ಮೈಸೂರು, ಮಾ.26, 2021: (www.justkannada.in news) : ಬೇರೆಲ್ಲಾ ವಿಷಯಗಳಿಗೆ ಫೋನ್ ಮಾಡುತ್ತಿದ್ರು, ಈ ವಿಷಯಕ್ಕೂ ಫೋನ್ ಮಾಡಿ ಮಾಹಿತಿ ಪಡೆಯಬಹುದಿತ್ತು, ಆದ್ರೆ ಯಾಕೆ ಫೋನ್ ಮಾಡಿಲ್ಲವೋ ಗೊತ್ತಿಲ್ಲ…
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತರ ಕಾರ್ಯ ವೈಖರಿ ಬಗೆಗೆ ಬಿಜೆಪಿ ಹಿರಿಯ ಮುಖಂಡ ಅಡಗೂರು ಎಚ್.ವಿಶ್ವನಾಥ್ ನೀಡಿದ್ದ ಟೀಕೆಗೆ ಪ್ರತಿಯಾಗಿ ಪೊಲೀಸ್ ಆಯುಕ್ತರು ಮಾಧ್ಯಮದವರಿಗೆ ಈ ರೀತಿ ಪ್ರತಿಕ್ರಿಯಿಸಿ ಪ್ರಶ್ನಾರ್ತಕ ಸೂಚಕದಂತೆ ಕೈ ಬೆರಳುಗಳನ್ನು ಮೇಲಕೆತ್ತಿದ್ದರು.
ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ.ಚಂದ್ರಗುಪ್ತ ಹೇಳಿದಿಷ್ಟು…
ಮೈಸೂರು ರಿಂಗ್ ರಸ್ತೆ ಅಪಘಾತ ಪ್ರಕರಣದ ಘಟನೆ ಸಂಬಂಧ ಶೀಘ್ರ ಸ್ಪಂದಿಸಿದ 112 ವಾಹನ ಸಿಬ್ಬಂದಿ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿಗೆ ಮಾತ್ರ. ಪ್ರಶಂಸನಾ ಪತ್ರ ನೀಡಿಲಾಗಿದೆ. ಇದು ಸಿಬ್ಬಂದಿಗಳಲ್ಲಿ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ಮಾತ್ರ . ಈ ಹಿಂದೆಯೂ ಈ ರೀತಿ ಪ್ರಶಂಸೆ ಮಾಡಿದ್ದೇವೆ. ಇದೇನು ಹೊಸದಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಶ್ವನಾಥ್ ರ ಟೀಕೆ ಬಗ್ಗೆ ಪ್ರಶ್ನಿಸಿದಾಗ, ರಿಂಗ್ ರೋಡ್ ಅಪಘಾತದ ಬಳಿಕ ಅನೇಕ ಜನಪ್ರತಿನಿಧಿಗಳು ದೂರುವಾಣಿ ಕರೆ ಮಾಡಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ನಾನೇ ಖುದ್ದು ಮಾಹಿತಿ ನೀಡಿದೆ. ಆದರೆ ಬೇರೆಲ್ಲಾ ವಿಷಯಗಳಿಗೂ ಕರೆ ಮಾಡುತ್ತಿದ್ದ ವಿಶ್ವನಾಥ್ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಯಾಕೆ ಕರೆ ಮಾಡಲಿಲ್ಲವೋ ಗೊತ್ತಿಲ್ಲ. ಮಾಹಿತಿ ಕೊರತೆಯಿಂದ ಹೇಳಿಕೆ ನೀಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಪಘಾತ ಘಟನೆಗೆ ಸಂಬಂಧಿಸಿದಂತೆ ಭಿನ್ನ ಹೇಳಿಕೆಗಳು ವ್ಯಕ್ತವಾಗಿರುವ ಬಗ್ಗೆ ಡಾ.ಚಂದ್ರಗುಪ್ತ ಅವರನ್ನು ಪ್ರಶ್ನಿಸಿದಾಗ, ಘಟನೆ ಸಂಬಂಧ ಸ್ಥಳದಲ್ಲಿದ್ದ ಸಿಬ್ಬಂದಿಗಳ ವಿಚಾರಣೆ ನಡೆಯುತ್ತಿದೆ. ಐ ವಿಟ್ನೆಸ್ ಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೆ ಘಟನೆಗೆ ಸಂಬಂಧಿಸಿದ ಸ್ಪಷ್ಟ ಮಾಹಿತಿ ನೀಡಲು ಸಾಧ್ಯ ಎಂದರು.
key words : mysore-police-commissioner-vishwanath-chandraguptha