ಮೈಸೂರು,ಡಿಸೆಂಬರ್,16,2022(www.justkannada.in): ತಮ್ಮ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿರುವ ಸಂಸದ ಶ್ರೀನಿವಾಸ್ ಪ್ರಸಾದ್ , ನನ್ನನ್ನು ಜನ ಅಲೆಮಾರಿ ಎನ್ನುವುದಿಲ್ಲ ಸ್ವಾಭಿಮಾನಿ, ರಾಜಕೀಯ ಮುತ್ಸದ್ದಿ ಎನ್ನುತ್ತಾರೆ. ನಾನು ಮಲಗಿರುವ ಹುಲಿಯನ್ನ ಎಬ್ಬಿಸಿ ಬೇಟೆಯಾಡುತ್ತೇನೆ. ನಿನ್ನ ತರ ಹಸು ವೇಷ ಹಾಕಿ ಹುಲಿ ಬೇಟೆಗೆ ಹೋಗೋದಿಲ್ಲ ಎಂದು ಖಡಕ್ ಕೌಂಟರ್ ಕೊಟ್ಟರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಿಷ್ಟು.
ಅವರೊಬ್ಬ ನಾಮಕರಣ ಪರಿಷತ್ ಸದಸ್ಯರು. ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದಿಲ್ಲ. ನನ್ನ 50 ವರ್ಷಗಳ ರಾಜಕೀಯದಲ್ಲಿ ನಾನು ಹಲವು ಏಳು ಬೀಳುಗಳ ಕಂಡಿದ್ದೇನೆ. ಅಲೆಮಾರಿ ಅಂತ ನಾನು ಇವರೊಬ್ಬರಿಗೆ ಹೇಳಿಲ್ಲ ಸಿದ್ದರಾಮಯ್ಯನಿಗೂ ಹೇಳಿದ್ದೇನೆ. ಇವರಿಗೂ ಹಾಗೇ ಹೇಳಿದ್ದೇನೆ. ಇವರು ಬಿಜೆಪಿಯಲ್ಲೇ ಇದ್ದು ಬಿಜೆಪಿ ವಿರುದ್ಧವೇ ಬಾಯಿಗೆ ಬಂದ ಹಾಗೆ ಮಾತಾಡೋದು, ಅವರ ಇತ್ತೀಚಿನ ಬೆಳವಣಿಗೆ ನೋಡಿ ನಾನು ಹೇಳಿದ್ದು ನಿಜ. ನಾನು ಬೂಸಾ ಚಳುವಳಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬಂದೆ. ಕೇವಲ 25 ವರ್ಷದ ಯುವಕನಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ ಎಂದರು.
ವಿಶ್ವನಾಥ್ ಅರ್ಥ ಮಾಡಿಕೋ ನನ್ನ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲ. ನೀನು ನನ್ನನ್ನ ಅಲೆಮಾರಿಗಳ ರಾಜ ಅಂದಿದ್ದೀಯಾ.? ನನ್ನನ್ನ ಜನ ಸ್ವಾಭಿಮಾನದ ಚಕ್ರವರ್ತಿ ಅಂಥ ಕರೆಯುತ್ತಾರೆ. ನೀನು ೪೦ ವರ್ಷಗಳಿಂದ ರಾಜಕೀಯದಲ್ಲಿದ್ದಿಯಾ. ನನ್ನ ಬಗ್ಗೆ ನಿನಗೂ ಗೊತ್ತಿದೆ. ನನ್ನ ಬಗ್ಗೆ ಮಾತನಾಡುಲು ನಿನಗೆ ನೈತಿಕತೆ ಇಲ್ಲ ಎಂದು ವಿಶ್ವನಾಥ್ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.
ನಿಮ್ಮನ್ನು ಬೆಳೆಸಿದ ದೇವರಾಜ ಅರಸುರವರ ಬೆನ್ನಿಗೆ ಚೂರಿ ಹಾಕಿದ್ರಿ.
