ಶಾಂತಲ ಟಾಕೀಸ್ ಹೆಸರು ಕೇಳಿದ್ರೆ ನನಗೆ ನೆನಪಾಗೋದು ನಮೋಃ ವೆಂಕಟೇಶ ಹಾಡು ಮತ್ತು ದಪ್ಪ ಮೀಸೆಯ ಮಿಲ್ಟ್ರಿ ಮ್ಯಾನ್ ದೇವರಾಜ್. ಹೌದು ಸಿನಿಮಾಗೆ, ಸಿನಿಮಾ ಮಂದಿರಕ್ಕೆ ಎಷ್ಟೇ ಆಧುನಿಕತೆಯ ಟಚ್ ಸಿಕ್ಕಿದ್ದರು ! ಶಾಂತಲ ಟಾಕೀಸ್‌ನಲ್ಲೇ ಬದಲಾಗದೇ ಉಳಿದಿದ್ದು ನಮೋಃ ವೆಂಕಟೇಶ ಹಾಡು ಮತ್ತು ಅಲ್ಲಿನ ಮ್ಯಾನೇಜರ್ ದೇವರಾಜ್. ನೀವು ಫ್ಯಾಮಿಲಿ ಹೋಟೆಲ್, ಫ್ಯಾಮಿಲಿ ಬಾರ್ ಅಂಡ್ ರೆಸ್ಟೋರೆಂಟ್ ಇತ್ಯಾದಿ ಇತ್ಯಾದಿ ಕೇಳಿರ್ತೀರಾ ! ಆದರೆ ಫ್ಯಾಮಿಲಿ ಸಿನಿಮಾ ಮಂದಿರ ಅನ್ನೋ ಪದ ಎಲ್ಲಾದರೂ ಕೇಳಿರುತ್ತೀರಾ, ಅಂದರೆ ಅದು ಶಾಂತಲ ಚಿತ್ರಮಂದಿರ ಮಾತ್ರ. ಆ ಕೀರ್ತಿ ಏನು ಸುಖಾ ಸುಮ್ಮನೆ ಬಂದಿದ್ದಲ್ಲ. ಇದರ ಸಂಪೂರ್ಣ ಶ್ರೇಯ ಸಿನಿಮಾ ಮಂದಿರದ ಮಾಲೀಕರಾದ ಎನ್ ಪದ್ಮನಾಭ ಪದಕಿ ಹಾಗೂ ಮ್ಯಾನೇಜರ್ ದೇವರಾಜ್ ಅವರಿಗೆ ಸಲ್ಲಬೇಕು.
ಹೌದು ತಂದೆ ಎನ್ ಎಸ್ ಪದಕಿ ಅವರು ಅತ್ಯಂತ ಪ್ರೀತಿಯಿಂದ, ಆಪ್ತತೆಯಿಂದ ಆರಂಭಿಸಿದ ಚಿತ್ರಮಂದಿರವನ್ನು ಅಷ್ಟೇ ಕಾಳಜಿಯಿಂದ ನಡೆಸಿಕೊಂಡು ಬಂದವರು ಪದ್ಮನಾಭ ಪದಕಿ. ಈ ಸಿನಿಮಾ ಮಂದಿರದಲ್ಲಿ ಮನೆ ಮಂದಿಯೆಲ್ಲಾ ಅತ್ಯಂತ ಸುರಕ್ಷಿತಭಾವದಿಂದ ಸಿನಿಮಾ ನೋಡುವ ವಾತಾವರಣವನ್ನು ಕಲ್ಪಿಸಿಕೊಡುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಇನ್ನು ಈ ಸಿನಿಮಾ ಮಂದಿರದ ಮತ್ತೊಂದು ವಿಶೇಷ ಅಂದ್ರೆ ಶಾಂತಲ ಚಿತ್ರಮಂದಿರ ಬ್ಲಾಕ್ ಟಿಕೆಟ್ ರಹಿತವಾದ ರಾಜ್ಯದ, ಅಷ್ಟೇ ಏಕೆ ದೇಶದ ಏಕೈಕ ಚಿತ್ರಮಂದಿರ ಅಂದರೂ ತಪ್ಪಾಗಲಾರದು. ಹೌದು ಇದರ ಸಂಪೂರ್ಣ ಕ್ರೆಡಿಟ್ ಮಿಲ್ರ್ಟಿ ಮ್ಯಾನ್ ದೇವರಾಜ್ ಅವರಿಗೆ ಸಲ್ಲುತ್ತದೆ. ಅವರು ಲಾಠಿ ಹಿಡಿದು ಟಿಕೆಟ್ ಕೌಂಟರ್ ಬಳಿ ನಿಂತರೆ ಸಾಕು ! ಪಡ್ಡೆ ಹೈಕ್ಳು, ಪೊಲೀ, ಪೋಕರಿಗಳು ಪತರುಗುಟ್ಟಿ ಹೋಗುತ್ತಿದ್ದರು. ಯಾರು ಈ ಸಿನಿಮಾ ಮಂದಿರದ ಮುಂದೆ ಬ್ಲಾಕ್ ಟಿಕೆಟ್ ಮಾರುವ ಸಾಹಸವನ್ನು ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ ಆಕಸ್ಮಾತ್ ನಾವು ಟಿಕೆಟ್ ತೆಗೆದುಕೊಂಡು ಸ್ನೇಹಿತ ಯಾರಾದರೂ ಬರುತ್ತೀನಿ ಅಂತಾ ಹೇಳಿ ಕೈಕೊಟ್ಟ ಮೇಲೆ ಆ ಟಿಕೆಟ್ ಅನ್ನು ಬೇರೆಯವರಿಗೆ ಮಾರಲು ನಾವು ಹೆದರುತ್ತಿದ್ದೆವು ! ಅಷ್ಟರಮಟ್ಟಿಗೆ ಶಿಸ್ತು ಶಾಂತಲ ಚಿತ್ರಮಂದಿರದಲ್ಲಿತ್ತು.
