ನವದೆಹಲಿ, ಅ.13, 2021 : (www.justkannada.in news ) ವಿಶ್ವವಿದ್ಯಾಲಯಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿ ಅರ್ಹತೆಗೆ ನಿಗದಿ ಪಡಿಸಿದ್ದ ‘ ಪಿಎಚ್.ಡಿ ಕಡ್ಡಾಯ ಮಾನದಂಡ’ಕ್ಕೆ ಯುಜಿಸಿ ಎರಡು ವರ್ಷಗಳ ವಿನಾಯ್ತಿ ನೀಡಿ ಆದೇಶಿಸಿದೆ.
ಪಿಎಚ್.ಡಿ ಕಡ್ಡಾಯ ಮಾನದಂಡ ಅನ್ವಯವಾಗುವ ದಿನಾಂಕವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಎರಡು ವರ್ಷಗಳವರೆಗೆ ವಿಸ್ತರಿಸಿದೆ. ದೇಶದಲ್ಲಿ ಕೋವಿಡ್ ಪಿಡುಗನ್ನು ಗಮನದಲ್ಲಿಟ್ಟುಕೊಂಡು ಯುಜಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿಭಾಗಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ 2021ರ ಜುಲೈ 1 ರಿಂದ ಪಿಎಚ್.ಡಿ ಅನ್ನು ಕಡ್ಡಾಯಗೊಳಿಸಲಾಗಿತ್ತು. ಈ ನಿಯಮ ಜಾರಿಯನ್ನು 2023ರ ಜುಲೈ 1ರ ವರೆಗೆ ಮುಂದೂಡಿರುವುದಾಗಿ ಮಂಗಳವಾರ ಯುಜಿಸಿ ಪ್ರಕಟಣೆ ತಿಳಿಸಿದೆ.
ಅಡಕತ್ತರಿಯಲ್ಲಿ ಕೆಎಸ್ಒಯು :
ಕರ್ನಾಟಕ ರಾಜ್ಯ ಮುಕ್ತ ವಿವಿ ಕಳೆದ ತಿಂಗಳಷ್ಟೆ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಸಂದರ್ಶನ ನಡೆಸಿತ್ತು. ಈ ವೇಳೆ ಅಭ್ಯರ್ಥಿಗಳಿಗೆ ಪಿಎಚ್ಡಿ ಕಡ್ಡಾಯಗೊಳಿಸಿದ್ದ ಕಾರಣ, ನೆಟ್, ಸ್ಲೆಟ್ ಪರೀಕ್ಷೆ ತೇರ್ಗಡೆಹೊಂದಿದ್ದ ಅಭ್ಯರ್ಥಿಗಳಿಗೆ ಸಂದರ್ಶನದ ಅವಕಾಶ ನಿರಾಕರಿಸಲಾಗಿತ್ತು.
ಆದರೆ ಇದೀಗ, ಯುಜಿಸಿಯೇ ಪಿಎಚ್ಡಿ ಕಡ್ಡಾಯ ಆದೇಶವನ್ನು ಎರಡು ವರ್ಷಗಳ ಅವಧಿಗೆ ಮುಂದೂಡಿರುವುದು ಮುಕ್ತ ವಿವಿಗೆ ಹೊಸ ಸಂಕಷ್ಟ ಸೃಷ್ಠಿಸಿದೆ.
ತಜ್ಞರ ಅಭಿಪ್ರಾಯ :
ಕರ್ನಾಟಕ ರಾಜ್ಯ ಮುಕ್ತ ವಿವಿ ಕಳೆದ ತಿಂಗಳಷ್ಟೆ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಸಂದರ್ಶನ ನಡೆಸಿದ್ದು ಸರಿಯಷ್ಟೆ, ಆದರೆ ಈ ತನಕ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡದಿರುವ ಕಾರಣ ಮತ್ತೆ ಹೊಸದಾಗಿ ಸಂದರ್ಶನ ನಡೆಸಬೇಕಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ಕಾರಣ, ಅ.12 ರಂದು ಯುಜಿಸಿ ಹೊರಡಿಸಿರುವ ಹೊಸ ಆದೇಶದನ್ವಯ, ನೆಟ್, ಸ್ಲೆಟ್ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಸಹ ನೇರ ಸಂದರ್ಶನಕ್ಕೆ ಪರಿಗಣಿಸಬೇಕಾಗಿದೆ. ಆದ್ದರಿಂದ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕರ ನೇರ ಸಂದರ್ಶನ ಆಯ್ಕೆಗೆ ಸಂಬಂಧಿಸಿದಂತೆ ಮರು ಆಯ್ಕೆ ಪ್ರಕ್ರಿಯೇ ನಡೆಯಬೇಕು ಎನ್ನುತ್ತಾರೆ ತಜ್ಞರು.
key words : Mysore-Ph.D-relaxation-two-years-KSOU-open.university-direct-interview