ಮೈಸೂರು, ಆ.01, 2020 : ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು ‘ಕನ್ನಡ ಪ್ರಭ’ ಪತ್ರಿಕೆಯ ಮೈಸೂರು ಕಚೇರಿಯಲ್ಲಿ ಬರೋಬ್ಬರಿ 25 ವರ್ಷಗಳ ನಿರಂತರ ಕರ್ತವ್ಯ ನಿಭಾಯಿಸಿದ್ದಾರೆ.
ಪತ್ರಕರ್ತ, ಲೇಖಕ, ಉಪನ್ಯಾಸಕ ಹೀಗೆ ಹತ್ತು ಹಲವು ಬಹುಮುಖ ಪ್ರತಿಭೆ ಹೊಂದಿರುವ ಅಂಶಿ ಪ್ರಸನ್ನ ಅವರು ಪತ್ರಿಕಾ ಕ್ಷೇತ್ರದಲ್ಲಿನ ತಮ್ಮ ನಡವಳಿಕೆ ಮೂಲಕ ಪತ್ರಕರ್ತರು ಹಾಗೂ ಪತ್ರಿಕೋಧ್ಯಮ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ರೋಲ್ ಮಾಡಲ್ ಎನಿಸಿದ್ದಾರೆ.
ಮೈಸೂರಿನ ಅಂದೋಲನ ಪತ್ರಿಕೆಗೆ 1987 ರಲ್ಲಿ ಸೇರ್ಪಡೆಗೊಂಡು ವೃತ್ತಿ ಆರಂಭಿಸಿದ ಅಂಶಿ ಪ್ರಸನ್ನಕುಮಾರ್, 1995 ರ ವರೆಗೆ ಕರ್ತವ್ಯ ನಿರ್ವಹಿಸಿದರು. ಆನಂತರ 1.8.1995 ರಂದು ಕನ್ನಡಪ್ರಭ ಪತ್ರಿಕೆಯ ಮೈಸೂರು ಆವೃತ್ತಿಗೆ ಸೇರ್ಪಡೆಗೊಂಡರು. ಅಲ್ಲಿಂದ ಈತನ ನಿರಂತರವಾಗಿ ಒಂದೇ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಅಂಶಿ ಪ್ರಸನ್ನ ವೃತ್ತಿಯಲ್ಲಿ ಮುಂದುವರೆದಿರುವುದು ವಿಶೇಷ.
ಸತ್ಯದೇವ್ ಕೊಲೆ ಪ್ರಕರಣ ಬೆನ್ನಟ್ಟಿದ್ದು , ವರನಟ ಡಾ. ರಾಜ್ ಕುಮಾರ್ ಅಪಹರಣ, ಮಾಜಿ ಸಚಿವ ಎಚ್.ನಾಗಪ್ಪ ಕಿಡ್ನ್ಯಾಪ್ ಪ್ರಕರಣಗಳ ಫಾಲೋಅಪ್ ಮಾಡಿದ್ದು , 60 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜತೆಗೆ 83 ನೇ ಕನ್ನಡ ಸಾಹಿತ್ಯ ಸಮ್ಮೇಳನಗಳೆರಡನ್ನು ಕವರ್ ಮಾಡಿದ್ದು, ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದ ವರದಿ…ಹೀಗೆ ಹತ್ತು ಹಲವು ವಿಶೇಷತೆಗಳು ಅಂಶಿ ಪ್ರಸನ್ನ ಅವರ ಅನುಭವದ ಮೂಸೆಯಲ್ಲಿವೆ.
2006 ಡಿಸೆಂಬರ್ ನಲ್ಲಿ ಅಂಶಿ ಪ್ರಸನ್ನ ಅವರು ಬರೆದ, ‘ತಮಿಳು ಅಳಿಸಿ, ಕನ್ನಡ ಉಳಿಸಿ’ ಸ್ಟೋರಿ ಲೋಕಸಭೆಯಲ್ಲೂ ಸದ್ದು ಮಾಡಿದ್ದು ವಿಶೇಷ. ರೈಲು ಟಿಕೆಟ್ ಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆ ಮಾತ್ರ ಮುದ್ರಣಗೊಳ್ಳುತ್ತಿತ್ತು. ಇದರ ವಿರುದ್ಧ ಅಂಶಿಪ್ರಸನ್ನ ಬರೆದ ವರದಿ ಕರ್ನಾಟಕದಲ್ಲಿ ಜಾಗೃತಿಯ ಅಲೆ ಎಬ್ಬಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದವು. ಜತೆಗೆ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದು ಪ್ರತಿಧ್ವನಿಸಿ, ಕೇಂದ್ರ ರೈಲ್ವೆ ಇಲಾಖೆಯ ಮಲತಾಯಿ ಧೋರಣೆ ಬಗ್ಗೆ ಖಂಡನ ನಿರ್ಣಯ ಕೈಗೊಳ್ಳಲಾಯಿತು. ಕಡೆಗೆ ಕರ್ನಾಟಕದ ಸಂಸದರು ದಿಲ್ಲಿಯಲ್ಲಿ ದನಿದ ಕಾರಣ, ಅಂದಿನ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರೇ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿ, ಸ್ಥಳೀಯ ಭಾಷೆಯನ್ನು ಟಿಕೆಟ್ ಮೇಲೆ ಮುದ್ರಿಸುವ ಸೂಚನೆ ನೀಡಿದರು.
