ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕಾಗಿದೆ : ಜಿ.ಟಿ.ದೇವೇಗೌಡ

 

ಮೈಸೂರು, ಜು.01, 2019 : (www.justkannada.in news) : ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಮಾನಸ ಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮವಾರ ಪತ್ರಿಕಾದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಧ್ಯಮಗಳಿಂದ ನಡೆಯುತ್ತಿದೆ. ಈಗಲೂ ಅನೇಕ ಸಂಗತಿಗಳು ನಮಗೆ ಅರಿವಿಗೆ ಬರುವುದೇ ಮಾಧ್ಯಮಗಳ ಮೂಲಕವೇ. ಅದರಲ್ಲಿ ಅನುಮಾನವಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಕೆಲ ಮಾಧ್ಯಮಗಳು ಲಕ್ಷ್ಮಣ ರೇಖೆ ಮೀರಿ ವರ್ತಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಸರಕಾರ ನಿಯಂತ್ರಣ ಹೇರುವ ಬದಲು ಮಾಧ್ಯಮಗಳೇ ಸ್ವಯಂ ನಿಯಂತ್ರಣ ಹೇರಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.

ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ವಿವಿಧ ಮಾಧ್ಯಮಗಳ ಸಾಧಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರ ಸಂಯುಕ್ತ ಕರ್ನಾಟಕ ಪತ್ರಿಕೆ ಹಿರಿಯ ಪತ್ರಕರ್ತ ಎಂ.ಟಿ.ಮಹಾದೇವ್, ಯಶ್ ಟೆಲ್ ವಾಹಿನಿಯ ಸಂಪಾದಕಿ ಸಾಹಿತ್ಯ ಮಾತನಾಡಿದರು.

ಈ ಪೈಕಿ  ಸಾಹಿತ್ಯ ಅವರು ಮಾತನಾಡಿ, ಪ್ರಸ್ತುತ ಮಾಧ್ಯಮ ಕ್ಷೇತ್ರದ ಭ್ರಷ್ಟಚಾರದ ಬಗೆಗೆ ಹೆಚ್ಚು ಚರ್ಚೆ ನಡೆಯುತ್ತಿರುವುದು ವಿಪರ್ಯಾಸ. ಆದರೆ ಇಂಥ ಕಪ್ಪುಚುಕ್ಕೆಗಳು ಎಲ್ಲಾ ರಂಗಗಳಲ್ಲೂ ಇವೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ಸೇರಿದಂತೆ ಯಾವ ರೀತಿಯ ಭದ್ರತೆ ಇದೆ ಎಂಬುದನ್ನು ಮೊದಲು ಗಮನಿಸಬೇಕು. ಇಂಥ ಭದ್ರತೆಗಳನ್ನು ಒದಗಿಸುವ ಮೂಲಕ ಪತ್ರಕರ್ತರನ್ನು ಸದೃಢಗೊಳಿಸಬೇಕಾಗಿದೆ. ಪತ್ರಕರ್ತರು ಮನಸ್ಸು ಮಾಡಿದರೆ ಸಮಾಜ ಸುಧಾರಣೆ ಸಾಧ್ಯ. ಆದ್ದರಿಂದ ಮಾಧ್ಯಮ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಈ ಕ್ಷೇತ್ರಕ್ಕೆ ಬರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಹರ್ಷವರ್ಧನ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ , ಕರ್ನಾಟಕ ಮಾದ್ಯಮ ಅಕಾಡೆಮಿ ಅದ್ಯಕ್ಷ ಪದ್ಮರಾಜ ದಂಡಾವತಿ, ಪ್ರೊ. ಡಾ ಉಷಾರಾಣಿ, ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಸಿ.ಕೆ ಮಹೇಂದ್ರ, ಕಾರ್ಯದರ್ಶಿ ಲೊಕೇಶ್ ಬಾಬು ಭಾಗವಹಿಸಿದ್ದರು.

—-
key words : mysore-press.day-mla-mysore.press.club