ನಾನು ಬೇಕಂತಾ ಪಕ್ಷಾಂತರ ಮಾಡಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಬೇರೆ ಪಕ್ಷಗಳಿಗೆ ಹೋಗಬೇಕಾಯಿತು. ರಾಜಕೀಯ ಬೆಳವಣಿಗೆಗೆ ತಕ್ಕಂತೆ ಪಕ್ಷಾಂತರ ಮಾಡಬೇಕಾಯಿತು. ವಿಶ್ವನಾಥ್ ನಿಮ್ಮನ್ನು ಬೆಳೆಸಿದ್ದು ದೇವರಾಜ ಅರಸರು. ಆದರೆ ರಾತ್ರೋರಾತ್ರಿ ನೀವು ಮಲ್ಲಿಕಾರ್ಜುನ ಖರ್ಗೆಯವರು ದೇವರಾಜ ಅರಸರ ಸಂಸ್ಥಾ ಕಾಂಗ್ರೆಸ್ ತೊರೆದು ಇಂದಿರಾ ಕಾಂಗ್ರೆಸ್ ಗೆ ಸೇರಿದ್ರಿ. ಆ ಮೂಲಕ ನಿಮ್ಮನ್ನು ಬೆಳೆಸಿದ ದೇವರಾಜ ಅರಸುರವರ ಬೆನ್ನಿಗೆ ಚೂರಿ ಹಾಕಿದ್ರಿ ವಿಶ್ವನಾಥ್ ಅವರೇ ಎಂದು ಗತಕಾಲದ ರಾಜಕೀಯವನ್ನು ನೆನಪಿಸಿಕೊಳ್ಳುವಂತೆ ವಿಶ್ವನಾಥ್ ಗೆ ಸಲಹೆ ನೀಡಿದರು.
ಹಳೆಯದನ್ನೆಲ್ಲಾ ಮರೆತು ಬಿಟ್ಟ ವಿಶ್ವನಾಥ್..? ಎಲ್ಲಿದ್ದೆ ನೀನು. ಕೃತಜ್ಞತೆ ಇಲ್ಲದ ವ್ಯಕ್ತಿ ನೀನು. ಸೋತಾಗಲೆಲ್ಲಾ ನನ್ನ ಬಳಿ ಸಹಾಯಕ್ಕೆ ಓಡೋಡಿ ಬರ್ತಿದ್ದೆ. ಅಧಿಕಾರಕ್ಕಾಗಿ ಅಂಗಲಾಚುತ್ತಿದ್ದೆ. ನನ್ನನ್ನೇ ದೇವರು ಅಂತಿದ್ದೆ ಈಗ ನನ್ನ ಬಗ್ಗೆ ಮಾತನಾಡ್ತೀಯಾ..? ಎಂದು ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.
ಮಂಚನಹಳ್ಳಿ ಮಹಾದೇವ್ ನಿನ್ನನ್ನ ಆಣೆ ಮಾಡಲು ಕರೆದ ನೀನು ಹೋಗಲಿಲ್ಲ. ಸಾ.ರಾ ಮಹೇಶ್ ಚಾಮುಂಡಿಬೆಟ್ಟದಲ್ಲಿ ಆಣೆ ಪ್ರಮಾಣಕ್ಕೆ ಕರೆದ ನೀನು ಹೋಗಲೇ ಇಲ್ಲ. ಡಿಕೆ ಶಿವಕುಮಾರ್ ಗೂ ನಾನೇ ಟಿಕೆಟ್ ಕೊಡಿಸಿದ್ದು. ಆಗ ಡಿಕೆ ಶಿವಕುಮಾರ್ ಹುಡುಗ ದುಡ್ಡು ಇರಲಿಲ್ಲ. ವಿಶ್ವನಾಥ್ ಗೆ ಜೀವ ಕೊಟ್ಟಿದ್ದೆ. ನಿನಗೆ ರಾಜಕೀಯ ಆಶ್ರಯ ನೀಡಿದ್ದು ಯಾರು ಜ್ಞಾಪಿಸಿಕೋ. ಮಂತ್ರಿ ಮಾಡಲು ಅಂದಿನ ಸಿಎಂ ಮುಂದೆ ಸೂರ್ಯ ನಮಸ್ಕಾರ ಮಾಡಿದ್ರಿ. ಎಲ್ಲರೂ ವಿಶ್ವನಾಥ್ ಹೆಸರು ಕೈ ಬಿಟ್ಟಿದ್ದರು. ಮೊಯ್ಲಿಗೆ ಎಚ್ಚರಿಕೆ ನೀಡಿ ವಿಶ್ವನಾಥ್ ರನ್ನ ಮಂತ್ರಿ ಮಾಡಿಸಿದೆ. ಅಂದು ಕಂಬಳಿ ಹೊದಿಸಿಕೊಂಡು ಕೆ.