ಮೈಸೂರು,ಸೆಪ್ಟಂಬರ್,10,2020(www.justkannada.in): ಮೈಸೂರಿನ ಪ್ರತಿಷ್ಠಿತ ಕಾಲೇಜುಗಳಲ್ಲೂ ಡ್ರಗ್ಸ್ ದಂಧೆ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮೈಸೂರಿನ ಶಾಲೆ, ಕಾಲೇಜುಗಳ ಆವರಣದಲ್ಲಿ ಡ್ರಗ್ ಸಿಗುತ್ತೆ. ನಗರದ ಮಹಾಜನ ಕಾಲೇಜು, ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ವೈದ್ಯಕೀಯ, ಸಂತ ಫಿಲೋಮಿನಾ ಕಾಲೇಜುಗಳಲ್ಲಿ ಡ್ರಗ್ ದಂಧೆ ಇದೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದ್ರೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಹೇಳಿದರು.
ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್ ಗಳ ಮೇಲೆ ದಾಳಿ ಮಾಡಿ. ನಾನು ಚಾಲೆಂಜ್ ಮಾಡುತ್ತೇನೆ. ಹಾಸ್ಟೆಲ್ ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ನಟ-ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಮೊದಲು ಕಾಲೇಜು ಹೈಸ್ಕೂಲ್ ನಲ್ಲಿ ದೊಡ್ಡ ಅನಾಹುತ ಆಗಲಿದೆ. ಅದಕ್ಕೆ ಮೊದಲು ನಾವು ಅಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಅವರ ಮಕ್ಕಳೇ ಇದರಲ್ಲಿ ಶಾಮೀಲು ಆಗಿದ್ದಾರೆ. ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದಾರೆ. ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಇಂದಿನಿಂದ ನಾವು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಮೈಸೂರಿನ ಹಲವು ಕಾಲೇಜಿನಲ್ಲಿ ಈ ಜಾಲ ಇದೆ. ಡಿಸಿಗೆ ಮನವಿ ಸಲ್ಲಿಸಿ ಜನಾಂದೋಲನ ಶುರು ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
Key words: mysore-prestigious- colleges – Drugs –shrirama sene-president- Pramod Muthalik