ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಸದ್ಯಕ್ಕೆ ಕೇಂದ್ರದಲ್ಲಿ ಪರಿಹಾರ ಕೇಳುವ ಸ್ಥಿತಿ ಇಲ್ಲ- ಸಚಿವ ಕೃಷ್ಣಬೈರೇಗೌಡ

ಮೈಸೂರು,ಜುಲೈ,2, 2024 (www.justkannada.in):  ರಾಜ್ಯದ 31 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಮಳೆಯಾಗಿದೆ. 31 ಜಿಲ್ಲೆಗಳಲ್ಲಿ 208 ಮಿಮಿ ವಾಡಿಕೆ ಮಳೆಯ ನಿರೀಕ್ಷೆ ಇತ್ತು. ಇಡಿ ರಾಜ್ಯದ್ಯಂತ 205ಮಿಮಿ ಮಳೆ ಆಗಿದೆ. ಸದ್ಯಕ್ಕೆ ಕೇಂದ್ರದಲ್ಲಿ ಪರಿಹಾರ ಕೇಳುವ ಸ್ಥಿತಿ ಇಲ್ಲ  ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಮೈಸೂರಿನ ಮೈಸೂರು ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರು  ಪ್ರಗತಿ ಪರಿಶೀಲನಾ ಸಭೆ ನಡೆಸಿ ಚರ್ಚಿಸಿದರು.  ಸಭೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಮಂಗಳೂರು, ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.  ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಹಿನ್ನೆಲೆ. ಮುಂಜಾಗ್ರತಾ ಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಸಚಿವ ಕೃಷ್ಣಭೈರೇಗೌಡ,  ಮಳೆಯಿಂದಾಗಿ ಜನಸಾಮಾನ್ಯರ ಆಸ್ತಿ, ಪ್ರಾಣಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳ ಸಭೆ ಕರೆದಿದ್ದೇವೆ. ಜೊತೆಗೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಹಿನ್ನೆಲೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಒಂಭತ್ತು ಜಿಲ್ಲೆಯ ಡಿಸಿ, ತಹಸೀಲ್ದಾರ್ ಗಳ ಸಭೆ ಮಾಡುತ್ತಿದ್ದೇವೆ. ಮಳೆಯಿಂದ ಯಾವುದೇ ಹಾನಿಯಾಗದ ರೀತಿಯಲ್ಲಿ ಕ್ರಮ ವಹಿಸಲು ಸಿದ್ದಗುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಸರಕಾರಿ ಜಾಗಗಳ ರಕ್ಷಿಸುವ ಸರ್ವೆ ಶುರುವಾಗಿದೆ. ಒಟ್ಟು 14 ಲಕ್ಷ ಸರಕಾರಿ ಜಾಗಗಳಿವೆ. ಇವುಗಳಲ್ಲಿ ಒತ್ತುವರಿ ಎಷ್ಟು ಆಗಿದೆ ಎಂಬ ಸರ್ವೆ ಶುರು ಮಾಡಿದ್ದೇವೆ. ಜುಲೈ ಅಂತ್ಯಕ್ಕೆ ಸರ್ವೆ ಮುಗಿಯಲಿದೆ. ನಂತರ ಒತ್ತುವರಿ ತೆರವು ಆರಂಭಿಸುತ್ತೇವೆ. ಸಾರ್ವಜನಿಕವಾಗಿ ಒತ್ತುವರಿ ಜಾಗದ ವಿಚಾರ ತಿಳಿಸಿ ತೆರವು ಮಾಡ್ತಿವಿ. ರಾಜ್ಯದಲ್ಲಿ ಈಗ ಸಮೃದ್ಧಿಯಾದ ಮಳೆಯಾಗಿದೆ. ಇದುವರೆಗೂ ಒಟ್ಟು 20 ಜನ ಮೃತಪಟ್ಟಿದ್ದಾರೆ. ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದೆ. ಸದ್ಯಕ್ಕೆ ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ. ಮುಂದೆ ಮಳೆ ಹೆಚ್ಚಾಗಿ ನಷ್ಟ ಹೆಚ್ಚಾದರೆ ಪರಿಹಾರ ಕೇಳ್ತಿವಿ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಡಿಸಿಎಂ ವಿಚಾರ ಪರೋಕ್ಷವಾಗಿ ಸಚಿವ ರಾಜಣ್ಣ ವಿರುದ್ದ ಅಸಮಾಧಾನ

