ಮೈಸೂರು, ಮೇ 17, 2021 (www.justkannada.in): ಕೋವಿಡ್ ಸಂಕಷ್ಟ ಕಾಲದಲ್ಲೂ ಖಾಸಗಿ ಶಾಲೆಗಳು ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಡ ಹೇರುತ್ತಿವೆ.
ಮೈಸೂರಿನ ಖಾಸಗಿ ಶಾಲೆಯೊಂದು ಮೇ 22ರೊಳಗೆ ಶುಲ್ಕ ಪಾವತಿಸುವಂತೆ ಪೋಷಕರಿಗೆ ಸಂದೇಶ ರವಾನಿಸಿದ್ದು, ದಾರಿ ಕಾಣದ ಪೋಷಕರು ರಾಜ್ಯ ಸರಕಾರದ ಮೊರೆ ಹೋಗಿದ್ದಾರೆ.
ಶಾಲೆಯ ಈ ಮೇಲ್ ಸಂದೇಶವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಟ್ವೀಟ್ ಮಾಡಿರುವ ಪೋಷಕರೊಬ್ಬರು ಈ ಕುರಿತು ಕ್ರಮ ವಹಿಸವಂತೆ ಆಗ್ರಹಿಸಿದ್ದಾರೆ.
ಕಳೆದ ವರ್ಷ ಒಂದು ಲಕ್ಷ ರೂ. ಇದ್ದ ಶುಲ್ಕ ಈ ಬಾರಿ ಏಕಾಏಕಿ ಒಂದೂವರೆ ಲಕ್ಷ ರೂ.ಗೆ ಏರಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ವಹಿಸಬೇಕೆಂದು ನೊಂದ ಪೋಷಕರು ಆಗ್ರಹಿಸಿದ್ದಾರೆ.
ಕೋವಿಡ್ ಆತಂಕದಿಂದಾಗಿ ಈ ವರ್ಷ ಸರಿಯಾಗಿ ತರಗತಿಗಳೇ ನಡೆದಿಲ್ಲ. ಆದರೂ ಶೇ.100ರಷ್ಟು ಟ್ಯೂಷನ್ ಶುಲ್ಕ ತೆಗೆದುಕೊಳ್ಳುತ್ತಿರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಯಾವುದೇ ಸೌಲಭ್ಯಗಳನ್ನು ಬಳಸಿಲ್ಲ. ಆದರೂ ಪೂರ್ಣ ಶುಲ್ಕ ಕೇಳುವುದು ಎಷ್ಟು ಸರಿ? ಈ ಬಗ್ಗೆ ಪ್ರಶ್ನಿಸಿದರೆ ಶಾಲಾ ಆಡಳಿತ ಮಂಡಳಿ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಡಿ ಪಾಲ್ ರೆಸಿಡೆನ್ಸಿಯಲ್ ಶಾಲೆ ಶುಲ್ಕ ಪಾವತಿಸುವಂತೆ ಪೋಷಕರಿಗೆ ಕಳುಹಿಸಿರುವ ಈ ಮೇಲ್ ಸಂದೇಶದ ಸ್ಕ್ರೀನ್ ಶಾಟ್ ನೊಂದಿಗೆ ಶಿಕ್ಷಣ ಸಚಿವರಿಗೆ ಈ ಸಂಬಂಧ ಕ್ರಮವಹಿಸುವಂತೆ ದಿವ್ಯಾ ಗೌಡ ಎಂಬುವವರು ಮನವಿ ಮಾಡಿದ್ದಾರೆ. ಆದರೆ ಈವರೆಗೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.