ಆ.29 ರಿಂದ ಮೈಸೂರು ರೇಸ್ ಆರಂಭ.

 

ಮೈಸೂರು, ಆ.27, 2019 🙁 www.justkannada.in news ) ಈ ಬಾರಿಯ ಮೈಸೂರು ರೇಸಿಂಗ್ ಋತುವಿಗೆ ಕಪ್ ಮತ್ತು ಟ್ರೋಫಿಗಳ ಮೌಲ್ಯವೂ ಸೇರಿದಂತೆ ಒಟ್ಟು 5,69,40,000 ರೂ. ಸ್ಟೇಕ್ಸ್ ಮೊತ್ತವನ್ನು ಘೋಷಿಸಲಾಗಿದೆ.

ಮೈಸೂರು ರೇಸ್ ಕ್ಲಬ್ ನ ನೂತನ ಅಧ್ಯಕ್ಷ ಡಾ,ಎನ್.ನಿತ್ಯಾನಂದರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೇಳಿದಿಷ್ಟು…
ಪ್ರಸಕ್ತ ಸಾಲಿನ ಮೈಸೂರು ರೇಸುಗಳು ಒಟ್ಟು 18 ದಿನಗಳು ನಡೆಯಲಿದ್ದು ಆ.29ರಿಂದ ಪ್ರಾರಂಭವಾಗಿ ಅಕ್ಟೋಬರ್ 30ಕ್ಕೆ ಕೊನೆಗೊಳ್ಳಲಿದೆ. ಸ್ಥಳೀಯ 17 ಕುದುರೆ ತರಬೇತುದಾರರು ಮತ್ತು ಚೆನ್ನೈನ ಮದ್ರಾಸ್ ರೇಸ್ ಕ್ಲಬ್ನ ತರಬೇತುದಾರರು ಸೇರಿದಂತೆ 45 ಪರಸ್ಥಳದ ಕುದುರೆ ತರಬೇತುದಾರರು ಈ ರೇಸಿಂಗ್ ಋತುವಿನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಅಲ್ಲದೇ ಭಾರತೀಯ ರೇಸಿಂಗ್ ಕ್ಷೇತ್ರದ ಖ್ಯಾತನಾಮ ಕುದುರೆ ಸವಾರರು ಸೇರಿದಂತೆ ಸುಮಾರು 100 ಮಂದಿ ಕುದುರೆ ಸವಾರರು ರೇಸಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ರೇಸಿಂಗ್ ಋತುವಿನಲ್ಲಿ ಒಟ್ಟು 450 ಕ್ಕೂ ಹೆಚ್ಚು ರೇಸ್ ಕುದುರೆಗಳು ಭಾಗವಹಿಸಲಿವೆ.
ಈ ಬಾರಿಯ ರೇಸಿಂಗ್ ಸೀಸನ್ನ ಪ್ರಮುಖ ಪಂದ್ಯವಾದ ಮೈಸೂರು ಡರ್ಬಿ ರೇಸ್ ಅ.20 ರಂದು ನಡೆಯಲಿದೆ. ಹಾಗೆಯೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮಾರಕ ಮಿಲಿಯನ್ (ಆ29), ಶ್ರೀ ಕೃಷ್ಣರಾಜ ಒಡೆಯರ್ ಸ್ಮಾರಕ ಟ್ರೋಫಿ (ಸೆ.5), ಮಹಾರಾಜಾಸ್ ಕಪ್ (ಸೆ.20), ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಮೈಸೂರು 2000 ಗಿನೀಸ್ (ಅ.4), ಗವರ್ನರ್ಸ್ ಕಪ್ (ಅ.10), ಮೈಸೂರು ದಸರಾ ಸ್ಪ್ರಿಂಟ್ ಚಾಂಪಿಯನ್ ಷಿಪ್ (ಅ.11) ಪ್ರಮುಖ ಪಂದ್ಯಗಳನ್ನು ಆಯೋಜಿಸಲಾಗಿದೆ.

ಮೈಸೂರು ರೇಸ್ ಕ್ಲಬ್ ಸ್ವತಂತ್ರ ಕ್ಲಬ್ ಮಾನ್ಯತೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಬಾರಿಯ ದೇಶದ ಪ್ರಮುಖ ರೇಸಿಂಗ್ ಕಾರ್ಯಕ್ರಮವಾದ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್ನ ಎರಡು ದಿನಗಳ ಪಂದ್ಯವನ್ನು 2020 ಫೆಬ್ರವರಿ 29 ಮತ್ತು ಮಾರ್ಚ್ 1 ರಂದು ನಡೆಸಲಾಗುವುದು.

ಮೈಸೂರು ರೇಸ್ ಕ್ಲಬ್ ಜಾಗಕ್ಕೆ ಸಂಬಂಧಪಟ್ಟಂತೆ ಗುತ್ತಿಗೆ ಕರಾರಿನ ನವೀಕರಣ ಕುರಿತ ಸಮಸ್ಯೆಗಳು ಬಗೆ ಹರಿದಿದ್ದು, ಕ್ಲಬ್ ಪರವಾಗಿ ಸರಕಾರವೂ ಉತ್ತಮ ಪ್ರತಿಕ್ರಿಯೆ ತೋರಿದ್ದು, ಸದ್ಯದಲ್ಲೇ ಈ ಬಗ್ಗೆ ರಾಜ್ಯ ಸರಕಾರದಿಂದ ಅಧಿಕೃತ ಆದೇಶ ಬರಲಿದೆ ಎಂದು ಡಾ.ನಿತ್ಯಾನಂದರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ರೇಸ್ ಕ್ಲಬ್ ನ ಪ್ರಭಾರ ಕಾರ್ಯದರ್ಶಿ ಡಾ.ಎಂ.ಆರ್.ಜಗನ್ನಾಥ್, ನೂತನವಾಗಿ ಆಯ್ಕೆಯಾದ ಸ್ಟೂವರ್ಡ್ ಗಳಾದ ವೈ.ಪಿ. ಉದಯಶಂಕರ್, ಟಿ.ಡಿ.ಮಹೇಶ್, ಕ್ಲಬ್ ಸಮಿತಿ ಸದಸ್ಯರಾದ ಬಿ.ಎನ್.ಕಾರಿಯಪ್ಪ, ಬಿ.ಯು.ಚೆಂಗಪ್ಪ, ಎಚ್.ಕುಸುಮಾಕರ ಶೆಟ್ಟಿ, ಎಂ.ಸಿ.ಮಲ್ಲಿಕಾರ್ಜುನ್, ಎಚ್.ಕೆ.ರಮೇಶ್ ಮತ್ತು ಸೀನಿಯರ್ ಸ್ಟೈಪೆಂಡಯರಿ ಸ್ಟೂವರ್ಡ್ ಕೆ.ಜಿ. ಅನಂತ ರಾಜ್ ಅರಸ್ ಸುದ್ದಿಗೋಷ್ಠಿಯಲ್ಲಿ ಇದ್ದರು.

 

key words : mysore-race-club-race-racing