ಮೈಸೂರು ಪ್ರಾಂತ್ಯದಲ್ಲಿ ‘ ತಳ’ ಊರಲು ಬಿಜೆಪಿ ಹೈಕಮಾಂಡ್ ‘ ತಂತ್ರ’..!

 

ಮೈಸೂರು, ನವೆಂಬರ್ ೧೧, ೨೦೨೧ (www.justkannada.in): ಕರ್ನಾಟಕದ ರಾಜಕೀಯದಲ್ಲಿ ಮೈಸೂರು ಒಳಗೊಂಡಂತೆ ಕೆಲವು ಸ್ಥಳಗಳಲ್ಲಿ ಬಿಜೆಪಿ ಅಷ್ಟು ಬಲಿಷ್ಠವಾಗಿಲ್ಲ. ಮೈಸೂರಿನಲ್ಲಿಯೂ ಸಹ ಬಿಜೆಪಿ ಅಷ್ಟು ಬಲಿಷ್ಠವಾಗಿಲ್ಲದಿರುವುದಾಗಿ ಗೋಚರಿಸಿದರೂ ಸಹ, ಎಂಎಲ್‌ಸಿ ಚುನಾವಣೆಗಳು ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆಯಲು ಮೈಸೂರಿನಲ್ಲಿ ಹಿಂದೆಂದು ಕಾಣದಿರುವಂತಹ ಲಾಬಿ ಆರಂಭವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಾಂಪ್ರದಾಯಿಕ ಭದ್ರಕೋಟೆಯೆಂದೇ ಗುರುತಿಸಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ, ಬಿಜೆಪಿ ಎಂಎಲ್‌ಸಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನೆಲೆಯಲ್ಲಿ ಬೇರುಮಟ್ಟದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದೆ ಹಾಗೂ ಬಿಜೆಪಿ ಪ್ರತಿಯೊಬ್ಬ ಮತದಾರರನ್ನೂ ತಲುಪುವ ಪ್ರಯತ್ನದಲ್ಲಿ ತೊಡಗಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಟಿಕೆಟ್‌ಗಾಗಿ ಲಾಬಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಮೇಲಾಗಿ ಜೆಡಿಎಸ್‌ನಿಂದ ಎರಡು ಬಾರಿ ಎಂಎಲ್‌ಸಿ ಆಗಿ ಚುನಾಯಿತರಾಗಿದ್ದಂತಹ ಸಂದೇಶ್ ನಾಗರಾಜ್ ಹಾಗೂ ಮುಡಾದ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರು ಟಿಕೆಟ್ ಕೋರಿ ಕೇಸರಿ ಪಕ್ಷದ ಬಾಗಿಲು ತಟ್ಟುತ್ತಿರುವುದು ಕುತೂಹಲ ಕೆರಳಿಸಿದೆ.

ಜೊತೆಗೆ ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಅವರೂ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಮೈಸೂರು ಪ್ರಾಂತ್ಯದಲ್ಲಿ ತಳ ಊರಲು ತವಕಿಸುತ್ತಿರುವ ಬಿಜೆಪಿ, ಮೈಸೂರು-ಚಾಮರಾಜನಗರ ಪರಿಷತ್ ಕ್ಷೇತ್ರ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಲು ಸಜ್ಜಾಗುತ್ತಿದೆ.

ಇತ್ತೀಚೆಗೆ ಬಿಜೆಪಿಯು ಅತ್ಯಂತ ಹಿಂದುಳಿದಿರುವ ಸಿದ್ದಿ ಸಮುದಾಯಕ್ಕೆ ಸೇರಿದವರಾಗಿರುವ ಶಾಂತಾರಾಮ್ ಬುಡನ ಸಿದ್ದಿ ಅವರನ್ನು ವಿಧಾನ ಪರಿಷತ್‌ಗೆ ಹಾಗೂ ಅಶೋಕ್ ಗಸ್ತಿ ಅವರನ್ನು ರಾಜ್ಯಸಭೆಗೂ ಆಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ಬಿಜೆಪಿಯ ಹೈಕಮ್ಯಾಂಡ್ ಇದೇ ತಂತ್ರವನ್ನು ಅನುಸರಿಸುವುದೇ ಎಂದು ಎಲ್ಲರೂ ಕುತೂಹಲಭರಿತರಾಗಿದ್ದಾರೆ.

ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯನ್ನು ಹೊಂದಿರುವ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹತ್ತಿರದವರೂ ಆಗಿರುವಂತಹ ಆರ್. ರಘು ಕೌಟಿಲ್ಯ ಅವರನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು. ಶೇ.೬೦ಕ್ಕಿಂತ ಹೆಚ್ಚಿನ ಸಂಖ್ಯೆಯಷ್ಟು ಹಿಂದುಳಿದ ವರ್ಗದವರ ಮತಗಳಿದ್ದ ಕಾರಣದಿಂದಾಗಿ ಆರ್. ರಘು ಅವರು ಉತ್ತಮ ಸ್ಪರ್ಧೆ ಒಡ್ಡಿದ್ದರು.

ಈ ನಡುವೆ, ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಆರ್. ರಘು ಅವರು ಈಗಾಗಲೇ ಬೇರುಮಟ್ಟದಲ್ಲಿ ಕೆಲಸ ಮಾಡಿದ್ದು, ಮತದಾರರನ್ನು ತಲುಪುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿಗೆ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಅಹಿಂದಾ ನಾಯಕ ಸಿದ್ದರಾಮಯ್ಯನವರ ತವರು ಜಿಲ್ಲೆಯಾಗಿರುವ ಮೈಸೂರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಬಿಜೆಪಿ ಅತ್ಯಂತ ಹಿಂದುಳಿದ ಹಾಗೂ ತಳ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು ಎನ್ನುವುದು ಬಿಜೆಪಿಯ ಆಂತರಿಕ ಮಾಹಿತಿ.

ಎರಡು ಬಾರಿ ಪರಿಷತ್ ಸದಸ್ಯರಾಗಿರುವ ಜೆಡಿಎಸ್‌ನ ಎಂಎಲ್‌ಸಿ ಸಂದೇಶ್ ನಾಗರಾಜ್ , ಈ ಬಾರಿ ಬಿಜೆಪಿ ಟಿಕೆಟ್ ಪಡೆಯುವ ಯತ್ನದಲ್ಲಿದ್ದಾರೆ. ನಾಗರಾಜ್ ಅವರು ಹೇಳುವಂತೆ ಅವರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಲಿದ್ದಾರೆ. ಈ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಅವರು ಅವರಿಗೆ ನೆರವಾಗುತ್ತಾರೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಸಂದೇಶ್ ನಾಗರಾಜ್ ಅವರ ಸಹೋದರ ಸಂದೇಶ್ ಸ್ವಾಮಿ ಅವರು ಬಿಜೆಪಿ ಪಕ್ಷದಿಂದ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾರಣದಿಂದಾಗಿ ಸಂದೇಶ್ ನಾಗರಾಜ್ ಅವರು ಪಕ್ಷದ ವ್ಯವಹಾರಗಳಿಂದ ದೂರ ಉಳಿದಿದ್ದರು. ಸಂದೇಶ್ ಸ್ವಾಮಿ ಅವರ ಮಗ ಸಾತ್ವಿಕ್ ಅವರೂ ಸಹ ಬಿಜೆಪಿ ಕಾರ್ಪೊರೇಟರ್ ಆಗಿದ್ದಾರೆ.

ಮತ್ತೊಂದೆಡೆ, ಮುತ್ಸದ್ದಿ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ಅವರೊಡನೆ ಬಿಜೆಪಿಗೆ ಸೇರ್ಪಡೆಗೊಂಡ ಜೆಡಿಎಸ್‌ನ ಹಿರಿಯ ನಾಯಕ ಹಾಗೂ ಮುಡಾದ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಕೃಪೆ : ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

key words : mysore-mlc-election-bjp-lobby-ticket-jds-congress