಂದು ಭಾವಿಸಿ, ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂದು ನೋಟೀಸನ್ನು ಜಾರಿ ಮಾಡಲಾಗಿದೆ.
ನೀವು ಈ ನೋಟೀಸ್ ಜಾರಿಯಾದ 3 ದಿನದೊಳಗೆ ನಿಮ್ಮ ಉತ್ತರ ನೀಡಬೇಕೆಂದು ಸೂಚಿಸಲಾಗಿದೆ. ನಿಮ್ಮಿಂದ ಸೂಕ್ತವಾದ ಸಮಜಾಯಿಷಿ ಬರದಿದ್ದಲ್ಲಿ ಕಾನೂನಿನಡಿ ನಿಮ್ಮನ್ನು ಅಮಾನತ್ತು ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆರ್. ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
Key words: mysore- mayor- election- stay-Congress -issued -notice -member