ಮೈಸೂರು,ಸೆಪ್ಡಂಬರ್,2,2020(www.justkannada.in): ಮೈಸೂರು ರೈಲ್ವೆ ಮ್ಯೂಸಿಯಂನ ವಸ್ತುಸಂಗ್ರಹಾಲಯದಲ್ಲಿ ರಚಿಸಲಾದ 360° ನೋಟವನ್ನು ನೀಡಿ ಸಂದರ್ಶಕರಿಗೆ ಐತಿಹಾಸಿಕ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ವಾಸ್ತವದ ಅನುಭವವನ್ನು ನೀಡುವ ‘ವರ್ಚುವಲ್ ಟೂರ್’ ಅನ್ನು ಪ್ರಾರಂಭ ಮಾಡಲಾಗಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರವರು ಇಂದು ನವೀಕರಿಸಿದ ಮೈಸೂರು ರೈಲು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ರವರ ಸಮ್ಮುಖದಲ್ಲಿ ವಸ್ತುಸಂಗ್ರಹಾಲಯದ ‘ವರ್ಚುವಲ್ ಟೂರ್’ (ಮಿಥ್ಯ ವಿಹಾರ) ಗೆ ಚಾಲನೆ ನೀಡಿದರು.
ಸಂವಾದಾತ್ಮಕ ಧ್ವನಿಯನ್ನು ಹೊಂದಿರುವ ಇದು ಮ್ಯೂಸಿಯಂನ ವಸ್ತುಸಂಗ್ರಹಾಲಯದಲ್ಲಿ ರಚಿಸಲಾದ ವಿವಿಧ ಸೌಲಭ್ಯಗಳ ಸಮೃದ್ಧವಾದ 360° ನೋಟವನ್ನು ನೀಡಿ ಸಂದರ್ಶಕರಿಗೆ ಇದರ ಐತಿಹಾಸಿಕ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ವಾಸ್ತವದ ಅನುಭವವನ್ನು ನೀಡುತ್ತದೆ. ಇದನ್ನು https://mysururailmuseum.com ನಲ್ಲಿ ವೀಕ್ಷಿಸಬಹುದು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ದೇಶದ ಮೊದಲ ಪ್ರಾದೇಶಿಕ ವಸ್ತು ಸಂಗ್ರಹಾಲಯವನ್ನು ವಿಶ್ವ ದರ್ಜೆ ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವಲ್ಲಿ ಮಾಡಿದ ಅದ್ಭುತ ಕಾರ್ಯಕ್ಕಾಗಿ ಅಪರ್ಣ ಗರ್ಗ್ ಅವರನ್ನು ಅಭಿನಂದಿಸಿದರು.
ಮೈಸೂರಿನ ಮೂರು ಪ್ರಮುಖ ಪ್ರವಾಸಿ ಆಕರ್ಷಕ ತಾಣಗಳಾದ ಅರಮನೆ, ಮೃಗಾಲಯ ಮತ್ತು ಚಾಮುಂಡಿ ದೇವಾಲಯಗಳ ಜೊತೆಗೆ ಮೈಸೂರು ರೈಲ್ವೆ ವಸ್ತುಸಂಗ್ರಹಾಲಯವು ಸಹ ಮೈಸೂರು ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ. 1882 ರಲ್ಲಿ ಮೈಸೂರು ರಾಜ್ಯದಲ್ಲಿ ಮೊದಲಿಗೆ ಶುರುವಾದ ರೈಲು ಮಾರ್ಗದಿಂದ ಹಿಡಿದು ಈಗಿನವರೆಗೆ ಈ ಪ್ರದೇಶದಲ್ಲಿನ ರೈಲ್ವೆಯ ವಿಕಾಸವನ್ನು ಪತ್ತೆಹಚ್ಚುವಲ್ಲಿ ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ರವರ ನೇತೃತ್ವದಲ್ಲಿ ರೈಲ್ವೆ ಮಾಡಿದ ಅಸಾಧಾರಣ ಕಾರ್ಯಗಳನ್ನು ಎತ್ತಿ ತೋರಿಸಬೇಕು ಎಂದು ಮಾಧ್ಯಮಗಳಿಗೆ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.