ಡಿಸಿಎಂ ವಿಚಾರ ಪರೋಕ್ಷವಾಗಿ ಸಚಿವ ರಾಜಣ್ಣ ವಿರುದ್ದ ಅಸಮಾಧಾನ ಹೊರ ಹಾಕಿದ ಸಚಿವ ಕೃಷ್ಣ ಭೈರೇಗೌಡ, ಯಾರಿಗಾದರೂ ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನು ಪಕ್ಷದ ವರಿಷ್ಠರ ಬಳಿ ಕೇಳಬೇಕು. ಮಾಧ್ಯಮದವರ ಮುಂದೆ ತಮ್ಮ ಆಸೆ ಹೇಳಿಕೊಂಡರೆ ಏನೂ ಪ್ರಯೋಜನ ಹೇಳಿ? ನಿಮ್ಮ‌ ಮುಂದೆ ಹೇಳಿಕೊಂಡರೆ ನೀವೇನಾದರೂ ಸ್ಥಾನ ಕೊಡಿಸ್ತಿರಾ? ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚೆ ಮಾಡಬೇಕು. ಮಾಧ್ಯಮದ ಬಳಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರೆ ಅದರಿಂದ ಸರಕಾರಕ್ಕೂ ಒಳ್ಳೆಯದು ಜನರಿಗೂ ಒಳ್ಳೆಯದು. ಆ ವಿಚಾರ ಬಿಟ್ಟು ವೈಯಕ್ತಿಕ ವಿಚಾರ ಚರ್ಚೆ ಮಾಡಿದರೆ ಅದು ಸರಕಾರಕ್ಕೆ ನಷ್ಟ. ಡಿಸಿಎಂ ಸ್ಥಾನದ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸ್ಥಾನದ ಆಕಾಂಕ್ಷೆ ಇರೋರು ಸರಿಯಾದ ವ್ಯಕ್ತಿಗಳ ಬಳಿ ಹೋಗಿ ವಿಚಾರ ಹೇಳಲಿ. ನಮ್ಮ ನಾಯಕರು ಎಚ್ಚರಿಕೆ ಕೊಟ್ಟ ಮೇಲೂ ಕೆಲವರು ಈ ವಿಚಾರದ ಬಗ್ಗೆ ಮಾತಾಡ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು. ಆದರೆ ಅವರು ಎಲ್ಲವನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಡಿಕೆಶಿ ಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೃಷ್ಣ ಭೈರೇಗೌಡ, ಸ್ವಾಮೀಜಿ ಗಳು ಯಾವ ವಿಚಾರವನ್ನು ಎಲ್ಲಿ ಮಾತಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರಕಾರಿ ಸಮಾರಂಭಕ್ಕೆ ಬಂದು ರಾಜಕೀಯ ವಿಚಾರ ಮಾತಾಡಿದರೆ ಹೇಗೆ? ಸ್ವಾಮೀಜಿ ತಮ್ಮ ಮಠದಲ್ಲಿ ಆ ವಿಚಾರ ಮಾತಾಡಲಿ. ತಮ್ಮ ಭಕ್ತರ ಮುಂದೆ ಅದನ್ನು ಹೇಳಲಿ. ಯಾರಿಗೆ ಯಾವ ವಿಚಾರ ಎಲ್ಲಿ ಮಾತಾಡಬೇಕು ಎಂದು ಹೇಳುವ ಸ್ಥಿತಿ ಬಂದಿದ್ದೆ ಬೇಸರದ ವಿಚಾರ. ಸ್ವಾಮೀಜಿ ಹೇಳಿಕೆಗಳು ಅದರ ಪ್ರತಿ ಹೇಳಿಕೆಗಳು ನನ್ನಲ್ಲಿ ಅನೇಕ ಜಿಜ್ನಾಸೆ ಮೂಡಿಸಿವೆ. ಸ್ವಾಮೀಜಿಗಳ ಹೇಳಿಕೆಗೆ ವ್ಯಾಖ್ಯಾನ ನೀಡೋದಿಕ್ಕೆ ಹೋಗೋದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

 

Key words: mysore, Meeting, minister-Krishnabairegowda