ಮೈಸೂರು,ಫೆಬ್ರವರಿ,4,2023(www.justkannada.in): ಕಾಂಗ್ರೆಸ್ ನಲ್ಲಿ ಟಿಕೆಟ್ ಘೋಷಣೆ ಪ್ರಹಸನ ಮುಂದುವರೆದಿದ್ದು, ತಮ್ಮ ಆಪ್ತ ಮಾಜಿ ಶಾಸಕ ವಾಸು ಅವರಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಚಾಮರಾಜ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿರುವ ಮಾಜಿ ಶಾಸಕ ವಾಸು ಅವರ ಜಯಲಕ್ಷ್ಮಿಪುರಂ ನಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯ್ಲಿ ಮುನಿಸು ಶಮನ ಮಾಡಲು ಯತ್ನಿಸಿದರು. ಹಾಗೆಯೇ ವಾಸು ಅವರ ಮನೆಯಲ್ಲೇ ಉಪಹಾರ ಸೇವನೆ ಮಾಡಿದರು.
ಸದ್ಯ ವಾಸು ಅವರು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ವಾಸುರಿಗೆ ಟಿಕೆಟ್ ಕೈ ತಪ್ಪುವ ಮಾತುಗಳು ಕೇಳಿಬಂದ ಹಿನ್ನೆಲೆ ನಾಯಕರಿಂದ ವಾಸು ಅಂತರ ಕಾಯ್ದುಕೊಂಡಿದ್ದರು. ಈ ಮಧ್ಯೆ ಈಗಾಗಲೇ ವಾಸು ಅವರ ಪುತ್ರರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಾಸು ಅವರ ಮನೆಗೆ ವೀರಪ್ಪ ಮೊಯ್ಲಿ ಭೇಟಿ ನೀಡಿದ್ದಾರೆ.
ಇದೇ ವೇಳೆ ವಾಸು ಅವರಿಗೆ ಟಿಕೆಟ್ ಘೋಷಿಸಿದ ವೀರಪ್ಪ ಮೊಯ್ಲಿ, ಮೂಲ ಕಾಂಗ್ರೆಸಿಗರನ್ನ ಕಾಯುವುದೇ ನನ್ನ ಕೆಲಸ. ನಾನು ಮತ್ತು ಮಾಜಿ ಶಾಸಕ ವಾಸು ಮೂಲ ಕಾಂಗ್ರೆಸಿಗರು. ಯಾರಿಗೂ ಯಾರ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ಮಾಜಿ ಶಾಸಕ ವಾಸುಗೆ ಟಿಕೆಟ್ ಖಚಿತ. ವಾಸು ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ವಾಸು ಬಲಿಷ್ಟವಾದ ಅಭ್ಯರ್ಥಿ. ಮೊದಲ ಪಟ್ಟಿಯಲ್ಲಿ ವಾಸು ಅವರ ಹೆಸರು ಇರುತ್ತೆ. ಸಿದ್ದರಾಮಯ್ಯ ಬಣ ಇಲ್ಲ, ಇದು ಕಾಂಗ್ರೆಸ್ ಬಣ. ತನ್ವೀರ್ ಸೇಠ್ ಅವರು ಅನೇಕ ಬಾರಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರ ಬೇರು ಕಾಂಗ್ರೆಸ್ ನಲ್ಲಿ ಬಲವಾಗಿದೆ ಎಂದು ಹೇಳಿದರು.
ನಾನು ಯಾರ ಜೊತೆ ಮುನಿಸಿಕೊಂಡಿಲ್ಲ. ನಾನು ಆಕ್ಟಿವ್ ಪಾಲಿಟಿಕ್ಸ್ ನಿಂದ ದೂರು ಸರಿದಿಲ್ಲ. ಕೆಲವು ವಿಷಯದಲ್ಲಿ ನಾನು ಹಿಂದೆ ಇರಬಹುದಷ್ಟೆ. ನನಗೆ ಯಾರ ಜೊತೆಗೂ, ಪಕ್ಷದ ಜೊತೆಗೂ ಬೇಸರವಿಲ್ಲ. ಕಾಂಗ್ರೆಸ್ ಪಕ್ಷ ಒಡೆದ ಮನೆ ಆಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಬರೆದುಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಕೊರತೆ ಇಲ್ಲ. ಮುಖ್ಯಮಂತ್ರಿ ಆಗುವ ಅವಕಾಶ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ನಾನು ಬದುಕಿರುವ ತನಕ ಕಾಂಗ್ರೆಸ್ ಪಕ್ಷದಲ್ಲಿರುವೆ. ನನ್ನ ಜೊತೆ ವಾಸು ಅವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇರ್ತಾರೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಇನ್ನು ಸಿಡಿ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ಡಿ.ಕೆ ಶಿವಕುಮಾರ್ ಸಮರ್ಥವಾಗಿ ಉತ್ತರ ಕೊಟ್ಟಿದ್ದಾರೆ. ಸಾಕಷ್ಟು ಸಿಡಿಗಳಿವೆ, ಚುನಾವಣೆ ಸಂದರ್ಭದಲ್ಲಿ ಇಂತಹ ಸಿಡಿಗಳು ಸಾಕಷ್ಟು ಬರುತ್ತೆ. ಸಿಡಿ ವಿಚಾರ ಇಟ್ಟುಕೊಂಡು ಡಿಕೆಶಿ ಬ್ಲಾಕ್ ಮೇಲ್ ಮಾಡಲ್ಲ, ಬಿಜೆಪಿ ಬ್ಲ್ಯಾಕ್ ಮೇಲ್ ಮಾಡಬಹುದು. ವೈಯಕ್ತಿಕ ವಿಚಾರವನ್ನ ಸಿಬಿಐ ಕೊಡಲು ಬರುವುದಿಲ್ಲ ಎಂದರು.
ಟಿಕೆಟ್ ಘೋಷಣೆಯಾಗುವರೆಗೂ. ಸಿದ್ದರಾಮಯ್ಯನವರು ಕೂಡ ಆಕಾಂಕ್ಷಿ. ಎಐಸಿಸಿ ಟಿಕೆಟ್ ಘೋಷಣೆ ಮಾಡುವುದಕ್ಕಿಂತ ಮುನ್ನ ಎಲ್ಲರೂ ಆಕಾಂಕ್ಷಿಗಳೇ. ಎರಡು ಕ್ಷೇತ್ರಗಳಿಗೆ ಯಾರು ಟಿಕೆಟ್ ಆಕಾಂಕ್ಷಿಗಳಿಲ್ಲ. ಎರಡು ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಯಾರು ಕೂಡ ಯೋಚನೆ ಮಾಡಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ವೀರಪ್ಪ ಮೊಯ್ಲಿ ಹೇಳಿದರು.
Key words: mysore-P.Vasu- Former CM- Veerappa Moily -announced -ticket