ಆರ್ ನಗರದಲ್ಲಿ ಮಲಗಿದ್ದ ನಿಮ್ಮನ್ನ ಕನ್ನಡ ಸಂಸ್ಕೃತಿ ಸಚಿವನ್ನಾಗಿ ಮಾಡಿದೆ. ವೀರಪ್ಪ ಮೊಯ್ಲಿಗೆ ವಿಶ್ವನಾಥ್ ಮಿನಿಸ್ಟರ್ ಮಾಡಲು ಇಷ್ಟವಿರಲಿಲ್ಲ. ನಾಲ್ಕು ವರ್ಷ ದೆಹಲಿಯಲ್ಲಿ ಸಾಕಿದೆ. ನಂಜನಗೂಡು ಉಪಚುನಾವಣೆಯಲ್ಲಿ ನನ್ನ ಸೋಲಿಗೆ ನಂಜುಂಡೇಶ್ವರನ ದೇವಸ್ಥಾನಲ್ಲಿ ಈಡುಗಾಯಿ ಹೊಡೆಯುತ್ತಾನೆ ಎಂದು ಶ್ರೀನಿವಾಸ್ ಪ್ರಸಾದ್ ಹರಿಹಾಯ್ದರು.
ನಾನು 42 ಮಂದಿಗೆ ಟಿಕೆಟ್ ಕೊಡಿಸಿದ್ದೇನೆ. ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮಂದಿಗೆ ಟಿಕೆಟ್ ಕೊಡಿಸಿದ್ದೇನೆ.ಅವರೆಲ್ಲಾ ರಾಜಕೀಯವಾಗಿ ಬೆಳೆದಿದ್ದಾರೆ. ಸಿದ್ದರಾಮಯ್ಯಗೆ ಅಹಿಂದ ಕಟ್ಟಿಕೊಟ್ಟವರು ನಾನು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಖರ್ಗೆ, ಧರ್ಮಸಿಂಗ್, ವಿಶ್ವನಾಥ್ ಎಲ್ಲಾ ಬಂದು ನಿಂತಿದ್ದರು. ಈ ವೇಳೆ ಸಿದ್ದರಾಮಯ್ಯ ಕೈಕಟ್ಟಿ ನಿಂತಿದ್ದ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆ ಬಂದಾಗ 8 ಸ್ಥಾನ ಗೆಲ್ಲಿಸಿಕೊಡಲಿಲ್ವಾ? ನನ್ನನ್ನ ಕಂದಾಯ ಸಚಿವರನ್ನಾಗಿ ಮಾಡಿದ್ದು ಸಿದ್ದರಾಮಯ್ಯ ಅಲ್ಲ. ದೆಹಲಿಯಲ್ಲಿ ಆಸ್ಕರ್ ಪೆರ್ನಾಂಡಿಸ್ ನನ್ನ ಹೆಸರನ್ನ ಸೇರಿಸಿದರು. ನನಗೆ ಚುನಾವಣೆಯೂ ಬೇಡ ಎಂದಿದ್ದೆ. ನೀವು ಕಾಂಗ್ರೆಸ್ ಬಿಡಬೇಡಿ ಎಂದು ಸೋನಿಯಾ ಗಾಂಧಿಯಿಂದ ಫೋನ್ ಮಾಡಿದ್ರು. ಕಾಂಗ್ರೆಸ್ ಬಿಟ್ಟಾಗ ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ನನ್ನ ಅವರ ಪಕ್ಷಕ್ಕೆ ಸೇರಿಸಲು ಹೇಳಿದ್ರು. ನಾನು ಅಲೆಮಾರಿ ಅಲ್ಲ ಸ್ವಾಭಿಮಾನಿ ಚಕ್ರವರ್ತಿ ಎಂದು ಗುಡುಗಿದರು.