ಈ ತನಕ ಹಲವಾರು ಕ್ಷೇತ್ರಗಳಲ್ಲಿನ ಸಾಧಕರು, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಅಂಶಿ ಪ್ರಸನ್ನ ಮಾಧ್ಯಮ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ. ಕರ್ನಾಟಕ ರಾಜ್ಯ ಸರಕಾರದ ಅಭಿವೃದ್ಧಿ ಪತ್ರಿಕೋಧ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ 30ಕ್ಕೂ ಹೆಚ್ಚು ಪ್ರಶಸ್ತಿಗಳು ಅಂಶಿಪ್ರಸನ್ನ ಅವರ ಮುಡಿಗೇರಿವೆ.
ಪತ್ರಕರ್ತರಿಗೆ ಸಮಯ ಸರಿದೂಗಿಸುವುದೇ ಸಮಸ್ಯೆ. ಈ ಪರಿಸ್ಥಿತಿಯ ನಡೆವೆಯೂ ಅಂಶಿ ಪ್ರಸನ್ನ ಅವರು, ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಆಮೂಲಕ ತಮಗಿರುವ ಅಕ್ಷರ ಪ್ರೀತಿಯನ್ನು ಮೆರೆದಿದ್ದಾರೆ. ಈತನಕ ಒಟ್ಟು 19 ಪುಸ್ತಕಗಳು ಮುದ್ರಣಗೊಂಡಿದ್ದರೆ, 2 ಪುಸ್ತಕಗಳು ಮುದ್ರಣದ ಹಂತದಲ್ಲಿವೆ. ಇನ್ನು 10 ಪುಸ್ತಕಗಳು ಸಿದ್ಧತಾ ಹಂತದಲ್ಲಿವೆ.
ಮಾಧ್ಯಮಕ್ಷೇತ್ರದಲ್ಲಿ ಅಂಶಿ ಪ್ರಸನ್ನ ಅವರ ಸಾಧನೆ ಹಾಗೂ ಕೊಡುಗೆ ಪರಿಗಣಿಸಿ 1000 ಕ್ಕೂ ಹೆಚ್ಚು ಸನ್ಮಾನಗಳಾಗಿವೆ. 4000 ಕ್ಕೂ ಹೆಚ್ಚು ಬೈಲೈನ್ ಸ್ಟೋರಿಗಳು ಪ್ರಕಟವಾಗಿವೆ. ಒರ್ವ ಪತ್ರಕರ್ತನನ್ನು ಸಮಾಜ ಗುರುತಿಸುವುದು ಅವರ ಸ್ಟೋರಿಗಳ ಮೂಲಕವೇ. ಆದ್ದರಿಂದಲೇ ಪತ್ರಕರ್ತರ ಉಮ್ಮಸ್ಸು ಇಮ್ಮಡಿಗೊಳ್ಳುವುದು. ಈ ನಿಟ್ಟಿನಲ್ಲಿ ಅಂಶಿ ಪ್ರಸನ್ನ ಅವರಿಗೆ ಅವರೇ ಸಾಟಿ.
ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಕುರಿತು ಅಂಶಿ ಪ್ರಸನ್ನ ಬರೆದ ವರದಿಯ ಫಲಶೃತಿಯಾಗಿ ಹಲವಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡಿದೆ. ಈ ಪೈಕಿ ಶಿವಕುಮಾರ್, ಭಾಗ್ಯರಾಜ್ ಹಾಗೂ ದಿವ್ಯಶ್ರೀ ಎಂಬುವವರು ಇಂಜಿನಿಯರಿಂಗ್ ಪೂರ್ಣಗೊಳಿಸಲು ಆರ್ಥಿಕ ನೆರವು ಲಭಿಸಿದ್ದು ಪ್ರಮುಖ ಅಂಶ.
ಸಮಾಜದ ವಿವಿಧ ಕ್ಷೇತ್ರದ ಗಣ್ಯರು ಅಂಶಿ ಪ್ರಸನ್ನ ಅವರ ವರದಿಗೆ ಸ್ಪಂಧಿಸಿ ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಈ ಆರ್ಥಿಕ ನೆರವು ನೀಡಿದವರ ಪಟ್ಟಿಯಲ್ಲಿರುವುದು ವಿಶೇಷ. ದರ್ಶನ್ ನೆರವಿನಿಂದ ಬಡ ವಿದ್ಯಾರ್ಥಿ ಮಹಾದೇವಸ್ವಾಮಿ ಎಂಬುವವರು ಮೆಡಿಕಲ್ ವ್ಯಾಸಂಗ ಮುಗಿಸಿ ಈಗ ವೈದ್ಯ ವೃತ್ತಿಯಲ್ಲಿದ್ದಾರೆ.
ooooo
key words : mysore-media-journalist-25.years-kannada.prabha-amshi.prasanna