ಮೈಸೂರು, ನ.27, 2019 : (www.justkannada.in news ) : ಅರೇ… ಯೇ… ಹೂಂಕರಿಸಿದ ಅವನು… ಇಸ್ ಶಹರ್ ಮೇ ಮೇರೇ ಸಾಥ್ ಲಡನೆ ವಾಲಾ ಕೋಯೀ ನಹಿ ಹೈ ಕ್ಯಾ… ಹ್ಹ ಹ್ಹ ಹ್ಹಾ… ಅಬ್ಬರಿಸಿ ನಕ್ಕ ಅವನು… ಇಡೀ ದೊಡ್ಡ ಕೆರೆ ಮೈದಾನದ ಕುಸ್ತಿ ಅಖಾಡ ನಿಶ್ಯಬ್ದವಾಗಿತ್ತು… ಎಲ್ಲರ ತಲೆಯೂ ತಗ್ಗಿತ್ತು… ಖಣಖಣನೇ ಕುಣಿಯುತ್ತಿದ್ದ ಅವನ ಎದೆಭುಜ… ಮಿರಮಿರನೆ ಮಿಂಚುತ್ತಿದ್ದ ಅವನ ತೊಡೆಯ ಬಲಿಷ್ಠ ಮಾಂಸಖಂಡಗಳು…
ಅವನು ಫಜಲ್… ಫಝಲುದ್ದೀನ್… ಅಲಿಯಾಸ್ ಪೈಲ್ವಾನ್ ಫಜಲ್… ದೂರದ ಲಾಹೋರಿನಿಂದ ಮೈಸೂರಿಗೆ ಕುಸ್ತಿ ಮಾಡಲೆಂದೇ ಬಂದಿದ್ದ ರಕ್ಕಸ ಪೈಲ್ವಾನ… ಸೆಣೆಸಿದ್ದ ಮೈಸೂರಿನ ಎಲ್ಲ ಮಲ್ಲರನ್ನೂ ಸೋಲಿಸಿ ಹೆಡೆಮುರಿ ಕಟ್ಟಿ ಅಖಾಡದಲ್ಲಿ ನಿಂತುಕೊಂಡು ಅಬ್ಬರಿಸುತ್ತಾ ಅರಚಿದ್ದ…
ಕರ್ಕೊಂಡ್ ಬನ್ನಿ… ಯಾರೇ ಆದ್ರೂ ಸೈ…
ಆವತ್ತು ಸಂಜೆ ಕನ್ನೇಗೌಡನ ಕೊಪ್ಪಲಿನ ದೊಡ್ಡ ಅರಳೀಮರದ ಕೆಳಗೆ ಸೇರಿದ್ದ ಸಭೆಯಲ್ಲಿ ನೀರವ ಮೌನ… ಎಲ್ಲರೂ ಯಾರದೋ ಬರುವಿಕೆಗಾಗಿ ಕಾಯುತ್ತಿರುವಂತಿತ್ತು… ಅಷ್ಟರಲ್ಲೇ ಚಡಾವಿನ ಸದ್ದು … ಎಲ್ಲರೂ ಭಯ ಭಕ್ತಿಯಿಂದ ಎದ್ದು ಪಂಚೆ ಸರಿ ಮಾಡಿಕೊಂಡು ನಿಂತರು…
ಖಲೀಫರು , ಉಸ್ತಾದರು , ಕೊಪ್ಪಲಿನ ಯಜಮಾನರುಗಳು… ಭಾರವಾದ ಹೆಜ್ಜೆ ಹಾಕುತ್ತ ಬಂದು ಅರಳಿ ಕಟ್ಟೆಯ ಮೇಲೆ ಕುಳಿತು ಸುತ್ತಲೂ ಸೇರಿದ್ದವರನ್ನೊಮ್ಮೆ ನೋಡಿದರು… ಎಲ್ಲರ ಮುಖದಲ್ಲೂ ಪ್ರೇತಕಳೆ…
ಇದು ಊರ ಮರ್ವಾದಿ ಪ್ರಶ್ನೆ… ಏನ್… ನಾವೇನ್ ಕೈಗೆ ಬಳೆ ತೊಟ್ಕಂಡಿದೀವಾ… ಕರೆಸ್ರಿ ಎಲ್ಲಾ ಪೈಲ್ವಾನರನ್ನೂ… ಖಲೀಫರು ಗಂಭೀರ ದನಿಯಲ್ಲಿ ಹೇಳಿದರು… ಕೊಪ್ಪಲಿನ ಶಿವಣ್ಣ , ಮಂಡಿ ಮೊಹಲ್ಲಾದ ತಿಪ್ಪಯ್ಯನೋರ ಗರಡಿಯ ಅಲ್ತಾಫ್ ಒಳಗೊಂಡಂತೆ ಹೆಸರಾಂತ ಯುವ ಪೈಲ್ವಾನರುಗಳು ಬಂದು ಸಾಲಾಗಿ ನಿಂತರು…
