ಮೈಸೂರು, ಜ.20, 2022 : (www.justkannada.in news) : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು- ಚಾ.ನಗರದ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ ಆರ್.ರಘು, ಇದೀಗ ಮತ್ತೆ ಶೈಕ್ಷಣಿಕ ರಂಗದತ್ತ ಮುಖ ಮಾಡಿದ್ದಾರೆ.
ಕಳೆದ ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರತರಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದ ಆರ್.ರಘು, ಇದೀಗ ಮೈಸೂರಿನ ಆರ್.ಟಿ ನಗರ ಬಡಾವಣೆಯಲ್ಲಿ ನೂತನವಾಗಿ ‘ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆ’ ( nypunya-school-of-excellence ) ಆರಂಭಿಸುತ್ತಿದ್ದಾರೆ. ಈ ಶಾಲೆಯ ಲಾಂಛನ ಬಿಡುಗಡೆ ಸಮಾರಂಭ ಗುರುವಾರ ನಡೆಯಿತು.
ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಜೀ ರವರು ನೂತನ ಶಾಲೆಯ ಲಾಂಛನ ಬಿಡುಗಡೆಗೊಳಿಸಿ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವಿಶ್ವದರ್ಜೆಯ ಶಿಕ್ಷಣವನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಹಾಗೂ ಸಾಂಸ್ಕೃತಿಕ ಹಾಗೂ ಶಿಕ್ಷಣದ ರಾಜಧಾನಿಯೆಂದೇ ಪ್ರಸಿದ್ಧಿಯಾಗಿರುವ ಮೈಸೂರಿನಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಆರ್. ರಘು ರವರು ಹೊಸದಾಗಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಎಂಬ ಸಂಸ್ಥೆ ಆರಂಭಿಸಿರುವುದಕ್ಕೆ ಶುಭಕೋರಿ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಗುರುಕುಲ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು, ಮಕ್ಕಳಲ್ಲಿ ಜಾಗತಿಕ ವೇಗದ ಜಗತ್ತಿನೊಂದಿಗೆ ಪರಂಪರೆ ಉಳಿಸಿ ಬೌದ್ಧಿಕತೆಯನ್ನು ವಿಸ್ತರಿಸುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಅಧ್ಯಕ್ಷ ಆರ್.ರಘು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ನೀತಿಯನ್ನು ಅಳವಡಿಸಿಕೊಂಡು ಪರಂಪರೆ ಆಧರಿಸಿ ವೇಗದ ಜಗತ್ತಿನೊಂದಿಗೆ ಹೆಜ್ಜೆ ಹಾಕುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆ ನೀಡುವ ಸದುದ್ದೇಶದೊಂದಿಗೆ ICSC ಪಠ್ಯಕ್ರಮ ಹೊಂದಿರುವ ಶಾಲೆ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಪವಿತ್ರ ಚೈತನ್ಯ ಸ್ವಾಮೀಜಿ ರವರು, ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಡಾ.ರವಿಕುಮಾರ್ ಹಾಗೂ ಪ್ರಾಂಶುಪಾಲರಾದ ಶಿಲ್ಪಾ ಪ್ರಶಾಂತ್ ಉಪಸ್ಥಿತರಿದ್ದರು.
key words : Mysore-nypunya-school-of-excellence-r.raghu-logo-released