ಮೂಡಾ ಮತ್ತು ಅಕ್ರಮಾದಿತ್ಯರು!

ಮೈಸೂರು,ನವೆಂಬರ್,9,2024 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟ್ ಗಳನ್ನು ಹಂಚಿಕೆ ಮಾಡಲಾಗಿದ್ದ ವಿವಾದಿತ 50:50 ಅನುಪಾತದ ನಿವೇಶನಗಳ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮಹತ್ವದ(!) ನಿರ್ಧಾರ ತೆಗೆದುಕೊಂಡಿದೆ.

50:50 ಅನುಪಾತದಡಿ ಹಂಚಿಕೆ ಮಾಡಲಾಗಿರುವ ಎಲ್ಲಾ ನಿವೇಶನ ಹಿಂಪಡೆಯಲು ಗುರುವಾರ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯು ನಿರ್ಧರಿಸಿದೆ. ಪ್ರಾಧಿಕಾರದ ಈ ನಿರ್ಧಾರದಿಂದ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ನೋಂದಣಿ ರದ್ದತಿಯಾಗುವ ಭೀತಿ ಶುರುವಾಗಿದೆ. ಮೂಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ನಿವೇಶನ ರದ್ದು ಮಾಡುವ ನಿರ್ಧಾರಕ್ಕೆ ಒಪ್ಪಿದ್ದಾರೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದಾರೆ.

50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರವು ಇಂತಹುದೇ ಸಭೆಯನ್ನು ನಡೆಸಿ ನಿರ್ಧಾರ ತೆಗೆದುಕೊಂಡಿದೆಯೇ? ಅಂತಹ ಸಭೆಯನ್ನು ನಡೆಸಿದ್ದರೆ ಆ ಸಭೆಯಲ್ಲಿ ಯಾರು ಯಾರು ಭಾಗಿಯಾಗಿದ್ದರು? 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಅಕ್ರಮ ಎಂದಾದರೆ ಆ ಸಭೆಯೂ ಅಕ್ರಮವಲ್ಲವೇ?ಅದು ಅಕ್ರಮ ಕೂಟವಲ್ಲವೇ?ಆ ಸಭೆಯಲ್ಲಿ ಪಾಲ್ಗೊಂಡವರು ಅಕ್ರಮಾದಿತ್ಯರಲ್ಲವೇ? ಆ ಅಕ್ರಮಾದಿತ್ಯರಿಗೆ ಶಿಕ್ಷೆಯಾಗಬೇಕಲ್ಲವೇ?

ಇಡೀ ಪ್ರಾಧಿಕಾರವೇ ಅಕ್ರಮ ಎಸಗಿ ಅಪರಾಧಿಯ ಸ್ಥಾನದಲ್ಲಿ ನಿಂತಿರುವಾಗ 50:50 ನಿವೇಶನಗಳನ್ನು ಹಿಂಪಡಿಯುವ ಅಧಿಕಾರ ಪ್ರಾಧಿಕಾರಕ್ಕಿದೆಯೇ?ಅಪರಾಧಿಯೇ ನ್ಯಾಯಾಧೀಶರಂತೆ ತೀರ್ಪು ನೀಡಲು ಸಾಧ್ಯವೇ?

ಇಲ್ಲ. ತನ್ನ ಮೇಲೆಯೇ ಆರೋಪ ಇರುವಾಗ ತಾನೇ ನ್ಯಾಯಾಧೀಶನಾಗಲು ಸಾಧ್ಯವಿಲ್ಲ. 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ಹಿಂಪಡೆಯಬೇಕಾದರೆ ಹಂಚಿಕೆ ಮಾಡಿರುವುದೇ ಅಕ್ರಮ ಎಂದು ಸಾಬೀತಾಗಿರಬೇಕು.

ಅಕ್ರಮಾದಿತ್ಯರೆಲ್ಲರೂ ಜೈಲುಪಾಲಾಗಲೇಬೇಕು. 50:50 ಅನುಪಾತದಲ್ಲಿ ನಿವೇಶನಗಳನ್ನು ಕಡಲೇಪುರಿಯಂತೆ ಹಂಚಿ ಅಕ್ರಮ ಎಸಗಿದ ಅಕ್ರಮಾದಿತ್ಯರನ್ನು ಜೈಲಿಗಟ್ಟದೇ 5 ಸಾವಿರ ನಿವೇಶನಗಳನ್ನು ಹಿಂಪಡೆಯಲು ಯಾವುದೇ ಸಭೆಯ ಎಂತಹ ನಿರ್ಧಾರದಿಂದಲೂ ಸಾಧ್ಯವಿಲ್ಲ.

