ಮೈಸೂರಲ್ಲಿ ಪತ್ರಿಕಾದಿನಾಚರಣೆ : ಶಾಸಕ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರ ಮಾತಿನ ‘ ಏಟು-ಎದಿರೇಟು’..

 

ಮೈಸೂರು, ಜು.01, 2019 : (www.justkannada.in news) : ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾದಿನಾಚರಣೆ ಸಮಾರಂಭದಲ್ಲಿ ಶಾಸಕ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರ ಮಾತಿನ ಏಟು-ಎದಿರೇಟು ಗಮನ ಸೆಳೆಯಿತು.

ಮಾನಸ ಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮವಾರ ಪತ್ರಿಕಾದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್ ಸಹ ಭಾಗವಹಿಸಿದ್ದರು.

ಶಾಸಕ ಹರ್ಷವರ್ಧನ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ನನ್ನನ್ನು ಯಾರು ಕರೆ ಮಾಡಿ ಆಹ್ವಾನಿಸಿರಲಿಲ್ಲ. ಕೇವಲ ಆಹ್ವಾನಪತ್ರವಷ್ಟೆ ತಲುಪಿಸಲಾಗಿತ್ತು. ಆದರೆ ಈ ಸಮಾರಂಭದಲ್ಲಿ ಭಾಗವಹಿಸಲೇ ಬೇಕು ಎಂಬ ಉದ್ದೇಶದಿಂದ ಸ್ವಯಂ ಆಸಕ್ತಿಯಿಂದ ಬಂದಿದ್ದೇನೆ. ಮಾಧ್ಯಮಗಳು ಇಂದು ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಅಲ್ಲಿನ ಭಾಷ, ಪದ ಬಳಕೆ ಮಿತಿ ಮೀರಿದೆ. ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಯ ಗುಣಮಟ್ಟ ಕಣ್ಮರೆಯಾಗಿದೆ. ಟಿವಿ ಸಂದರ್ಶನಗಳಂತೂ ಕಿರುಚಾಡಿ, ಅಬ್ಬರಿಸುವ ರೀತಿ ನಡೆಯುತ್ತವೆ. ಆದ್ದರಿಂದ ನಾನು ಯಾವುದೇ ಟಿವಿ ಡಿಬೆಟ್ ಗಳಲ್ಲೂ ಭಾಗವಹಿಸುವುದಿಲ್ಲ ಎಂದರು.
ಈ ಮೊದಲು ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ಭಾಷೆಯ ಗುಣಮಟ್ಟ,(!) ಪ್ರಸ್ತುತ ಮಾಧ್ಯಮಗಳಲ್ಲಿ ಕಣ್ಮರೆಯಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಯಾವುದೋ ಒತ್ತಡದ ಸನ್ನಿವೇಶದಲ್ಲಿ ಬಾಯ್ ತಪ್ಪಿ ಆಡಿದ ಮಾತುಗಳನ್ನೇ ಪದೇ ಪದೇ ಟಿವಿಗಳಲ್ಲಿ ಪ್ರಸಾರ ಮಾಡುವ ಮೂಲಕ ಜನರಲ್ಲಿ ರಾಜಕಾರಣಿಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಇತ್ತೀಚಿನ ಉದಾಹರಣೆ ನೀಡುವುದಾದರೆ, ಸಿಎಂ ಕುಮಾರಸ್ವಾಮಿ ಅವರು ಯಾವುದೋ ಸಂದರ್ಭದಲ್ಲಿ ಆಡಿದ ಮಾತನ್ನೇ ಪದೇ ಪದೇ ಪ್ರಸಾರ ಮಾಡಿದ್ದು, ಕುಮಾರಸ್ವಾಮಿ ಅವರಿಗೆ ಆರೋಗ್ಯದ ಸಮಸ್ಯೆ ಇದೆ, ಚುನಾವಣೆಯಲ್ಲಿ ಮಗ ಸೋತಿರುವುದು..ಹೀಗೆ ಅನೇಕ ಒತ್ತಡಗಳಿರುತ್ತವೆ. ಈ ಕಾರಣಕ್ಕಾಗಿ ಏನೋ ಬಾಯ್ ತಪ್ಪಿ ಮಾತನಾಡಿದರೆ ಅದನ್ನು ದೊಡ್ಡದು ಮಾಡುವ ಅವಶ್ಯತೆ ಏನಿತ್ತು..? ಎಂದು ಪ್ರಶ್ನಿಸಿದರು.
ಪತ್ರಕರ್ತರು ಟಿಆರ್ಪಿ ಗಾಗಿ ಇಂಥ ಸುದ್ಧಿಗಳನ್ನು ಮಾಡ ಬಾರದು. ರಾಜಕಾರಣಿಗಳ ಒತ್ತಡಗಳನ್ನು ಅರ್ಥ ಮಾಡಿಕೊಂಡು ವರದಿ ಮಾಡಬೇಕು ಎಂದು ಸಲಹೆ ನೀಡಿದರು.
ನಂಜನಗೂಡಿನಲ್ಲಿ ನಮ್ಮ ಮಾಮ (ವಿ.ಶ್ರೀನಿವಾಸಪ್ರಸಾದ್) ಪತ್ರಿಕೆಗಳಿಗೆ, ಪತ್ರಕರ್ತರಿಗೆ ಅನೇಕ ರೀತಿ ಸಹಾಯ ಮಾಡಿದ್ದಾರೆ. ಏನೇನು ಮಾಡಿದ್ದಾರೆ ಎಂಬುದನ್ನು ನಾನು ಇಲ್ಲಿ ಹೇಳುವುದಿಲ್ಲ. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಮರು ದಿನದಿಂದಲೇ ಅವರ ವಿರುದ್ಧ ವರದಿ ಮಾಡತೊಡಗಿದರು. ಈ ಕಾರಣಕ್ಕಾಗಿಯೇ ನಾನು ಅಂಥ ಪತ್ರಿಕೆಗಳನ್ನು ಓದುವುದನ್ನೇ ನಿಲ್ಲಸಿದೆ ಎಂದು ಶಾಸಕ ಹರ್ಷವರ್ಧನ ಹೇಳಿಕೊಂಡರು.
ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಶಾಸಕ ಹರ್ಷವರ್ಧನ್ ಅವರು ಮಾಧ್ಯಮಗಳಲ್ಲಿನ ಗುಣಮಟ್ಟದ ಬಗ್ಗೆ ಮಾತನಾಡಿದರು. ಈಗ ಗುಣಮಟ್ಟ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು. ಆದರೆ ಸದನದಲ್ಲಿ ಶಾಸಕರೇ ಅಂಗಿ ಹರ್ಕೊಂಡು ಪ್ರತಿಭಟನೆ ನಡೆಸಿದಾಗ ಅದನ್ನು ಗುಣಮಟ್ಟವಾಗಿ ಹೇಗೆ ತಾನೆ ವರದಿ ಮಾಡಲು ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಶಾಸಕರ ಮಾತಿನ ಏಟಿಗೆ ಎದಿರೇಟು ನೀಡಿದ್ದು ವಿಶೇಷವಾಗಿತ್ತು.

key words : mysore-press.day-mla-mysore.press.club