ಕುಳಿತಿದ್ದ ಕಟ್ಟೆಯಿಂದ ಕೆಳಕ್ಕಿಳಿದ ಖಲೀಫರು ಒಬ್ಬೊಬ್ಬನೇ ಪೈಲ್ವಾನನನ್ನು ಪರೀಕ್ಷೆ ಮಾಡಿದರು… ಸುಮಾರು ಅರ್ಧ ಘಂಟೆಯ ಬಳಿಕ… ಉಹೂಂ… ಫಜಲ್ ಗೆ ಸರಿಸಮನಾದ ಪೈಲ್ವಾನ ಇಲ್ಲೊಬ್ಬನೂ ಇಲ್ಲ…
ನೆರೆದಿದ್ದ ಎಲ್ಲರ ಕಣ್ಣುಗಳಲ್ಲಿದ್ದ ಆಸೆಯ ದೀಪ ಫಕ್ಕನೆ ನಂದಿಹೋಯಿತು… ಇದ್ದ ಚೂರುಪಾರು ನಂಬಿಕೆಯೂ ಹುಸಿಯಾಗಿ ಹೋಯಿತೇ… ಏನ್ ಹಾಗಾದ್ರೆ… ಪೈಲ್ವಾನರುಗಳ ಜಮಾನ ಮುಗಿದೇ ಹೋಯಿತೇನು…
ಸ್ವಲ್ಪ ಹೊತ್ತು ಕಳೆದಿರಬಹುದೇನೋ…
ಹೈ… ಹೈ … ಬಾ .. ಬಾ.. ಬಾ… ದನಕರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಖಲೀಫರ ಕಣ್ಣಿಗೆ ಬಿದ್ದ…
ಕರೀರಿ ಅವನನ್ನ…
ಬಂದು ನಿಂತ…
ನೀಳಕಾಯ… ಆರಡಿ ಎತ್ತರದ ಅಜಾನುಬಾಹು… ಚೂಪಾದ , ತಿವಿಯುವಂತಿದ್ದ ತೀಕ್ಷ್ಣ ಕಣ್ಣುಗಳು… ನಾಗರದ ಹೆಡೆಯಂತೆ ಅರಳಿ ನಿಂತ ಭುಜಕೀರ್ತಿ… ಶಿಲೆಯಲ್ಲಿ ಕಡೆದಿಟ್ಟಂತಹ ದೇಹ…
ಏನ್ ನಿನ್ನ ಹೆಸರು… ಖಲೀಫರು ಕೇಳಿದ್ರು
ಬಸವ…
ನೋಡೂ…ನಾಳೆಯಿಂದ ನೀನು ಗದ್ದೆ ಕೆಲ್ಸಕ್ಕೆ ಹೋಗೋ ಹಾಗಿಲ್ಲ… ನಿನ್ನ ಮತ್ತು ನಿನ್ನ ಮನೆಯವರ ಖರ್ಚನ್ನು ನಾವೇ ಗ್ರಾಮಸ್ಥರೇ ಭರಿಸುತ್ತೇವೆ… ನಾಳೆಯಿಂದ ನೀನು ನಮ್ಮ ಖಲೀಫರ ಶಿಷ್ಯ… ಅವರು ಹೇಳಿದ ಹಾಗೆ ಸಾಮು ಮಾಡ್ಬೇಕು… ಚೆನ್ನಾಗಿ ಸಾದ್ನೇ ಮಾಡ್ಬೇಕು…
ನಾನಾ… ಆಶ್ಚರ್ಯಚಕಿತನಾದ ಬಸವ…
ಹೌದು ನೀನೇ… ಖಲೀಫರು ಹೇಳಿದ್ರು… ನಿನ್ನನ್ನ ಇಡೀ ದುನಿಯಾ ತಿರುಗಿ ನೋಡ್ಬೇಕು ಅಂಥಾ ಪೈಲ್ವಾನ್ ಆಗಿ ತಯಾರ್ ಮಾಡ್ತೀನಿ…
