ಮೈಸೂರು,ಮಾರ್ಚ್,8,2024(www.justkannada.in): ಮೈಸೂರು ರಂಗಾಯಣ ಎಂದರೆ ಕಲೆಗಳ ತವರು, ಕಲಾವಿದರ ಸ್ವರ್ಗ,ಸಂಸ್ಕೃತಿಗಳ ಸಂಗಮ ಕಲಾರಾಧಕರ ದೇಗುಲ, ಕಲೆಗೆ ಸಂಬಂಧಿಸಿದಂತೆ ಇತ್ಯಾದಿ ಇತ್ಯಾದಿ . ಬಿ ವಿ ಕಾರಂತರ ದಿನಮಾನಗಳಿಂದಲೂ ಬಹುರೂಪಿ ಒಂದು ರಂಗ ದಿಬ್ಬಣ , ಮೈಸೂರಿಗರಿಗೆ ಒಂದು ಸಾಂಸ್ಕೃತಿಕ ಹಬ್ಬ ರಂಗಕರ್ಮಿಗಳಿಗೆ ಪುಷ್ಕಳವಾದ ರಂಗ ಭೋಜನ .
ಪ್ರತಿ ವರ್ಷವೂ ಬಹಳ ಸಂಭ್ರಮ ಸಡಗರದಿಂದ ರಂಗಾಯಣದ ಆವರಣವನ್ನು ಮಧುವಣಗಿತ್ತಿಯಂತೆ ಸಿಂಗರಿಸಿಕೊಂಡು ಬಹುರೂಪಿಯನ್ನು , ಬಹಳ ವರ್ಣ ರಂಜಿತವಾಗಿ ಆಚರಿಸುತ್ತಾ ಬಂದಿದೆ ರಂಗಾಯಣ. ದೇಶದ, ವಿಶ್ವದ ನಾನಾ ಭಾಗಗಳಿಂದ ನೂರಾರು ನಾಟಕಗಳು ಬಹಳ ಭಾವಪೂರ್ಣವಾಗಿ ರಂಗಾಯಣದ ವೇದಿಕೆಯಲ್ಲಿ ಪ್ರದರ್ಶನಗೊಂಡಿವೆ, ಇಲ್ಲಿಯವರೆಗೂ ಬಹುರೂಪಿ ಎಂದರೆ ರಂಗಾಯಣದ ಆವರಣವೇ…
ರಂಗಾಸಕ್ತರನ್ನು ಕಲಾವಿದರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿತ್ತು. 2024ರ ಈ ವರ್ಷವೂ ಬಹುರೂಪಿ ನಾಟಕೋತ್ಸವ ಪ್ರಾರಂಭಗೊಂಡಿದೆ, ಕಾಟಾಚಾರ ಕುರ್ಚಿಯ ಮೇಲೆ ಕುಳಿತಿದೆ , ರಂಗಾಯಣಕ್ಕೆ ಕಲಾಸಕ್ತರ ಕ್ಷಾಮ ಉಂಟಾಗಿದೆ, ಮಳಿಗೆಗಳು ಮರ್ಯಾದೆ ಕಳೆದುಕೊಂಡಂತೆ ಕಾಣುತ್ತವೆ ರಂಗಾಯಣದ ಆವರಣವೆಲ್ಲ ಫ್ಲೆಕ್ಸ್ ಮಯವಾಗಿದೆ ಮುಖ್ಯದ್ವಾರದಿಂದ ಹಿಡಿದು ಸೂಚನಾ ಫಲಕಗಳು , ಪ್ರದರ್ಶನಗೊಳ್ಳಬೇಕಾದ ಎಲ್ಲಾ ನಾಟಕಗಳ ವಿವರಗಳನ್ನು ಫ್ಲೆಕ್ಸ್ , ತನ್ನ ಒಡಲಿನಲ್ಲಿ ತುಂಬಿಕೊಂಡಿದೆ ., ಎಲ್ಲಿಯೂ ಬಣ್ಣ ಮತ್ತು ಕುಂಚಗಳ ಸ್ಪರ್ಶವೇ ಇಲ್ಲದಂತಾಗಿದೆ .ಪ್ಲೆಕ್ಸ್ ಅಳವಡಿಸಿ ಬರೆಯುವ ಕಲಾವಿದನ ಕೈಗಳನ್ನು ಕಟ್ಟಿ ಎರಡು ಕಾಸು ಉಳಿಯಿತು ಎನ್ನುವ ಭ್ರಮೆಯಲ್ಲಿದ್ದರೆ ರಂಗಾಯಣದ ಆಡಳಿತ , ಮುಂದೊಂದು ದಿನ ನಾಟಕಕಾರರು ಕೈಕಟ್ಟಿ ಕುಳಿತುಕೊಳ್ಳಬೇಕಾಗಬಹುದು, ಫ್ಲೆಕ್ಸ್ ನಂತಹದ್ದೇ ಮತ್ತೊಂದು ಮಾಧ್ಯಮ, ವೇದಿಕೆಯಲ್ಲಿ ಬಣ್ಣ ಹಚ್ಚಿ ನಟಿಸಬಹುದು, ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
ಮನೋಹರ ಸಿಜೆ
ಮೈಸೂರು.
Key words: Mysore-Rangayana-Bahurupi