ಮೈಸೂರು,ನವೆಂಬರ್ ,11,2020(www.justkannada.in): ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ಮುಗಿದು ಬಿಜೆಪಿ ಗೆಲುವಿನ ನಗೆ ಬೀರಿದ್ದು ಈ ನಡುವೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಕುರಿತು ಚರ್ಚೆ ನಡೆಯುತ್ತಿದೆ.
ಈ ಮಧ್ಯೆ ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್, ಸಂಪುಟ ಪುನರ್ ರಚನೆ ಉಸಾಬರಿ ನಮಗ್ಯಾಕೆ ಎಂದಿದ್ದಾರೆ. ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಏನು ಮಾಡಬೇಕೆಂಬುದು ಸಿಎಂ ಪರಮಾಧಿಕಾರ. ಆ ವಿಚಾರದಲ್ಲಿ ನಾವು ನೀವು ಮಾತನಾಡೋದು ಏನಿದೆ. ಮುಖ್ಯಮಂತ್ರಿಗಳು ಈಗಾಗಲೇ ಪುನರ್ ರಚನೆ ಮಾಡ್ತೀನಿ ಅಂತ ಹೇಳಿದ್ದಾರೆ. ದೆಹಲಿಗೆ ತೆರಳುವ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಆರೋಗ್ಯ ಸಚಿವರಿಗೆ ಗೊತ್ತಿಲ್ವಂತೆ ಹಸಿರು ಪಟಾಕಿ ಅಂದ್ರೇನು ಅಂತ..!
ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸಲು ನಿಷೇಧ ಹೇರಲಾಗಿದೆ. ಆದರೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಹಸಿರು ಪಟಾಕಿ ಅಂದ್ರೇನು ಅಂತ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ತಿಳಿದುಕೊಂಡು ಹೇಳ್ತಿನಿ. ಪಟಾಕಿ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ಮಾರ್ಗಸೂಚಿ ವರದಿ ಬಂದಿತ್ತು. ಅದನ್ನ ಸಿಎಂ ಗಮನಕ್ಕೆ ತಂದು ಸರ್ಕಾರಕ್ಕೆ ಸಲ್ಲಿಸಿದ್ದೆ. ಆ ನಂತರ ಸಿಎಂ ಹಸಿರು ಪಟಾಕಿ ಸಿಡಿಲು ಅನುಮತಿ ನೀಡಿದ್ದಾರೆ. ಆದ್ರೆ ಹಸಿರು ಪಟಾಕಿ ಅಂದ್ರೇನು ಅಂತ ನನಗು ಗೊತ್ತಿಲ್ಲ. ಈ ಬಗ್ಗೆ ನಾನು ತಿಳ್ಕೊಂಡು ಹೇಳ್ತಿನಿ ಎಂದರು.
ಚುನಾವಣೆ ರ್ಯಾಲಿಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿಚಾರ, ಈ ವಿಚಾರದಲ್ಲಿ I am also helpless. ಕೊರೊನಾ ಬಗ್ಗೆ ಈಗಾಗಲೇ ಮಾರ್ಗಸೂಚಿ ಇದೆ. ನಾನು ಕೂಡ ಕಡ್ಡಾಯವಾಗಿ ಪಾಲಿಸುವಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ಇದು ನಮಗೂ ಅನ್ವಯ ಆಗುತ್ತದೆ. ರಾಜಕೀಯ ಪಕ್ಷಗಳ ರ್ಯಾಲಿಗಳ ವಿಚಾರದಲ್ಲೂ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೇ. ಆದ್ರೆ ಇದು ಪಾಲನೆ ಆಗಿಲ್ಲ ಅನ್ನೋದು ನನಗಿರುವ ಬೇಸರ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಇರಬೇಕು. ಅದನ್ನ ಮರೆತಿರುವುದು ದುರದೃಷ್ಟ. ಈ ಬಗ್ಗೆ ದಂಡ ಹಾಕಲು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.
ಅವರಿಬ್ಬರನ್ನೇ ಏಕೆ ಹೊಣೆ ಮಾಡ್ತೀರಿ.?
ಆರ್.ಆರ್.ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಆ ಕ್ಷೇತ್ರದ ಗ್ರೌಂಡ್ ರಿಯಾಲಿಟಿ ಅರಿತುಕೊಳ್ಳುವಲ್ಲಿ ಕಾಂಗ್ರೆಸ್ ಫೇಲ್ಯೂರ್ ಆಗಿದೆ. ಡಿಕೆಶಿ ಹಾಗೂ ಅವರ ತಮ್ಮ ಕಷ್ಟಪಟ್ಟು ಚುನಾವಣೆಯಲ್ಲಿ ಓಡಾಡಿದ್ದಾರೆ. ಅವರಿಬ್ಬರನ್ನೇ ಯಾಕೇ ಹೊಣೆ ಮಾಡ್ತೀರಿ.? ಇಡೀ ಕಾಂಗ್ರೆಸ್ ಪಕ್ಷ ಆರ್ ಆರ್ ಉಪಚುನಾವಣೆಯಲ್ಲಿ ಎಡವಿದೆ. ಆರ್ ಆರ್ ನಗರದಲ್ಲಿ 50 ಸಾವಿರ ಲಿಡ್ ನಲ್ಲಿ ಬಿಜೆಪಿ ಗೆಲ್ಲುತ್ತೆ ಅಂತ ನಾನು ಮೊದಲೇ ಹೇಳಿದ್ದೆ. ಈಗ ಅದೇ ರೀತಿಯ ಚುನಾವಣೆ ಫಲಿತಾಂಶ ಬಂದಿದೆ ಎಂದರು.
Key words: mysore- minister- k.sudhakar- Cabinet-restructure