ಮಾತಿಲ್ಲದೆ ಅವರ ಪಾದಕ್ಕೆ ಹಣೆ ಹಚ್ಚಿದ…
ಒಂದು ಶುಭ ಮುಹೂರ್ತದಲ್ಲಿ… ಕೊಪ್ಪಲಿನ ಗರಡಿಯಲ್ಲಿ ಬಸವನ ಕೈಯ್ಯಲ್ಲಿ ಅಂಬಾ ಪೂಜೆ ಮಾಡಿಸಿದರು… ಆವತ್ತು ಇಡೀ ಕನ್ನೇಗೌಡನ ಕೊಪ್ಪಲಿನಲ್ಲಿ ಹಬ್ಬದ ವಾತಾವರಣ… ಊರ ಹಿರಿಯರೆಲ್ಲಾ ಆವತ್ತು ಗರಡಿ ಮನೆ ಮುಂದೆ ನೆರೆದಿದ್ದರು… ಆವತ್ತು ಬಸವಯ್ಯನಿಗೆ ಹನುಮಾನ್ ಲಂಗೋಟಿ ಕಟ್ಟಿಸಿದರು… ಯಾವುದೇ ಪೈಲ್ವಾನನಿಗೆ ಶುರುವಿನಲ್ಲಿ ಅಂಬಾಪೂಜೆ ಹನುಮಾನ್ ಪೂಜೆ ಮಾಡಿಸಿ ಹನುಮಾನ್ ಲಂಗೋಟಿ ಕಟ್ಟಿಸೋದೇ ಸಂಪ್ರದಾಯ… ಬಸವಯ್ಯನ ಸಾಧನೆ ಶುರು ಆಯ್ತು…
ದಿನ ಬೆಳಿಗಿನ ಜಾವ ಮೂರು ಘಂಟೆಗೆ ಎಬ್ಬಿಸಿ… ಚಾಮುಂಡಿ ಬೆಟ್ಟದ ತಪ್ಪಲಿಗೆ ಕರೆದೊಯ್ದು… ಅವನ ಭುಜದ ಮೇಲೆ ಎರಡೂ ಕಡೆಗೂ ಇಬ್ಬರು ಪೈಲ್ವಾನರನ್ನು ಕೂರಿಸಿ…
ಈಗ ಬೆಟ್ಟ ಹತ್ತಿ ಇಳೀಬೇಕು ನೀನು… ಕೂತಿರೋರು ಕೆಳ್ಗೆ ಇಳಿಯಂಗಿಲ್ಲ… ನೀನ್ ಎಲ್ಲೂ ಇಳಿಸಂಗಿಲ್ಲ… { ಇದೇ ರೀತಿ ಜಗಜಟ್ಟಿಗಳಾಗಿದ್ದ ಮಹಾರಾಜಾ ರಣಧೀರ ಕಂಠೀರವ ನರಸರಾಜ ಒಡೆಯರು ತಮ್ಮ ಹೆಗಲ ಮೇಲೆ ಒಂದು ಎಮ್ಮೆಕರುವನ್ನು ಹೊತ್ತುಕೊಂಡು ದಿನಾಲೂ ಬೆಟ್ಟ ಹತ್ತಿ ಇಳಿಯುತ್ತಿದ್ದುದು ವಾಡಿಕೆ }
ಬಸವಯ್ಯನನ್ನು ಹುರಿದುಂಬಿಸಲು ಖಲೀಫರು ಪಕ್ಕದಲ್ಲೇ ತಾವೂ ಬೆಟ್ಟ ಹತ್ತುತ್ತಾ ಪದ ಕಟ್ಟಿ ಹಾಡ್ತಾ ಇದ್ರು … ಆದ್ರೂ ಅವನ ಮೈ ಕಟ್ಟಬೇಕಲ್ಲ… ನೀವು ನಂಬುತ್ತೀರೋ ಇಲ್ವೋ…ಇಡೀ ಕೊಪ್ಪಲಿನ ತಾಯಂದಿರು ದಿನಾಲೂ ತಮ್ಮ ಎದೆಹಾಲನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಅವನಿಗೆ ಕುಡಿಯಲು ಕೊಡುತ್ತಿದ್ದರು…
