ಮೈಸೂರು,ಜನವರಿ,28,2022(www.justkannada.in): ಮನೆ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ಅನುಷ್ಠಾನ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ ರಾಮದಾಸ್ ನಡುವಿನ ಕೋಲ್ಡ್ ವಾರ್ ನಿನ್ನೆಯಷ್ಟೆ ಬಹಿರಂಗಗೊಂಡಿತ್ತು. ಇದೀಗ ಸಂಸದ ಪ್ರತಾಪ್ ಸಿಂಹ ವಿರುದ್ದ ಮತ್ತೋರ್ವ ಸ್ವಪಕ್ಷೀಯ ಶಾಸಕ ತಿರುಗಿಬಿದ್ದಿದ್ದಾರೆ.
ಎಸ್.ಎ ರಾಮದಾಸ್ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಎಲ್.ನಾಗೇಂದ್ರ ತಿರುಗಿ ಬಿದ್ದಿದ್ದಾರೆ. ಮನೆ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ಅನುಷ್ಠಾನದಲ್ಲಿ ಸಂಸದ ಪ್ರತಾಪ್ ಸಿಂಹಗೆ ಹಿನ್ನಡೆಯಾಗಿದ್ದು, ಗ್ಯಾಸ್ಪೈಪ್ ಲೈನ್ ಅಳವಡಿಕೆಗೆ ಮೈಸೂರಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಾಪ್ ಸಿಂಹ ಪ್ರಸ್ತಾವನೆಯನ್ನ ಮೈಸೂರು ಮಹಾನಗರ ಪಾಲಿಕೆ ಎರಡು ಬಾರಿ ತಿರಸ್ಕರಿಸಿದೆ.
ರಸ್ತೆ ಅಗೆದು ಮನೆಮನೆಗೆ ಗ್ಯಾಸ್ ಸಂಪರ್ಕ ಮಾಡುವ ಯೋಜನೆ ಇದಾಗಿದ್ದು ರಸ್ತೆ ಅಗೆಯುವುದಕ್ಕೆ ಶಾಸಕರು ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಲ್ ನಾಗೇಂದ್ರ , ಅಗೆದ ರಸ್ತೆಯನ್ನ ಪ್ರತಾಪ್ ಸಿಂಹ ಬಂದು ಮುಚ್ಚುತ್ತಾರಾ.?. ರಸ್ತೆ ಹಾಳಾಗುವ ಯೋಜನೆ ಮಾಡಲು ನಾವು ಬಿಡುವುದಿಲ್ಲ. ಈಗಷ್ಟೇ ರಸ್ತೆಗೆ ಡಾಂಬರು ಹಾಕಿಸಿದ್ದೇವೆ. 500 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುತ್ತಾರೆ. 300 ಕೋಟಿ ರೂಪಾಯಿ ಡ್ಯಾಮೇಜ್ಗೆ 99 ಕೋಟಿ ರೂ ಕೊಟ್ಟರೆ ಸಾಲುತ್ತಾ.? ಎಂದು ಸಂಸದ ಪ್ರತಾಪ್ ಸಿಂಹಗೆ ಶಾಸಕ ಎಲ್. ನಾಗೇಂದ್ರ ತಿರುಗೇಟು ನೀಡಿದರು.
ಶಾಸಕರಿಗಿಂತ ಹೆಚ್ಚಿನ ಅಂತರದಲ್ಲಿ ಮತ ಗಳಿಸಿದ್ದೇನೆ ಎಂಬ ಹೇಳಿಕೆ ನೀಡಿದ ಹಿನ್ನೆಲೆ ಈ ಬಗ್ಗೆ ಕಿಡಿಕಾರಿದ ಶಾಸಕ ಎಲ್.ನಾಗೇಂದ್ರ, ನಾವು ನಮ್ಮ ಕಾರ್ಯಕರ್ತರು ಕಾರ್ಪೋರೇಟರ್ ಗಳೆಲ್ಲಾ ಓಡಾಡಿ ಓಟ್ ಹಾಕಿಸಿದ್ದೇವೆ. ಕಾರ್ಯಕರ್ತರು, ಕಾರ್ಪೋರೇಟರ್ ಗಳಿಲ್ಲದಿದ್ರೆ ಗೆಲ್ಲೋಕೆ ಆಗುತ್ತಾ. ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಲೀಡ್ ನಲ್ಲಿ ಗೆದ್ದಿದ್ದಾರೆ ಎಂದು ಸಂಸದ ಪ್ರತಾಪ್ಸಿಂಹಗೆ ಟಾಂಗ್ ಕೊಟ್ಟರು. ನಾನು ಕೂಡ ಈ ಬಾರಿ ಒಂದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕೆ ಹೊರತು ಮಾತಿನಿಂದಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಆರೋಪದಿಂದ ನನ್ನ , ಪಕ್ಷದ ನಾಯಕರ ವಿಶ್ವಾಸಕ್ಕೆ ಯಾವುದೇ ಧಕ್ಕೆ ಆಗಲ್ಲ. ಈಗಾಗಲೇ ನಾನು ಪಕ್ಷದ ನಾಯಕರ ಗಮನಕ್ಕೆ ವಿಚಾರವನ್ನ ತಂದಿದ್ದೇನೆ. ಜನರಿಗೆ ತೊಂದರೆ ಆಗುವ ಕಾಮಗಾರಿ ಮಾಡಲು ಬಿಡಲ್ಲ. ರಸ್ತೆ ಹಾಳಾದರೆ ಜನರಿಗೆ ನಾವು ಉತ್ತರ ಕೊಡಬೇಕಾಗುತ್ತೆ. ಅಗತ್ಯ ಹಣ ಕೊಟ್ಟು ಕಾಮಗಾರಿ ಆರಂಭಿಸಲಿ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.
Key words: mysore- MP-Prathap simha-MLA-L.nagendra