ಮೈಸೂರು, ಮೇ 29, 2019 : (www.justkannada.in news) ಪಾರಂಪರಿಕ ಕಟ್ಟಡಗಳ ನವೀಕರಣ ಹಾಗೂ ಪುನಶ್ಚೇತನ ಕಾರ್ಯವನ್ನು ಹೇಗೆ ಮಾಡಬೇಕು ಎಂಬುದಕ್ಕೆ ತಾಜ ನಿದರ್ಶನದಂತಿದೆ ಮೈಸೂರಿನ ಜಗನ್ಮೋಹನ ಅರಮನೆ.
ಕಳೆದ 8 ತಿಂಗಳಿಂದ ಜಗನ್ಮೋಹನ ಅರಮನೆಯ ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ವಿಧಿಸಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಪರಿಣಾಮ ಈಗ ಶೇ.90ರಷ್ಟು ನವೀಕರಣ ಹಾಗೂ ಪುನಶ್ಚೇತನ ಕಾರ್ಯ ಪೂರ್ಣಗೊಂಡಿದೆ.
ಒಂದೆಡೆ, ಮೈಸೂರಿನ ರೈಲ್ಚೆ ಇಲಾಖೆ ಹಾಗೂ ರಾಜ್ಯ ಸರಕಾರದ ನಡುವೆ ಪಾರಂಪರಿಕ ಕಟ್ಟಡ ಸಂರಕ್ಷಣೆ ಸಂಬಂಧ ಮುಸುಕಿನ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಜಗನ್ಮೋಹನ ಅರಮನೆ ಪುನಶ್ಚೇತನ ಕೆಲಸ ಸದ್ದಿಲ್ಲದೆ ಅಚ್ಚುಕಟ್ಟಾಗಿ ಪೂರ್ಣಗೊಂಡಿದೆ.
ದೇಶ-ವಿದೇಶದ ಅಪಾರ ಪ್ರವಾಸಿಗರನ್ನ ಆಕರ್ಷಿಸುತ್ತಿರುವ , ಅಪರೂಪದ ವಸ್ತುಗಳ ಭಂಡಾರವನ್ನೇ ಹೊಂದಿರುವ ಮೈಸೂರಿನ ಹೆಮ್ಮೆಯ ‘ ಜಗನ್ಮೋಹನ ಅರಮನೆ’ ( ಜಯಚಾಮರಾಜೇಂದ್ರ ಚಿತ್ರಕಲಾ ಶಾಲೆ ) ದುರಸ್ತಿ ಮತ್ತು ಪುನಶ್ಚೇತನ ಕಾರ್ಯ ಗಮನಿಸಿದಾಗ ಪಾರಂಪರಿಕ ಕಟ್ಟಡಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದು ಮನದಟ್ಟಾಗುತ್ತದೆ.
ಜುಲೈನಲ್ಲಿ ಸಾರ್ವಜನಿಕರು, ಪ್ರವಾಸಿಗರ ವೀಕ್ಷಣೆಗೆ ಅರಮನೆಯನ್ನು ಮುಕ್ತಗೊಳಿಸಲಾಗುವುದು ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಬುಧವಾರ ಪತ್ರಕರ್ತರ ಜತೆ ಮಾತನಾಡಿದ ಪ್ರಮೋದಾದೇವಿ ಒಡೆಯರ್ ಹೇಳಿದಿಷ್ಟು…..
ಜಗನ್ಮೋಹನ ಅರಮನೆ ಪಾರಂಪರಿಕ ಕಟ್ಟಡ. ಜತೆಗೆ ಹಳೇಯ ಕಟ್ಟಡವಾಗಿರುವ ಕಾರಣ ದುರಸ್ತಿ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು. ಜಿ.ಎನ್.ಹೆರಿಟೇಜ್ ಮ್ಯಾಟರ್ಸ್ನವರಿಂದ 1861ರಲ್ಲಿ ಈ ಕಟ್ಟಡವನ್ನು ಕಟ್ಟಿದಾಗ ಹೇಗಿತ್ತೋ ಅದೇ ಮಾದರಿಯಲ್ಲಿ ಪುನಶ್ಚೇತನಗೊಳಿಸಲು ಸಾಕಷ್ಟು ಶ್ರಮಿಸಿದ್ದೇವೆ, ನೆಲಹಾಸು, ಹೆಂಚುಗಳ ಬದಲಾವಣೆ, ಅಲಲ್ಲಿ ಹಾಳಾಗಿದ್ದ ಗೋಡೆಯ ದುರಸ್ತಿಗೆ ಸುಣ್ಣದ ಗಾರೆಯನ್ನೇ ಬಳಸಲಾಗಿದೆ.
ಚಿತ್ರಕಲಾ ಶಾಲೆಯಲ್ಲಿದ್ದ ಹಳೆಯ ಚಿತ್ರಕಲೆಗಳು, ಪುರಾತನ ಚಿತ್ರಗಳನ್ನು ಸಂರಕ್ಷಣೆ ಮಾಡಲಾಗಿದೆ. ಅಂದಾಜು 2 ಸಾವಿರಕ್ಕೂ ಹೆಚ್ಚು ಚಿತ್ರಕಲೆಗಳಿವೆ. ಈ ಎಲ್ಲವನ್ನೂ ಏಕಕಾಲದಲ್ಲಿ ಪ್ರದರ್ಶಿಸಲಾಗದ ಕಾರಣ ಆಗಾಗ್ಗೆ ಚಿತ್ರಕಲೆಗಳನ್ನು ಬದಲಾಯಿಸುವ ಮೂಲಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಮೇಲಿನ ಹಾಲ್ನಲ್ಲಿ ವೀಕ್ಷಕರಿಗೆ ಪರಿಚಯಿಸುವ ಸಲುವಾಗಿ ಹಳೇಯ ಕಾಲದ ವಾರ್ನಿಷ್ ಅನ್ನು ಹಾಗೆಯೇ ಉಳಿಸಲಾಗಿದೆ. ಹಳೆಯ ಬೃಹತ್ ಗಡಿಯಾರವನ್ನು ಸಂರಕ್ಷಣೆ ಮಾಡಿ, ಪುನಶ್ಚೇತನಗೊಳಿಸಿದ್ದೇವೆ.
120 ರಿಂದ 150 ರೂ.ದರ ನಿಗದಿ :
ಚಿತ್ರಕಲಾ ಶಾಲೆಯ ದುರಸ್ತಿ ಮತ್ತು ಪುನಶ್ಚೇತನ ಕಾರ್ಯಕ್ಕೆ ಸಾಕಷ್ಟುಅನುದಾನ ಖರ್ಚಾಗಿರುವ ಕಾರಣ 75 ರೂ.ಗಳಿದ್ದ ಚಿತ್ರಕಲಾ ಶಾಲೆಯ ಪ್ರವೇಶ ದರವನ್ನು 120 ರಿಂದ 150 ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ ಪ್ರವೇಶ ದರದಲ್ಲಿ ರಿಯಾಯಿತಿ ನೀಡಲಾಗುವುದು. ವಿದೇಶಿ ವೀಕ್ಷಕರ ಪ್ರವೇಶ ದರಕ್ಕೆ ಸಂಬಂಧಿಸಿದಂತೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.
KEY WORDS : mysore-palace-heritage-