ಮೈಸೂರು, ಜೂ.28, 2019 :(www.justkannada.in news) ಅರಮನೆ ಎದುರಿನ ಗರಿಕೆ ಮಾಳ ಜಾಗ ರಾಜಮನೆತನಕ್ಕೆ ಸೇರಿದ್ದು ಎಂದು ಸರ್ವೋಚ್ಛ ನ್ಯಾಯಲಯವೇ ತೀರ್ಪು ನೀಡಿದ್ದರೂ ನಮ್ಮ ಹೆಸರಿಗೆ ಖಾತೆ ಮಾಡಿಕೊಡಲು ಸರಕಾರ ಸ್ಪಂದಿಸುತ್ತಿಲ್ಲ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅಸಮಧಾನ ವ್ಯಕ್ತಪಡಿಸಿದರು.
ಮೈಸೂರು ಅರಮನೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಳಿದಿಷ್ಟು…
ಹಿಂದಿನ ಸರಕಾರ ನಡೆಸಿದ ರಾಜಕಾರಣಿಯ ದ್ವೇಷದಿಂದಾಗಿ ರಾಜಮನೆತನದ ಆಸ್ತಿ ವ್ಯಾಜ್ಯವಾಗಿ ಪರಿಣಮಿಸಿದೆ. ಸ್ವಾತಂತ್ರ್ಯಾನಂತರ ಆಯಾಯ ಸರಕಾರಗಳು ಅಲ್ಲಿನ ಸಂಸ್ಥಾನಗಳಿಗೆ ನೀಡಿವೆ. ಆದರೆ, ಇಲ್ಲಿ ಮಾತ್ರ ಹೊಸ ಹೊಸ ರಾಜಕಾರಣಿಗಳು ಅಧಿಕಾರಕ್ಕೆ ಬಂದಾಗ ಹಿಂದಿನ ವಿಚಾರಗಳು ಗೊತ್ತಿಲ್ಲದೆ ಸಮಸ್ಯೆ ತಂದಿಡುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರು ಅರಮನೆಯನ್ನು ಸರಕಾರ ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದರಿಂದ ವ್ಯಾಜ್ಯವಾಯಿತು. ಆದರೆ, ಎಲ್ಲ ನ್ಯಾಯಾಲಯಗಳಲ್ಲೂ ನಮ್ಮಂತೆ ಆಗಿದೆ. ಸುಪ್ರೀಂಕೋರ್ಟ್ ನಲ್ಲಿ ಮುಂಬೈ ಸಂಸ್ಥಾನವೊಂದರ ಪ್ರಕರಣ ನಮಗಿಂತ ಮೊದಲು ವಿಚಾರಣೆಗೆ ಬರಬೇಕಿದೆ. ಇದಕ್ಕಾಗಿ 9 ಜನ ನ್ಯಾಯಾಧೀಶರ ಸಂವಿಧಾನ ಪೀಠ ರಚನೆಯಾಗಬೇಕಿದೆ. ಹೀಗಾಗಿ ನಮ್ಮ ಪ್ರಕರಣ ವಿಳಂಬವಾಗುತ್ತಿದೆ ಎಂದರು.
ಕುರಬಾರಹಳ್ಳಿಯಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ದಾನ ನೀಡಿದ್ದ 20 ಎಕರೆ ಭೂಮಿಯನ್ನು ಆ ಸಂಸ್ಥೆ ಬಳಸಿಕೊಳ್ಳದಿರುವುದರಿಂದ ಸರಕಾರ ಮೈಸೂರು ವಿವಿಗೆ ಕೊಟ್ಟಿದೆ. ಆ ಜಾಗವನ್ನು ಮರಳಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೇ ಕೊಡುವಂತೆ ಹಾಗೂ ಆ ಜಾಗದಲ್ಲಿ ಆಯಿಷ್ ಅಥವಾ ಮೈಸೂರು ವಿವಿ ಕಟ್ಟಡ ಕಟ್ಟಿದರೂ ಅಲ್ಲಿಗೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡುವಂತೆ ಕೋರಿ ಸರಕಾರಕ್ಕೆ ಪತ್ರ ಬರೆದಿರುವುದಾಗಿ ಪ್ರಮೋದಾದೇವಿ ಒಡೆಯರ್ ಅವರು ತಿಳಿಸಿದರು.
ಮನುವನ ಸಾರ್ವಜನಿಕ ವೀಕ್ಷಣೆಗೆ
ಮೈಸೂರು ರಾಜವಂಶಸ್ಥರ ಸಮಾಧಿ ಸ್ಥಳ ಮನುವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ರಾಜ ವಂಶಸ್ಥರ ಸುಮಾರು 45 ಸಮಾಧಿಗಳು ಮನುವನದಲ್ಲಿದೆ. ಇದರ ಸಂರಕ್ಷಣೆ ಮತ್ತು ಪುನಶ್ಚೇತನ ಕಾರ್ಯವನ್ನು ಶ್ರೀಕಂಠದತ್ತ ಒಡೆಯರ್ ಪತ್ರಿಷ್ಠಾನದಿಂದ ಕೈಗೆತ್ತಿಕೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ರಾಜಕೀಯಕ್ಕೆ ಬರಲ್ಲ :
ನನಗೆ ರಾಜಕಾರಣ ಅರ್ಥವಾಗುತ್ತೆ. ಆದರೆ, ರಾಜಕಾರಣ ಮಾಡಲು ಬರಲ್ಲ. ಹಾಗಾಗಿ ನಾನು ರಾಜಕೀಯಕ್ಕೆ ಬರಲ್ಲ ಎಂದ ಅವರು, ನಮ್ಮ ಕೆಲಸಗಳು -ಸಾಮಾಜಿಕ ಕೆಲಸ ಮಾಡಲು ರಾಜಕಾರಣಕ್ಕೇ ಬರಬೇಕು ಅಂತೇನಿಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಸಂಸದರಾಗಿದ್ದರೂ ಯಾವತ್ತೂ ವೈಯಕ್ತಿಕ ಕೆಲಸ ಮಾಡಿಕೊಳ್ಳಲಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಅರಮನೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಶ್ರೀಕಂಠದತ್ತ ಒಡೆಯರ್ ಪ್ರತಿಷ್ಠಾನದ ಕಾರ್ಯದರ್ಶಿ ವೆಸ್ಲಿ ಉಪಸ್ಥಿತರಿದ್ದರು.
key words : mysore-palace-pramodadevi-wodeyar-press.meet