ಅಶೋಕ್ ಪುರಂಗೆ ಏನು ಮಾಡಿದ್ದೀರಿ ಎಂಬ ವಿಶ್ವನಾಥ್ ಹೇಳಿಕೆ ವಿಚಾರ ಕುರಿತು ವಾಗ್ದಾಳಿ ನಡೆಸಿದ ಶ್ರೀನಿವಾಸ್ ಪ್ರಸಾದ್ , ಜನತೆಗೆ ಹೋಗಿ ಕೇಳು ಹೇಳುತ್ತಾರೆ. ಪಾರ್ಲಿಮೆಂಟ್ ನಲ್ಲಿ ಯಾವುದೇ ಪ್ರಶ್ನೆ ಕೇಳದೆ ಮನೆಗೆ ಹೋಗಿ ಮಲಗೋದು ರಾತ್ರಿ ವಿಸ್ಕಿ ಕುಡಿಯೋದು ಇವನ ಕೆಲಸವಾಗಿತ್ತು. ಸಿದ್ದರಾಮಯ್ಯ ಬಳಿ ಹೋಗೋದು ದುಡ್ಡ್ ಕೊಡು ಎಂದು ಕೇಳೋದು, ಎಂ ಎಲ್ ಸಿ ಮಾಡಿ ಅಂತ ಕೇಳಿಕೊಳ್ಳೋದು.ಇದು ವಿಶ್ವನಾಥ್ ನಡೆದು ಬಂದ ದಾರಿ. ವಿಶ್ವನಾಥ್ ಚುನಾವಣೆ ವೇಳೆ 15 ಕೋಟಿ ತೆಗೊಂಡ್ರು. ಕೇವಲ 4 ರಿಂದ 5 ಕೋಟಿ ಖರ್ಚು ಮಾಡಿ 10 ಕೋಟಿ ಮನೆಗೆ ತಗೊಂಡು ಹೋಗಿ ಪೆಟ್ರೋಲ್ ಬಂಕ್, ಬಾರ್ ಮಾಡ್ಕೊಂಡಿದ್ದು ಯಾರಪ್ಪ. ನಾನು ಜೆಡಿಎಸ್ ರಾಜ್ಯಾದ್ಯಕ್ಷ ಆದ್ರೂ ಕೆ.ಆರ್.ನಗರ ಪುರಸಭೆಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ನನಗೆ ಅವಮಾನ ಮಾಡಿದ್ರು ಅಂತಾ ನನ್ನ ಮನೆಗೆ ಬಂದೆ. ನಾನು ಬಿಎಸ್ ಯಡಿಯೂರಪ್ಪ ಅವರ ಹತ್ತಿರ ಒನ್ ಟು ಒನ್ ಮಾತನಾಡಿ ಎಂದೆ. ಇಬ್ಬರೂ ಮಾತನಾಡಿದ್ರು, ಯಡಿಯೂರಪ್ಪ ಸೀನಿಯರ್ ಇದ್ದಾರೆ ಸೇರಿಸಿಕೊಳ್ಳೋಣ ಎಂದರು. ವಿಶ್ವನಾಥ್ ಗೆ ಕಾಂಗ್ರೆಸ್ ನಿಂದ ಏನ್ ಅನ್ಯಾಯ ಆಗಿದೆ. ಸೋತ ಮೇಲೆ ಸಿದ್ದರಾಮಯ್ಯ ಅವರ ಹತ್ತಿರ ದುಡ್ಡು ಕೇಳಿ, ಅಧಿಕಾರ ಕೇಳಿದರು. ಹೀಗಾಗಿಯೇ ವಿಶ್ವನಾಥ್ ಕಾಂಗ್ರೆಸ್ ಬಿಟ್ಟರು ಎಂದು ವಾಗ್ದಾಳಿ ನಡೆಸಿದರು.
Key words: mysore- MP-Srinivas Prasad –Khadak- reply –mlc- H. Vishwanath.