ಈಗ ಹೊಸದಾಗಿ ಸೇರಿಸಲಾದ, ಹಿಂದಿನ ದಿನಗಳಲ್ಲಿ ಕೆಲಸ ಮಾಡುವ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವಂತಹ ಟ್ರ್ಯಾಕ್, ಸಿಗ್ನಲ್ ಮತ್ತು ಕಾರ್ಯಾಚರಣೆಗಳ ಒಳಾಂಗಣ ಗ್ಯಾಲರಿಗಳನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. ಪ್ರವಾಸಿಗರಿಗೆ ಉಗಿ ಲೋಕೊಮೋಟಿವ್ ಗಳು, ಪುರಾತನ ಬೋಗಿಗಳು ಮುಂತಾದ ಪ್ರಾಚೀನ ಕಲಾಕೃತಿಗಳನ್ನು ವೀಕ್ಷಿಸಿದ ಸಂಸದ ಪ್ರತಾಪ್ ಸಿಂಹ ರೈಲ್ವೆ ಬೋಗಿಯಲ್ಲಿ ಭೋಜನ ಸೇವಿಸುವ ನವೀನ ಅನುಭವ ನೀಡುವ ‘ಕೋಚ್ ಕೆಫೆ’ಯ ಹೊಸ ಪರಿಕಲ್ಪನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಡಿಯೋ-ದೃಶ್ಯ ಕೊಠಡಿ, ವಾಣಿಜ್ಯ ವಿಭಾಗದ ಉಪಕರಣಗಳಾದ ಚಲನಾ ನಗದು ಪೆಟ್ಟಿಗೆ, ‘ಕಾರ್ಡ್ ಟಿಕೆಟ್’ ಮುದ್ರಣ ಯಂತ್ರ, ನಗದು ಖಜಾನೆ, ‘ಕಾರ್ಡ್ ಟಿಕೆಟ್ ಡೇಟಿಂಗ್’ ಯಂತ್ರ, ಮುಂತಾದವುಗಳು ಬಹಳ ಗಮನಾರ್ಹವಾಗಿವೆ ಎಂದು ಹೇಳಿದ ಸಂಸದ ಪ್ರತಾಪ್ ಸಿಂಹ, ಮಹಾರಾಣಿಯ ಸಲೂನ್ ಮತ್ತು ಪಕ್ಕದ ಭೋಜನಗೃಹದ ರೈಲ್ವೆ ಕಾರ್ ನಿಂದ ಹೊರಬಂದ ನಂತರ ‘ಹಿಂದಿನ ಮೈಸೂರು ರಾಜ್ಯದ ರಾಜಮನೆತನದ ಪ್ರಭುತ್ವವು ನಿಜವಾಗಿಯೂ ಮೋಡಿಮಾಡುವಂತಿದೆ’ ಎಂದು ಅವರು ತಿಳಿಸಿದರು. ಸಂಗ್ರಹಾಲಯದಲ್ಲಿ ಒದಗಿಸಲಾಗಿರುವ ‘ವಾಚ್ ಟವರ್’ನಿಂದ ನಗರದ ಸೊಗಸಾದ ನೋಟವನ್ನು ಸಹ ಅವರು ಸವಿದರು.
ದಸರಾ ಉತ್ಸವದ ಸಂದರ್ಭದಲ್ಲಿ ಸಿಎಂ ಬಿ.ಎಸ್.ಯಡ್ಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಮತ್ತು ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಅವರನ್ನು ಮೈಸೂರು ರೈಲ್ವೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಕೋರುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.
ಇದರಿಂದಾಗಿ ವಸ್ತುಸಂಗ್ರಹಾಲಯವು ಮೈಸೂರು ನಗರದಲ್ಲಿನ ನೋಡಲೇಬೇಕಾದ ಆಕರ್ಷಣೆಯಾಗಿ ಜನಪ್ರಿಯವಾಗುವುದರೊಂದಿಗೆ ಹೆಚ್ಚಿನ ವ್ಯಾಪಾರಗಳು ಮತ್ತು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ಸಂಗ್ರಹಾಲಯದ ಮೌಲ್ಯವನ್ನು ಇನ್ನಷ್ಟು ಸುಧಾರಿಸುವಲ್ಲಿ ರೈಲ್ವೆಗೆ ಸಹಾಯ ಮಾಡುತ್ತದೆ ಎಂದು ಪ್ರತಾಪ್ ಸಿಂಹ ನುಡಿದರು.
ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ‘ಕ್ಲಿಕ್-ಎ-ಸೆಲ್ಫಿ’ ಸ್ಪರ್ಧೆ…
ಸಂಗ್ರಹಾಲಯವು ಹೊಸ ‘ಕ್ಲಿಕ್-ಎ-ಸೆಲ್ಫಿ’ ಸ್ಪರ್ಧೆಯನ್ನು ಶುರುಮಾಡಿದ್ದು, ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ತೆಗೆದ ತಮ್ಮ ‘ಸೆಲ್ಫಿ’(ಸ್ವಯಂಚಿತ್ರ) ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ #ILoveRailMuseum ಟ್ಯಾಗ್ ಬಳಸಿ facebook/mysururailmuseum, twitter/mysurumuseum ಮತ್ತು instagram/mysururailmuseum ಗೆ ಅಪ್ ಲೋಡ್ ಮಾಡಬಹುದು. ಚಿತ್ರಗಳಿಗೆ ಸ್ವೀಕರಿಸಲಾದ ಇಷ್ಟಗಳು, ಹಂಚಿಕೆಗಳು ಮತ್ತು ಟಿಪ್ಪಣಿಗಳ ಆಧಾರದ ಮೇಲೆ ಅತ್ಯುತ್ತಮ ಸೆಲ್ಫಿಗೆ ಬಹುಮಾನ ನೀಡಲಾಗುವುದು. ಈ ಸ್ಪರ್ಧೆಯು 2020 ರ ಸೆಪ್ಟೆಂಬರ್ 1 ರಿಂದ 2020 ರ ಸೆಪ್ಟೆಂಬರ್ 30 ರವರೆಗೆ ಚಾಲ್ತಿಯಲ್ಲಿ ಇರಲಿದೆ.
ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಶಾಂತಿ ಬಾಬು ಮತ್ತು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಮತ್ತು ಜನಸಂಪರ್ಕಾಧಿಕಾರಿಯಾದ ಪ್ರಿಯಾ ಶೆಟ್ಟಿ ಉಪಸ್ಥಿತರಿದ್ದರು. ‘ವರ್ಚುವಲ್ ಟೂರ್’ನ ಸೃಷ್ಟಿಕರ್ತರಾದ ಮೈಸೂರು ಮೂಲದ ಐಟಿ ಸೊಲ್ಯೂಷನ್ಸ್ ಕಂಪನಿಯ ಅರುಣ್ ಕುಮಾರ್ ರವರು ಇದರ ಪ್ರಮುಖ ವೈಶಿಷ್ಟ್ಯಗಳನ್ನು ಭೇಟಿ ನೀಡಿದ ಗಣ್ಯರಿಗೆ ವಿವರಿಸಿದರು.
Key words: Mysore- Railway Museum – Virtual Tour-MP-prathap simha