ಮೈಸೂರು,ಮೇ,21,2024 (www.justkannada.in): 2024-25ನೇ ಸಾಲಿನ ಶಾಲೆಗಳನ್ನು ಪುನಾರಾರಂಭಿಸಲು ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ ಉಪನಿರ್ದೇಶಕರು(ಆಡಳಿತ) ಆದೇಶಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಡಿಡಿಪಿಐ ಹೆಚ್.ಕೆ ಪಾಂಡು, 2024-25ನೇ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ಜಿಲ್ಲಾ/ತಾಲ್ಲೂಕು ಅನುಪಾಲನಾ ಅಧಿಕಾರಿಗಳು ಶಾಲಾ ಪ್ರಾರಂಭದ ಮೊದಲನೇ ದಿನದಿಂದಲೇ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಖಾತರಿ ಪಡಿಸಿಕೊಂಡು ಶಾಲಾ ಮುಖ್ಯ ಶಿಕ್ಷಕರುಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು ಹಾಗೂ ತಾಲ್ಲೂಕು ಹಾಗೂ ಶಾಲಾ ಹಂತದಲ್ಲಿ ಆಗತ್ಯ ತುರ್ತು ಕ್ರಮಗೊಳ್ಳಬೇಕು ಎಂದು ಸೂಚಿಸಿದ್ದಾರೆ.
2023-24ನೇ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಪೂರ್ಣಪ್ರಮಾಣದಲ್ಲಿ ಇಂದೀಕರಿಸಿ ಮಕ್ಕಳಿಗೆ ಪ್ರಗತಿ ಪತ್ರಗಳನ್ನು ಹಾಗೂ ಬೇರೆ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳಿಗೆ ವರ್ಗಾವಣೆ ಪತ್ರಗಳನ್ನು ಕೋರಿಕೆ ಮೇರೆಗೆ ವರ್ಗಾಯಿಸುವುದು. ಮುಂದುವರಿದು. 2024-25ನೇ ಸಾಲಿಗೆ ದಾಖಲಾಗುವ ಮಕ್ಕಳ ಮಾಹಿತಿಯನ್ನು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಇಂಧೀಕರಿಸಲು ಸೂಚನೆ ನೀಡಿದ್ದಾರೆ.
ಹಾಗೆಯೇ 2024-25ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮವನ್ನು ಆಯುಕ್ತರ ದಿನಾ೦ಕ 28/03/2024ರ ಆದೇಶದಂತೆ ದಿನಾಂಕ 29/05/2024 ರಂದು ಸಿದ್ಧತೆ ಮಾಡಿಕೊಂಡು, ದಿನಾಂಕ 30/05/2024ಕ್ಕೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಶಾಲೆಗೆ ತಳಿರು ತೋರಣ ಕಟ್ಟಿ, ಡೋಲು, ನಗಾರಿ, ಎತ್ತಿನ ಗಾಡಿ ಮೂಲಕ ಮಕ್ಕಳನ್ನು ಕರೆತಂದು ಗುಲಾಬಿ ನೀಡಿ, ಸ್ವಾಗತಿಸಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡು ಶಾಲಾ ಪ್ರಾರಂಭೋತ್ಸವ ಆಚರಿಸಬೇಕು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಾಗಿ ಸಿದ್ಧತೆಗಳನ್ನು ಪರಿಶೀಲಿಸಬೇಕು
ದಿನಾಂಕ 29/5/2024ರಿಂದ ದಾಖಲಾತಿ ಆಂದೋಲನ ನಡೆಸಿ ಮನೆ ಮನೆ ಭೇಟಿ ಮಾಡಿ ನಿಗಧಿತ ವಯೋಮಾನದ ಮಕ್ಕಳನ್ನು ಮನವೊಲಿಸಿ ಎಲ್ಲಾ ವಿದ್ಯಾರ್ಥಿಗಳನ್ನ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಶಾಲೆಗೆ ದಾಖಲಿಸಲು ಕ್ರಮ ವಹಿಸಬೇಕು ಈಗಾಗಲೇ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಹೆಚ್.ಕೆ ಪಾಂಡು ಸೂಚಿಸಿದ್ದಾರೆ.
Key words: Mysore, pre-preparation, start, School