ಮೈಸೂರು,ಫೆಬ್ರವರಿ,4,2022(www.justkannada.in): ಆನ್ ಲೈನ್ ಮೂಲಕ ವಂಚನೆ ಮಾಡಿದ್ದ ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಂಚನೆಗೊಳಗಾದವರಿಗೆ ಕೊಡಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ನಗರ, ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ ಗೆ ಸಂಬಂಧಿಸಿದಂತೆ, ಮೈಸೂರು ಚೋರನಹಳ್ಳಿ ನಿವಾಸಿ ರಜನಿಕಾಂತ್ ಅವರ ಕ್ರೆಡಿಟ್ ಕಾರ್ಡ್ನಿಂದ ಒಟ್ಟು 44,000 ರೂ ಹಣ, ಜೆ.ಪಿ ನಗರ ನಿವಾಸಿ ಸೋಹನ್ ಜೈನ್ ಎಸ್ ಎಂಬುವವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ 6,000 ರೂ ಹಣ, ವಿಜಯನಗರ ನಿವಾಸಿ ಮಹದೇವಸ್ವಾಮಿ ಅವರಿಗೆ ಆನ್ಲೈನ್ ಬ್ಯಾಂಕಿಂಗ್ ನಲ್ಲಿ ಒಟಿಪಿ ಪಡೆದುಕೊಂಡು 25.000 ರೂ. ಹಣ ವಂಚಿಸಿರುವ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಸದರಿ 3 ಪ್ರತ್ಯೇಕ ಪ್ರಕರಣಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ಒಟ್ಟು 75.000/- ರೂ ಹಣವನ್ನು ಸೆನ್ ಕ್ರೈಂ ಪೊಲೀಸ್ ಠಾಣೆಯ ಕ್ವಿಕ್ ರೆಸ್ಟಾಂನ್ಸ್ ಟೀಮ್ ನ ಸಿಬ್ಬಂದಿಗಳು ತ್ವರಿತವಾಗಿ ಕ್ರಮ ಕೈಗೊಂಡು ಸಂಬಂದಪಟ್ಟ ಬ್ಯಾಂಕ್ ಮ್ಯಾನೇಜರ್, ನೋಡಲ್ ಆಫೀಸರ್, ಮತ್ತು ಕೋರ್ ಬ್ಯಾಂಕಿಂಗ್ ಲೀಗಲ್ ಟೀಮ್ ಅವರನ್ನು ಸಂಪರ್ಕಿಸಿ ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಂಚನೆಗೊಳಪಟ್ಟು ಹಣ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.
ಈ ಕಾರ್ಯವನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಮೈಸೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜಯಕುಮಾರ್.ಎನ್ ಮತ್ತು ಸಿಬ್ಬಂದಿಗಳು ಮಾಡಿದ್ದಾರೆ.
ಈ ಉತ್ತಮ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ: ಚಂದ್ರಗುಪ್ತ ಪ್ರಶಂಸಿಸಿದ್ದು, ಮೈಸೂರು ನಗರ ವ್ಯಾಪ್ತಿಯ ಯಾವುದೇ ಸಾರ್ವಜನಿಕರಿಗೆ ಅನ್ಲೈನ್ ಮೂಲಕ ಬ್ಯಾಂಕ್ ಹಣ ವಂಚನೆಯಾದ್ದಲ್ಲಿ ಕೂಡಲೇ ಮೈಸೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಿಗೆ ಖುದ್ದು ಅಥವಾ ದೂರವಾಣಿ ಸಂಖ್ಯೆ 0821-2418598 ಗೆ ಸಂಪರ್ಕಿಸುವುದು. ಅಲ್ಲದೆ ಅನ್ಲೈನ್ ನಲ್ಲಿ NCCRP PORTAL (NATIONAL CYBER CRIME REPORTING PORTAL) ಟೋಲ್ ಫ್ರಿ ದೂರವಾಣಿ ಸಂಖ್ಯೆ 155260 ಗೆ ದೂರು ಸಲ್ಲಿಸಲು ಸೂಚಿಸಿದ್ದಾರೆ. ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್ ಗೆ ಬಂದಿರುವ ಒಟಿಪಿಗಳನ್ನು ದೂರವಾಣಿ ಮುಖಾಂತರ ಕೇಳುವ ಯಾವುದೇ ವ್ಯಕ್ತಿಗಳಿಗೆ ನೀಡದೆ ಸೈಬರ್ ಅಪರಾಧಗಳಿಂದ ಸುರಕ್ಷಿತರಾಗಿರಬೇಕೆಂದು ಕಿವಿಮಾತು ಹೇಳಿದ್ದಾರೆ.
Key words: Mysore Police-online-fraudulent