ಮೈಸೂರು,ಜೂನ್,16,2021(www.justkannada.in): ನಮ್ಮಲ್ಲಿ ಯಾವುದೇ ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ. ಯಾರು ಕೃತಕ ಅಭಾವ ಸೃಷ್ಟಿಸುತ್ತಾರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಸಚಿವ ಬಿ.ಸಿ ಪಾಟೀಲ್ ಅವರು ಮುಂಗಾರು ಹಂಗಾಮಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕೈಪಿಡಿ ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕರಾದ ಕೆ.ಮಹದೇವ್, ಹರ್ಷವರ್ಧನ್, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಕೃಷಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆ ವಿಚಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ , ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆ ಇದೆ ಎಂದು ಸುದ್ದಿಯಾಗುತ್ತಿದೆ. ಆದರೆ ಕೃಷಿ ಇಲಾಖೆಯಲ್ಲಿ ಕೊರತೆ ಇಲ್ಲ ಎಂದು ಹೇಳುತ್ತಿದ್ದೀರಿ. ಮತ್ತೇಕೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಹಾಂತೇಶಪ್ಪಗೆ ಅವರಿಗೆ ಪ್ರಶ್ನಿಸಿದರು.
ಎಲ್ಲ ಮಾಹಿತಿಗಳನ್ನ ಮಾಧ್ಯಮದವರೊಂದಿಗೆ ಹಂಚಿಕೊಳ್ಳಬೇಕು. ಹಾಗಾದರೆ ಮಾತ್ರ ರೈತರಿಗೆ ಮಾಹಿತಿ ತಿಳಿಯುತ್ತದೆ. ತಾಲ್ಲೂಕು ಮಟ್ಟದಿಂದಲೂ ಆಗಿದ್ದಾಗಿನ ಮಾಹಿತಿಯನ್ನ ಮಾಧ್ಯಮದವರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಬಿಸಿ ಪಾಟೀಲ್ ಸಲಹೆ ನೀಡಿದರು.
ಈ ವೇಳೆ ಎಲ್ಲ ಹಂತದ ಅಧಿಕಾರಿಗಳು ವಾರ್ತಾ ಇಲಾಖೆಯ ಸಹಾಯದಿಂದ ಪತ್ರಿಕಾ ಪ್ರಕಟಣೆ ನೀಡಿ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೂಚನೆ ನೀಡಿದರು.
ನಂತರ ಮಾತನಾಡಿದ ಸಚಿವ ಬಿಸಿ ಪಾಟೀಲ್, ನಮ್ಮಲ್ಲಿ ಯಾವುದೇ ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ. ಇದು ಕೃತಕವಾಗಿ ಅಭಾವ ಸೃಷ್ಟಿ ಮಾಡುವ ಉದ್ದೇಶ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೈಸೂರಿನಲ್ಲಿ ಈಗಾಗಲೇ ನಾಲ್ಕು ಕೇಸ್ ದಾಖಲಾಗಿದೆ. ಹಲವರು ಅಕ್ರಮವಾಗಿ ಗೋದಾಮಿನಲ್ಲಿ ಇಟ್ಟು ಅಭಾವ ಸೃಷ್ಟಿಸಿದ್ದಾರೆ. ಇದರಿಂದ ರೈತರು ಕ್ಯೂ ನಲ್ಲಿ ನಿಲ್ಲುವ ಸಮಸ್ಯೆ ಉಂಟಾಗುತ್ತಿದೆ ಎಂದರು.
ಬಳ್ಳಾರಿಯಲ್ಲಿ ನಡೆದ ಘಟನೆ ನಮ್ಮ ಇಲಾಖೆ ವ್ಯಾಪ್ತಿಗೆ ಬರೋದಿಲ್ಲ. ಅದು ಖಾಸಗಿ ಸಂಸ್ಥೆಯವರು ಮಾಡಿದ ಸಮಸ್ಯೆ. ಕೃತಕ ಅಭಾವ ಸೃಷ್ಟಿಸುವ ಉದ್ದೇಶದಿಂದ ಹೀಗೆ ಆಗಿದೆ. ಯಾರು ಕೃತಕ ಅಭಾವ ಸೃಷ್ಟಿಸುತ್ತಾರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಸಿ ಪಾಟೀಲ್ ತಿಳಿಸಿದರು.
Key words: mysore-Minister- BC Patil- Progress -review -meeting