ಕಾಲಕಳೆದಂತೆ ಬಸವಯ್ಯನ ಮೈ ಅರಳತೊಡಗಿತು… ಕುಸ್ತಿಯ ಪಟ್ಟುಗಳು ಒಂದೊಂದೇ ಕರಗತವಾಗ ತೊಡಗಿದವು… ಆರು ತಿಂಗಳು… ಪೈಲ್ವಾನ ತಯಾರಾಗಿ ನಿಂತ…
ಹಾಕ್ರೋ… ಸವಾಲ್ ನೋಟೀಸು ಈಗ… ಖಲೀಫರ ದನಿಯಲ್ಲಿ ಆತ್ಮವಿಶ್ವಾಸ ತುಂಬಿ ನಿಂತಿತ್ತು…
ಸವಾಲ್ ನೋಟೀಸ್ ಹಂಚಿದ್ದೇ ತಡ… ಏನು… ಎಲ್ಲಾ ಕಡೆಯೂ ಇದೇ ಮಾತು… ಕುಂಬಾರ ಕೊಪ್ಪಲು , ತೊಣಚೀ ಕೊಪ್ಪಲು , ಒಂಟಿ ಕೊಪ್ಪಲು , ಕುರುಬಾರಹಳ್ಳಿ ಎಲ್ಲ ಕಡೆ… ಯಾರೋ ಬಸವಯ್ಯ ಅಂತೇ… ಪೈಲ್ವಾನ್ ಫಜಲ್ ಗೇನೇ ಸವಾಲ್ ಹಾಕವನಂತೆ…
ಕುಸ್ತಿಯ ದಿನವೂ ಬಂದೇ ಬಿಟ್ಟಿತು… ಜನವೋ ಜನ… ದೊಡ್ಡಕೆರೆ ಮೈದಾನದ ಅಖಾಡಾದಲ್ಲಿ ಕಾಲು ಇಡೋದಕ್ಕೆ ಜಾಗವಿಲ್ಲದಷ್ಟು ಜನ… ಗಲಾಟೆಯೋ ಗಲಾಟೆ… ಅಷ್ಟರಲ್ಲೇ ಚಪ್ಪಾಳೆಯ ಸದ್ದಾಯಿತು… ಚಪ್ಪನೇ ನಿಶ್ಯಬ್ದ… ಸೈನಿಕರು ಬಂದು ಸಾಲಾಗಿ ನಿಂತರು… ಅವರ ಹಿಂದೆಯೇ… ನಿಧಾನವಾದ ಹೆಜ್ಜೆಗಳನ್ನಿಡುತ್ತಾ ಬಂದರು… ದೈವಾಂಶಸಂಭೂತರಾದ ಮಹಾತ್ಯಾಗಮಾಯೀ ಮಹಾಜನೋಪಕಾರಿ ರಾಜರ್ಷಿ ನಾಲ್ವಡಿ ಪ್ರಭುಗಳು… ಅವರದೇ ಅಧ್ಯಕ್ಷತೆ ಆವತ್ತು…
ಬಂದ… ಪೈಲ್ವಾನ್ ಫಜಲ್… ಅಹಂಕಾರ ತುಂಬಿ ಚೆಲ್ಲಾಡುತ್ತಿತ್ತು… ಕೌಪೀನ ಕಟ್ಟಿ ಅಖಾಡಕ್ಕಿಳಿದು… ಎರಡೂ ಕೈಗಳನ್ನು ಮೇಲೆತ್ತಿಕೊಂಡು ಅಂಗ ಪ್ರದರ್ಶನ ಮಾಡುತ್ತಾ…
ಕೌನ್ರೆ ಉನೇ… ಬುಲಾವ್… ಅಬ್ಬರಿಸುತ್ತಿದ್ದ…
ಅವನ ತಿಮಿರು ನೋಡಿ ನಸುನಕ್ಕ ಪ್ರಭುಗಳು ಬಾಗಿಲಿನತ್ತ ತಿರುಗಿದರು… ಮಂದಗಮನೆಯಂತೆ ತಲೆಯ ಮೇಲೊಂದು ಮುಂಡಾಸು ಬಿಗಿದು… ಒಂದು ಶುಭ್ರ ಬಿಳಿ ಪಂಚೆ ತೊಟ್ಟು ಇನ್ನೊಂದು ಬಿಳಿ ಪಂಚೆಯನ್ನು ಮೇಲೆ ಹೊದ್ದುಕೊಂಡು ತಲೆತಗ್ಗಿಸಿ ಕೈಮುಗಿಯುತ್ತಾ ಅಖಾಡಕ್ಕೆ ಬಂದ ಬಸವಯ್ಯನನ್ನು ಕಂಡ ಫಜಲ್ ನ ಅಬ್ಬರ ಇನ್ನೂ ಜೋರಾಯಿತು… ಅದರತ್ತ ಗಮನವನ್ನೇ ಕೊಡದ ಬಸವಯ್ಯ… ತಗ್ಗಿಸಿದ ತಲೆಯೊಂದಿಗೆ ಕೈಗಳನ್ನು ಮುಗಿಯುತ್ತಾ ಪ್ರಭುಗಳ ಕಾಲಿಗೆ ಹಣೆ ಹಚ್ಚಿ ಅಖಾಡದ ಮಣ್ಣಿನೊಳಕ್ಕೆ ಇಳಿದು ನಿಂತ…
ತಲೆಯ ಮುಂಡಾಸು ತೆಗೆದು ಪಕ್ಕಕ್ಕೆ ಕೊಟ್ಟ… ಕಣ್ಣೆವೆ ಇಕ್ಕುವಷ್ಟರಲ್ಲೇ ಮೇಲಿನ ಹೊದಿಕೆಯನ್ನೂ… ಉಟ್ಟಿದ್ದ ಪಂಚೆಯನ್ನೂ ಕಿತ್ತೆಸೆದು ಎದೆಯುಬ್ಬಿಸಿ… ಬಲಗಾಲನ್ನು ಸ್ವಲ್ಪವೇ ಮೇಲೆತ್ತಿ… ಬಲಗೈಯ್ಯನ್ನು ಆಕಾಶಕ್ಕೆ ಬೀಸಿ ಕೆಳಕ್ಕೊಗೆದು ರಪ್ಪನೆ ತೊಡೆ ತಟ್ಟಿ… ಎರಡೂ ಕೈಗಳನ್ನು ಅಗಲವಾಗಿ ಹರವಿ ಫಜಲ್ ನನ್ನ ತನ್ನ ಕಣ್ಣುಗಳಲ್ಲೇ ತಿವಿದ…
ಧಿಮೀಲ್…
ತಟ್ಟಿದ ತೊಡೆ ಸದ್ದಿಗೆ ಬೀಸುತ್ತಿದ್ದ ಗಾಳಿ ತಟ್ಟನೆ ನಿಂತು ಹೋಯಿತು… ಸದ್ದು ಕೆರೆ ಏರಿ ಮೇಲೆ ನಡೆದು ಹೋಗುತ್ತಿದ್ದವರಿಗೂ ಕೇಳಿಸಿತು… ಮದ್ಯಾನ್ಹದ ಬಿಸಿಲಿಗೆ ದೇಹ ರವರವನೇ ಹೊಳೆಯುತ್ತಿತ್ತು…
ಫಜಲ್ ಮೆಲ್ಲನೆ ಉಗುಳು ನುಂಗಿದ…
ಇಬ್ಬರೂ ಅಜಾನುಬಾಹುಗಳೇ… ಮದಗಜಗಳಂತೆ… ಹಸಿದ ಹುಲಿಗಳಂತೆ… ಕಾದಾಟ ಶುರುವಾಯ್ತು… ಯಾರು ಹೆಚ್ಚು… ಯಾರು ಕಡಿಮೆ… ಅರೆ.. ಬಿದ್ದ.. ಅರರೇ ಎದ್ದೇಬಿಟ್ಟ… ಹಾಕ್… ಹಾಕು… ಕಳಾರಿ ಪಟ್ ಹಾಕು… ಅರೇ … ತೋಡ್… ತೋಡ್… ಟಿಬ್ಬಿಡಾವ್… ಟಿಬ್ಬಿಡಾವ್… ತೋಡ್ … ತೋಡ್ …
ಖುರ್ಚಿಯ ತುದಿಯಂಚಿಗೇ ಕುಳಿತು ಇವೆಲ್ಲವನ್ನೂ ನೋಡುತ್ತಾ ಕುಳಿತಿದ್ದ ಖಲೀಫರು… ಅರೇ … ಸವಾರಿ… ಸವಾರಿ… ಕೂಗಿಕೊಂಡ್ರು…