ಭೂಮಾಲೀಕರಿಂದ ಸ್ವಾಧೀನ ಪಡಿಸಿಕೊಂಡು  ಅಥವಾ ಸ್ವಾಧೀನ ಪಡಿಸಿಕೊಳ್ಳದೇ ಅಭಿವೃದ್ಧಿ ಪಡಿಸಿದ  ಭೂಮಿಗೆ ಪರಿಹಾರವಾಗಿ ಅದರ ಅರ್ಧದಷ್ಟು ವಿಸ್ತೀರ್ಣದ ಭೂಮಿಯನ್ನು ಅಂದರೆ 50% ರಷ್ಟು ವಿಸ್ತೀರ್ಣದ ಭೂಮಿಯನ್ನು(ನಿವೇಶನಗಳನ್ನು) 50:50 ಅನುಪಾತದಲ್ಲಿ ನೀಡಲಾಗಿದೆ.

ಈಗ ಅಂತಹ ನಿವೇಶನಗಳನ್ನು ಹಿಂಪಡೆದರೆ ಅದರ ಎರಡು ಪಟ್ಟು ವಿಸ್ತೀರ್ಣದ ನಿವೇಶನ ಅಥವಾ ಭೂಮಿಯನ್ನು ಭೂಮಾಲೀಕರಿಗೆ ಪ್ರಾಧಿಕಾರವು ಹಿಂದಿರುಗಿಸಬೇಕಾಗುತ್ತದೆ. 5 ಸಾವಿರ ನಿವೇಶನಗಳನ್ನು ಫಲಾನುಭವಿಗಳಿಂದ ಹಿಂಪಡೆದರೆ 10 ಸಾವಿರ ನಿವೇಶನಗಳಷ್ಟು ಭೂಮಿಯನ್ನು ಅವರಿಗೆ ಹಿಂತಿರುಗಿಸಬೇಕಾಗುತ್ತದೆ. ಅಷ್ಟು ಭೂಮಿ ಮೂಡಾ ಬಳಿ ಇದೆಯೇ?

ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅಭಿವೃದ್ಧಿ ಪಡಿಸಿ ನುಂಗಿ ನೀರು ಕುಡಿದಿರುವಾಗ ಫಲಾನುಭವಿಗಳಿಗೆ 10 ಸಾವಿರ ನಿವೇಶನಗಳಷ್ಟು ವಿಸ್ತೀರ್ಣದ ಭೂಮಿಯನ್ನು ಹಿಂದಿರುಗಿಸುವುದು ಹೇಗೆ?

50:50 ಅನುಪಾತದಲ್ಲಿ ನಿವೇಶನಗಳನ್ನು ಭೂಮಾಲೀಕರಿಗೆ ನೋಂದಾಯಿತ ಪತ್ರಗಳ ಮೂಲಕ ನೀಡಲಾಗಿರುತ್ತದೆ. ಇಂತಹ ನಿವೇಶನಗಳನ್ನು ಹಿಂಪಡೆಯುವ ಅಧಿಕಾರ ಪ್ರಾಧಿಕಾರಕ್ಕೆ ಖಂಡಿತಾ ಇಲ್ಪ. ನೋಂದಾಯಿತ ಪತ್ರಗಳನ್ನು ಪ್ರಾಧಿಕಾರವು ಏಕಪಕ್ಷೀಯವಾಗಿ ರದ್ದುಪಡಿಸಲು ಸಾಧ್ಯವಿಲ್ಲ. ಅಂತಹ ನೋಂದಾಯಿತ ಪತ್ರಗಳಲ್ಲಿ ಪ್ರಾಧಿಕಾರವು ಒಂದನೇ ಪಕ್ಷಗಾರನಾಗಿದ್ದು ಫಲಾನುಭವಿಗಳು ಎರಡನೇ ಪಕ್ಷಗಾರರಾಗಿರುತ್ತಾರೆ. ಉಭಯ ಪಕ್ಷಕಾರರು ಪರಸ್ಪರ ಒಪ್ಪಿದರೆ ಮಾತ್ರ ಇಂತಹ ನೋಂದಾಯಿತ ಪತ್ರಗಳನ್ನು ರದ್ದುಪಡಿಸಿ ನಿವೇಶನಗಳನ್ನು ಮೂಡಾ ಹಿಂಪಡೆಯಬಹುದೇ ಹೊರತು ಪ್ರಾಧಿಕಾರವು ಏಕಪಕ್ಷೀಯವಾಗಿ ನೋಂದಾಯಿತ ಪತ್ರಗಳನ್ನು ರದ್ದುಪಡಿಸಲಾಗದು. 50:50 ಅನುಪಾತದಲ್ಲಿ ಭೂಮಾಲೀಕರಿಗೆ ಪರಿಹಾರಾರ್ಥವಾಗಿ ನೋಂದಾಯಿತ ಪತ್ರಗಳ ಮೂಲಕ ನೀಡಿದ ನಿವೇಶನಗಳನ್ನು ರದ್ದುಪಡಿಸುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ.

ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ಯಾವುದೇ ಪತ್ರಗಳನ್ನು ನ್ಯಾಯಾಲಯದ ಆದೇಶ/ತೀರ್ಪು/ಡಿಕ್ರಿ ಇಲ್ಲದೆ ಯಾವುದೇ ಪ್ರಾಧಿಕಾರವಾಗಲೀ, ಸಂಘ ಸಂಸ್ಥೆಯಾಗಲೀ ವ್ಯಕ್ತಿಯಾಗಲೀ ಏಕಪಕ್ಷೀಯವಾಗಿ ರದ್ದು ಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

ಇಂತಹ ನಿವೇಶನಗಳನ್ನು ಹಿಂಪಡೆಯಬೇಕಾದರೆ ಪ್ರಾಧಿಕಾರವು ನ್ಯಾಯಾಲಯಕ್ಕೆ ಕೋರ್ಟ್ ಶುಲ್ಕ ಭರಿಸಿ ಸಿವಿಲ್ ಪ್ರಕರಣ ಹೂಡಿ ಡಿಕ್ರಿ ಪಡೆಯುವುದು ಕಡ್ಡಾಯ. ನ್ಯಾಯಾಲಯದ ಡಿಕ್ರಿ ಇಲ್ಲದೆ ಒಂದಿಂಚು ಜಾಗವನ್ನೂ ಪ್ರಾಧಿಕಾರವು ಹಿಂಪಡೆಯಲಾಗದು.

50:50 ಅನುಪಾತದಲ್ಲಿ ಪ್ರಾಧಿಕಾರವು ನೋಂದಾಯಿತ ಪತ್ರದ ಮೂಲಕ ಹಂಚಿದ್ದ ನಿವೇಶನಗಳ ದಾಖಲೆಯಲ್ಲಿ‌ ಇರುವ ಮೂಡಾಧಿಕಾರಿಗಳ ಸಹಿ ಮತ್ತು ಮೊಹರನ್ನು ನಂಬಿ ಸಹಸ್ರಾರು ಜನರು ಇಂತಹ ನಿವೇಶನಗಳನ್ನು ಈಗಾಗಲೇ ಖರೀದಿಸಿ ಮನೆ ಕಟ್ಟಿಕೊಂಡಿದ್ದರೆ ಅಂತಹ ನಿವೇಶನಗಳನ್ನು ಹಿಂಪಡೆಯುವ ಅಧಿಕಾರ ಪ್ರಾಧಿಕಾರಕ್ಕಿದೆಯೇ? ಖಂಡಿತಾ ಇಲ್ಲ. ಮೂಡಾ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಖರೀದಿ ಮಾಡಿದವರು ಮೂಢರೇ?

ಉದ್ಯಾನ ನಗರಿ, ಅರಮನೆ ನಗರಿ, ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಎಂದು ಬೀಗುತ್ತಿದ್ದ ಮೈಸೂರಿಗೆ ಕಳಂಕ ತಂದಿಟ್ಟ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲಾ ಅಕ್ರಮಾದಿತ್ಯರ ಹೆಡೆಮುರಿ ಕಟ್ಟಿ ಜೈಲಿಗಟ್ಟದ ಹೊರತು ಮೈಸೂರಿಗೆ ಉಳಿಗಾಲವಿಲ್ಲ.

“ಕಳ್ರನ್ನೆಲ್ಲಾ ಜೈಲಿಗೆ ಹಾಕೊದಾದ್ರೆ ಊರಿಗೇ ಬೇಲಿ ಹಾಕಬೇಕಲ್ಲಾ….” ಎಂಬಂತೆ ಅಕ್ರಮಾದಿತ್ಯರನ್ನೆಲ್ಲಾ ಜೈಲಿಗೆ ಹಾಕಬೇಕಾದ್ರೆ ಮೂಡಾ ಕಚೇರಿನ್ನೇ ಜೈಲನ್ನಾಗಿ ಪರಿವರ್ತಿಸಬೇಕಾದೀತು.

-ಪಿ.ಜೆ.ರಾಘವೇಂದ್ರ

ನ್ಯಾಯವಾದಿ, ಮೈಸೂರು

Key words: mysore, MUDA ,case, Site