‘ ಬಹುರೂಪಿ ನಾಟಕೋತ್ಸವ’ ಮುಂದೂಡಿಕೆ : ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ

 

ಮೈಸೂರು, ಡಿ.04, 2021 : (www.justkannada.in news) ಬಹುನಿರೀಕ್ಷಿತ ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜ. 15 ರ ತನಕ ಮೂಂದೂಡಲಾಗಿದೆ. ಇದೇ 10ರಿಂದ 19ರವರೆಗೆ ಬಹುರೂಪಿ ಉತ್ಸವ ನಡೆಸಲು ಸಕಲ ಸಿದ್ಧತೆ ನಡೆಸಲಾಗಿತ್ತು.

ರಾಜ್ಯ ಸರಕಾರದ ನೂತನ ಕೊವಿಡ್ ಮಾರ್ಗಸೂಚಿ ಅನ್ವಯದ ಹಿನ್ನೆಲೆಯಲ್ಲಿ ರಂಗಾಯಣ ಈ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಜಸ್ಟ್ ಕನ್ನಡದ ಜತೆ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ಹೇಳಿದಿಷ್ಟು…

ರಾಜ್ಯ ಸರಕಾರ ಕೋವಿಡ್ ನ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಸಭೆ, ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಆದರೆ ರಂಗಾಯಣದ ಬಹುರೂಪಿ ನಾಟಕೋತ್ಸವ ಸಾವಿರಾರು ಮಂದಿ ಭಾಗವಹಿಸುವ ಉತ್ಸವ. ಆದ್ದರಿಂದ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15 ರ ತನಕ ಮುಂದೂಡಿದ್ದೇವೆ. ರಾಜ್ಯ ಸರಕಾರದ ದಿನವಹಿ ಬೆಳವಣಿಗೆ ಗಮನಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ.

ರಂಗಾಯಣದ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು, ಸಂಪನ್ಮೂಲ ವ್ಯಕ್ತಿಗಳು, ಮಳಿಗೆಗಳು ಹಾಗೂ ಇದರ ವೀಕ್ಷಣೆಗೆ ಆಗಮಿಸುವವರ ಅಂದಾಜು ಲೆಕ್ಕವೇ ದಿನಂಪ್ರತಿ 2000 ಮಂದಿಯಾಗುತ್ತಾರೆ. ಆದ್ದರಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಿ ಉತ್ಸವ ಮಾಡಲು ಸಾಧ್ಯವಾಗದು. ರಂಗಾಸಕ್ತರಿಗಾಗಿಯೇ ಬಹುರೂಪಿ ಉತ್ಸವ ಆಯೋಜಿಸುತ್ತಿರುವುದು. ಆದ್ದರಿಂದ ಈ ಎಲ್ಲಾ ಅಂಶವನ್ನು ಪರಿಗಣಿಸಿ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15 ರ ತನಕ ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ.

ಯಾವುದೇ ಬದಲಾವಣೆ ಇಲ್ಲ :

ಕೋವಿಡ್ ಮಾರ್ಗಸೂಚಿಯನ್ವಯ ಬಹುರೂಪಿಯನ್ನು ಯಥಾಸ್ಥಿತಿಯಲ್ಲೇ ಮುಂದೂಡಿರುವುದು. ಆದ್ದರಿಂದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ಸವ ನಡೆಯುವುದು ಈಗ ನಿರ್ಧರಿಸಿರುವ ’ತಾಯಿ’ ಪರಿಕಲ್ಪನೆಯನ್ನೇ ಪ್ರಧಾನ ಅಂಶವನ್ನಾಗಿರಿಸಿಕೊಂಡಿರುವ ಅಂಶಗಳನ್ನು ಆಧಾರಿಸಿಯೇ ನಡೆಯಲಿವೆ. ಜತೆಗೆ ನಾಟಕ, ಸಮಾರಂಭದ ಅತಿಥಿಗಳಲ್ಲೂ ಸಹ ಯಾವುದೇ ಬದಲಾವಣೆ ಇರದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಸ್ಪಷ್ಟಪಡಿಸಿದರು.

key words : Mysore-rangayana-bahuroopi-drama-festival-postponed-temporally-due-to-covid-guide.lines