ಬಸವಯ್ಯ ಕ್ಷಣಮಾತ್ರದಲ್ಲೇ ಸವಾರಿಪಟ್ಟು ಹಾಕಿ ಫಜಲ್ ನನ್ನು ಹಿಡಿದ… ಬಿಡಿಸಿಕೊಳ್ಳಲು ಫಜಲ್ ಕೊಸರುತ್ತಿದ್ದಂತೆ ಅನಾಮತ್ತು ಆ ದೈತ್ಯ ದೇಹಿಯನ್ನು ಮೇಲಕ್ಕೆತ್ತಿದ್ದ ಬಸವಯ್ಯ ರಪ್ಪನೆ ಕೆಳಕ್ಕೆ ಹಾಕಿ ಚಿತ್ ಮಾಡಿಬಿಟ್ಟ…
ಭೋರ್ಗರೆಯುವ ಚಪ್ಪಾಳೆಯ ಸದ್ದಿನೊಂದಿಗೆ ಜನ ಹುಚ್ಛೆದ್ದು ಅಖಾಡಕ್ಕೆ ನುಗ್ಗಿ ಪೈಲ್ವಾನ್ ಬಸವಯ್ಯನನ್ನು ಹೆಗಲಿಗೇರಿಸಿಕೊಂಡು ಕುಣಿಯತೊಡಗಿದರು… ಎಲ್ಲವನ್ನೂ ಕೊಸರಿ ಬಿಡಿಸಿಕೊಂಡ ಬಸವಯ್ಯ ಫಜಲ್ ನನ್ನು ತಬ್ಬಿ ಭುಜ ತಟ್ಟಿ… ಸೀದಾ ಹೋಗಿದ್ದೆ ನಾಲ್ವಡಿ ಪ್ರಭುಗಳ ಪಾದಗಳೆರಡನ್ನೂ ತಬ್ಬಿ ನಮಸ್ಕರಿಸಿದ…
ಪ್ರಸನ್ನಚಿತ್ತರಾಗಿದ್ದ ಪ್ರಭುಗಳು… ಮೈಸೂರಿನ ಮಾನ ಕಾಪಾಡಿದಿರಲ್ಲ ಬಸವಯ್ಯ… ಏನು ಬೇಕೋ ಹೇಳಿ…
ಮಹಾಸ್ವಾಮಿ… ಎಲ್ಲಾ ತಮ್ಮ ಆಶೀರ್ವಾದ… ತಾವು ಏನೇ ಕೆಲಸ ಕೊಟ್ಟರೂ ಆನಂದದಿಂದ ಮಾಡುತ್ತೇನೆ…
ಹೀಗೆ ಸಾಮಾನ್ಯ ಬಸವನಾಗಿದ್ದ ಯುವಕ… ಪೈಲ್ವಾನ್ ಬಸವಯ್ಯನವರಾಗಿ ಕಂಗೊಳಿಸಿದರು… ಇವತ್ತಿಗೂ ಅವರು ಸಾಮು ಮಾಡಿದ ಗರಡಿ ಪೈಲ್ವಾನ್ ಬಸವಯ್ಯನವರ ಗರಡಿ ಎಂದೇ ಖ್ಯಾತವಾಗಿ ಕನ್ನೇಗೌಡನ ಕೊಪ್ಪಲಿನಲ್ಲಿದೆ… ದೂರದ ಲಾಹೋರಿನಲ್ಲೂ ಇವರ ಹೆಸರು ಮನೆಮಾತಾಗಿತ್ತು…
ಏಕ್ ಬಸವಯ್ಯ ನಾಮ್ ಕಾ ಪೈಲ್ವಾನ್ ಹೈ… ಮಹೀಶೂರ್ ಮೇ… ಜೋ ಫಜಲ್ ಕೋ ಹರಾದಿಯಾ…
ಇಡೀ ಕನ್ನೇಗೌಡ ಕೊಪ್ಪಲಿನ ಸಮಸ್ತ ತಾಯಂದಿರ ಎದೆಹಾಲು ಕುಡಿದು ಮೈಸೂರಿನ ಕೀರ್ತಿಯನ್ನು ಮುಗಿಲೆತ್ತರಕ್ಕೇರಿಸಿದ ಪೈಲ್ವಾನ್ ಬಸವಯ್ಯನವರು ಮೈಸೂರಿಗರ ಜನಮಾನಸದಲ್ಲಿ ಅಜರಾಮರರಾಗಿ ಉಳಿದುಹೋದರು…
ಕೃಪೆ : ಧರ್ಮೇಂದ್ರ ಕುಮಾರ್ ಅರೇನಹಳ್ಳಿ , #ಮರೆತುಹೋದಮೈಸೂರಿನ_ಪುಟಗಳು_2
key words : mysore-phailwan-basavaiha-pakisthan-karnatka-kusthi