ಮೈಸೂರು, ಜು.12, 2022 :(www.justkannada.in news)ಜಿಲ್ಲೆಯಲ್ಲಿ ಕನ್ನಡ ಭಾಷೆ ಅನುಷ್ಠಾನ ಸಮರ್ಪಕವಾಗಿಲ್ಲ. ಕಾರ್ಮಿಕ ಇಲಾಖೆ, ಜಿಪಂ, ಕೈಗಾರಿಕಾ ಇಲಾಖೆ, ಕಾವೇರಿ ನೀರಾವರಿ ನಿಗಮದವರು ಜವಾಬ್ದಾರಿ ವಹಿಸಿ ಕನ್ನಡ ಭಾಷೆಯ ಅನುಷ್ಠಾನದಲ್ಲಿ ಮುತುವರ್ಜಿ ವಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿ.ಎಸ್.ನಾಗಭರಣ ಹೇಳಿದಿಷ್ಟು..
ನಗರದ 174 ಅಂಗಡಿ-ಮುಂಗ್ಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಸಿಕೊಂಡಿಲ್ಲ. ಸರಕಾರದ ಆದೇಶಕ್ಕೆ ವಿರುದ್ಧವಾಗಿ ಅಳವಡಿಸಿರುವ ಈ ನಾಮಫಲಕಗಳನ್ನು 15 ದಿನದ ಒಳಗಾಗಿ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
2017 ರಲ್ಲಿ ಜಿಲ್ಲೆಯಲ್ಲಿ ನಡೆದ ಕನ್ನಡ ಅನುಷ್ಠಾನ ಕುರಿತ ಪರಿಶೀಲನೆ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಬಳಕೆ ಮಾಡದ 174 ಅಂಗಡಿಗಳ ವಿರುದ್ಧ ಕ್ರಮವಹಿಸಬೇಕೆಂದು ಪಾಲಿಕೆಗೆ ಸೂಚನೆ ನೀಡಲಾಗಿತ್ತು. ಆದರೆ ಈ ವರೆಗೆ ಕ್ರಮವಹಿಸಿರುವ ಬಗ್ಗೆ ಯಾವುದೇ ವರದಿ ನೀಡಿಲ್ಲ. ಕನ್ನಡದ ನಾಮಫಲಕ ಅಳವಡಿಸದ ಅಂಗಡಿಗಳಿಗೆ ನೋಟೀಸ್ ನೀಡುವುದಲ್ಲದೇ ವ್ಯಾಪಾರ ಪರವಾನಗಿ ರದ್ದುಗೊಳಿಸುವಂತೆ ಸೂಚಿಸಲಾಗಿದೆ.
ಮೈಸೂರು ಕೇಂದ್ರೀಯ ವಿದ್ಯಾಲಯದಲ್ಲಿ ಒಂಭತ್ತನೇ ತರಗತಿ ತನಕ ಕನ್ನಡ ಭಾಷೆ ಕಲಿಯುವ ಅವಕಾಶವಿದೆ. ಆದರೆ, 10ನೇ ತರಗತಿಗೆ ಇರುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು.
ಮೈಸೂರಿನಾದ್ಯಂತ ನಾಮಫಲಕ ಬದಲಾವಣೆಗೆ ಎರಡು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಮಹಾನಗರಪಾಲಿಕೆ ಅಧಿಕಾರಿಗಳು ನಗರದಲ್ಲಿ ಯಾವುದೇ ಉದ್ಯಮಕ್ಕೆ ಲೈಸೆನ್ಸ್ ಕೊಡುವಾಗ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕಬೇಕೆಂಬ ನಿಯಮ ಪಾಲನೆಗೆ ಸೂಚಿಸಬೇಕು. ಬೆಂಗಳೂರು, ಕೋಲಾರದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಲೋಗೊದಲ್ಲಿ ಕನ್ನಡ ಬಳಸಲು ಸೂಚನೆ ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ನೀಡುವ ಪ್ರಮಾಣ ಪತ್ರದಲ್ಲೂ ಕನ್ನಡ ಭಾಷೆ ಇರಬೇಕು. ಪದವಿ ಪ್ರಮಾಣ ಪತ್ರಗಳನ್ನು ಕನ್ನಡೀಕರಣಗೊಳಿಸಿ ವೆಬ್‌ಸೈಟ್ ಟೆಂಪ್ಲೆಟ್ ಕನ್ನಡದಲ್ಲಿರಲಿ ಎಂದು ರಾಜ್ಯದ 54 ವಿಶ್ವ ವಿದ್ಯಾನಿಲಯಗಳಿಗೆ ಸೂಚನೆ ನೀಡಲಾಗಿದೆ. ಒಂದು ತಿಂಗಳೊಳಗೆ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿ, ಜಿಪಂ ಕೆಡಿಪಿ ಸಭೆಗಳ ಕಾರ್ಯಸೂಚಿಯಲ್ಲಿ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಚರ್ಚಿಸುವ ವಿಷಯವನ್ನು ಕಡ್ಡಾಯವಾಗಿ ಸೇರಿಸಬೇಕು. ಜತೆಗೆ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯರಿಗೆ ಸಭೆಗಳಲ್ಲಿ ಚರ್ಚಿಸಲು ಅವಕಾಶ ನೀಡಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿಳಿಗಿರಿ ಮಾತನಾಡಿ, ರಾಜ್ಯದ 19 ಜಿಲ್ಲೆಗಳ 38 ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯ ಪ್ರಾರಂಭಿಸಲಾಗುವುದು. ಇದಕ್ಕೆ ಆಯಾ ಭಾಗದ ಶಿಕ್ಷಕರನ್ನು ಬಳಸಿ ಭಾಷಾ ಪ್ರಯೋಗಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸುವ ಚಿಂತನೆ ನಡೆದಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಮೇಶ್, ಕಾರ್ಯದರ್ಶಿ ಸಂತೋಷ್ ಹಾನಗಲ್, ಆಪ್ತ ಕಾರ್ಯದರ್ಶಿ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.
KEY WORDS : MYSORE-KANNADA-CORPORATION-UNIVERSITY-T.S.NAGABHARANA