ಮೈಸೂರು,ಜ,28,2020(www.justkannada.in): ಅಪ್ರಾಪ್ತ ಬಾಲಕಿಗೆ ನಿಶ್ಚಯವಾಗಿದ್ದ ಬಾಲ್ಯ ವಿವಾಹವನ್ನ ಮೈಸೂರಿನ ಪೊಲೀಸರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ತಾಲ್ಲೂಕಿನಲ್ಲಿ 15 ವರ್ಷದ ಬಾಲಕಿಗೆ ಆಕೆಯ ತಂದೆ ಮದುವೆ ನಿಶ್ಚಯ ಮಾಡಿದ್ದರು. ಕುಟುಂಬಸ್ಥರ ಸಂಬಂಧದಲ್ಲೆ ಮದುವೆ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಜ.30ರಂದು ಮದುವೆ ನಿಶ್ವಯ ಮಾಡಲು ಮಾತುಕತೆಗೆ ಎರಡು ಕುಟುಂಬಗಳು ಸಜ್ಜಾಗಿದ್ದವು.
ಆದರೆ ಅಪ್ರಾಪ್ತ ಬಾಲಕಿ ತನಗೆ ಮದುವೆ ಇಷ್ಟವಿಲ್ಲವೆಂದು ಬೆಂಗಳೂರು ಸಿಟಿ ಪೊಲೀಸರಿಗೆ ಸ್ನೇಹಿತೆಯ ಫೇಸ್ ಬುಕ್ ಪೋಸ್ಟ್ ನಲ್ಲಿ ತನ್ನ ಕಷ್ಟ ತೋಡಿಕೊಂಡಿದ್ದಳು. ಬಾಲಕಿಯ ಪೋಸ್ಟ್ ಆಧಾರದ ಮೇಲೆ ಬೆಂಗಳೂರು ಪೊಲೀಸರು ಮೈಸೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿದ ಜಯಪುರ ಠಾಣಾ ಪೊಲೀಸರು ಮದುವೆ ಮಾತುಕತೆ ತಡೆದಿದ್ದಾರೆ. ನಿನ್ನೆ ಅಪ್ರಾಪ್ತೆ ಮನೆಗೆ ತೆರಳಿದ ಜಯಪುರ ಠಾಣೆ ಇನ್ಸ್ ಪೆಕ್ಟರ್ ಅಪ್ರಾಪ್ತೆ ತಂದೆಗೆ ಹಾಗೂ ಕುಟುಂಬಸ್ಥರಿಗೆ ತಿಳಿಹೇಳಿ ಮದುವೆ ಮಾಡದಂತೆ 18 ವರ್ಷ ತುಂಬುವವರೆಗೆ ಮದುವೆ ಪ್ರಸ್ತಾಪ ಮಾಡದಂತೆ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಡಬೇಕಾಗಿಯೂ ಇನ್ಸ್ ಪೆಕ್ಟರ್ ಸೂಚನೆ ನೀಡಿದ್ದು ಈ ಮೂಲಕ ಅಪ್ರಾಪ್ತೆಗೆ ನಡೆಯಬೇಕಿದ್ದ ಬಾಲ್ಯ ವಿವಾಹವನ್ನ ಪೊಲೀಸರು ತಡೆದಿದ್ದಾರೆ.
Key words: mysore-police- Stop -Child Marriage