ಮೈಸೂರು, ಜು.10, 2022 : (www.justkannada.in news ) “ನಮ್ಮ ತಾಯಂದಿರು ಅಕ್ಷರ ಕಲಿ ಎನ್ನುತ್ತಿದ್ದರು. ಅನಂತರ ವಿಜ್ಞಾನ ಕಲಿ ಎನ್ನಬೇಕಾಗಿತ್ತು. ಈಗ ಕೇವಲ ಅಕ್ಷರ ಜ್ಞಾನ, ವಿಜ್ಞಾನ ಪ್ರಜ್ಞೆ ಅಷ್ಟೆ ಅಲ್ಲ, ಕಂಪ್ಯೂಟರ್ ಸಾಕ್ಷರರಾಗಿಯೂ ಆಗಬೇಕಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಮೋಸ ಮಾಡುವವರಿಂದ ರಕ್ಷಿಸಿಕೊಳ್ಳುವುದಕ್ಕಾಗಿಯಾದರೂ ಇದು ಅಗತ್ಯ.” ಎಂದು ವಿಜ್ಞಾನ ಮತ್ತು ಕಂಪ್ಯೂಟರ್ ಅರಿವಿನ ಅಗತ್ಯಗಳ ಬಗ್ಗೆ ಹಿರಿಯ ವಿಜ್ಞಾನ ಲೇಖಕ, ವೈದ್ಯ ಹಾಗೂ ಜನಪ್ರಿಯ ದೂರದರ್ಶನ ಕಾರ್ಯಕ್ರಮ “ಥಟ್ ಅಂತ ಹೇಳಿ” ನಿರೂಪಕ ಡಾ. ನಾ. ಸೋಮೇಶ್ವರ ಹೇಳಿದರು.
ನಗರದ ಸುರುಚಿ ರಂಗಮನೆಯಲ್ಲಿ ನಡೆದ ‘ ಸೈನ್ಸ್ ಸಂಜೆ’ ಮಾಸಿಕ ವಿಜ್ಞಾನ ಭಾಷಣ ಹಾಗೂ ಸಂವಾದ ಸರಣಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ ಸೈನ್ಸ್ ಸಂಜೆ’ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು, ನವದೆಹಲಿಯ ಭಾರತ ಸರಕಾರದ ವಿಜ್ಞಾನ ಪ್ರಸಾರ್ ಯೋಜನೆಯಾದ ಕುತೂಹಲಿ ಹಾಗೂ ಮೈಸೂರಿನ ಕಲಾಸುರುಚಿ ಸಂಘಟನೆಗಳ ಹೊಸ ಯೋಜನೆ.
ಪ್ರತಿ ತಿಂಗಳೂ ಎರಡನೆಯ ಶನಿವಾರ ಸಂಜೆ ನಡೆಯುವ ಸೈನ್ಸ್ ಸಂಜೆ ಸರಣಿಯ ಮೊದಲ ಸಂವಾದವನ್ನು “ಗುಂಪಿನಲ್ಲಿ ಗೋವಿಂದದ ಗಣಿತ”ದ ಬಗ್ಗೆ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸಸಿನ ವಿಜ್ಞಾನಿ ಡಾ. ವಿಶ್ವೇಶ ಗುತ್ತಲ್ ನಡೆಸಿದರು.
ಮಕ್ಕಳು ಹಾಗೂ ಹಿರಿಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ “ಕೆಲವು ಪ್ರಾಣಿಗಳೇ ಏಕೆ ಗುಂಪು, ಗುಂಪಾಗಿರುತ್ತವೆ? ಕೆಲವು ಸದಾ ಗುಂಪುಗಟ್ಟಿಕೊಂಡಿರುತ್ತವೆ. ಇನ್ನು ಕೆಲವು ಸಂದರ್ಭಾನುಸಾರ ಗುಂಪುಕಟ್ಟಿಕೊಳ್ಳುತ್ತವೆ. ಹೀಗೇಕೆ?” ಎಂಬ ಪ್ರಶ್ನೆಗಳೊಂದಿಗೆ ಸಂವಾದವನ್ನು ಅರಂಭಿಸಿದ ಡಾ. ಗುತ್ತಲ್, ಪ್ರಾಣಿಗಳಲ್ಲಿ ಕಾಣುವ ಸಂಘಜೀವನ ಎಲ್ಲ ಸಂದರ್ಭದಲ್ಲಿಯೂ ಸಹಕಾರದ ನಡೆಯಾಗಿರುವುದಿಲ್ಲ. ಕೆಲವೊಮ್ಮೆ ಅವು ಸ್ವಾರ್ಥದ ನಡೆಯೂ ಆಗಿರುತ್ತವೆ. ಮನುಷ್ಯನನ್ನೂ ಒಳಗೊಂಡಂತೆ ಪ್ರಾಣಿಗಳ ನಡವಳಿಕೆಯನ್ನು ಸ್ವಾರ್ಥ, ಪರಹಿತ, ಪರಸ್ಪರಿಕೆ ಹಾಗೂ ಸಹಕಾರ ಎನ್ನುವ ನಾಲ್ಕು ವಿಧವಾಗಿ ಹೇಗೆ ಅರ್ಥಮಾಡಿಕೊಳ್ಳಬಹುದೆಂದು ಉದಾಹರಣೆಗಳ ಸಹಿತ ಚರ್ಚಿಸಿದರು.
ಕುಮಾರಿ ವಿಂದ್ಯಾ ಸ್ವಾಗತಿಸಿದರು. ಡಾ. ಸುದರ್ಶನ್ ವಂದನಾರ್ಪಣೆ ಮಾಡಿದರು. ಹೆಚ್ಚಿನ ವಿವರಗಳಿಗಾಗಿ, ಕೊಳ್ಳೇಗಾಲ ಶರ್ಮ, 9886640328, ಕುತೂಹಲಿ ಯೋಜನೆಯ ಸಂಚಾಲಕರನ್ನು ಸಂಪರ್ಕಿಸಬಹುದು.
key words : mysore-science-sanje-kollegala-sharma