ದೇವರಾಜ್ ಅವರನ್ನು ನಾನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ. ಮೊದಲೆಲ್ಲಾ ಅವರನ್ನು ಬೈದುಕೊಂಡಿದ್ದೇ ಹೆಚ್ಚು. ಆದರೆ ಯಾವಾಗ ಅವರ ಪರಿಚಯವಾಯ್ತೋ ಆಗ ಅವರ ಜೀವನ ಶೈಲೆ ಉದ್ದೇಶ ಸಾಧನೆ ನಿಜಕ್ಕೂ ಅಪರೂಪ, ಅಮೋಘ ಅನಿಸಿ ಅವರ ಮೇಲೆ ಗೌರವ ಭಾವ ಮೂಡಿತು. ಅವರನ್ನು ಬೈದುಕೊಳ್ಳಲು ಕಾರಣ ಅವರ ಶಿಸ್ತು. ನಾವೋ ಅಂಕೆ, ಶಂಕೆ ಇಲ್ಲದೆ ಗೂಳಿಗಳಂತೆ ಬೆಳೆದವರು. ಯಾವುದೇ ಸಿನಿಮಾಗೆ ಹೋದರು ಗ್ಯಾಂಗ್ ಜೊತೆಯಲ್ಲಿ ಗುಂಪು ಗುಂಪಾಗಿ ಹೋಗುತ್ತಿದ್ದೆವು. ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ ಗಲಾಟೆ ಮಾಡವುದಕ್ಕೆ ನಾವೆಲ್ಲಾ ಹೋಗುತ್ತಿದ್ದೆವು. ಆದ್ರೆ ಶಾಂತಲ ಚಿತ್ರಮಂದಿರದಲ್ಲಿ ನಮ್ಮ ಯಾವ ಆಟವೂ ನಡೆಯುತ್ತಿರಲಿಲ್ಲ. ಇದಕ್ಕೆ ದೇವರಾಜ್ ಅವರು ಅವಕಾಶ ಕೊಡುತ್ತಿರಲಿಲ್ಲ. ಟಿಕೆಟ್ ಕೊಡುವಾಗ ಅಲ್ಲೇ ಇರುತ್ತಿದ್ದರು. ಸರತಿ ಸಾಲು ಬಿಟ್ಟು ಯಾರು ಮುಂದೆ ಹೋಗುವಂತಿಲ್ಲ. ಮಧ್ಯೆದಲ್ಲಿ ಸೇರುಕೊಳ್ಳುವಂತಿಲ್ಲ. ಅಪ್ಪಿ ತಪ್ಪಿ ಹಾಗೇನಾದರೂ ಮಾಡಿದ್ರೆ ಲಾಠಿ ಏಟು ಬೀಳುತಿತ್ತು. ಜೊತೆಗೆ ಟಿಕೆಟ್ ಸಹಾ ಕೊಡುತ್ತಿರಲಿಲ್ಲ. ಇನ್ನು ಸಿನಿಮಾ ಮಂದಿರಕ್ಕೂ ಶಿಸ್ತಿನಿಂದಲೇ ಹೋಗಬೇಕು. ಒಳಗೆ ಶಿಳ್ಳೆ ಹೊಡೆಯುವ ಆಗಿಲ್ಲ. ಒಳ್ಳೆ ಆರ್ಮಿ ಶಾಲೆಗೆ ಬಂದಂತೆ ಇರುತಿತ್ತು ಅಲ್ಲಿನ ವಾತಾವರಣ. ಬಹುಶಃ ದಿನ ಕಳೆದಂತೆ ಇದು ಬದಲಾಗಬಹುದು ಎಂದುಕೊಂಡಿದ್ದೆ ಆದ್ರೆ ಕೊನೆಯ ದಿನದವರೆಗೂ ಶಾಂತಲ ಚಿತ್ರಮಂದಿರ ಬದಲಾಗಲಿಲ್ಲ. ಅದರ ಮಾಲೀಕರು ಬದಲಾಗಲಿಲ್ಲ. ಮ್ಯಾನೇಜರ್ ಮಿಲ್ಟ್ರಿ ಮ್ಯಾನ್ ದೇವರಾಜ್ ಅಂತೂ ಬದಲಾಗಲೇ ಇಲ್ಲ. ( ದೇವರಾಜ್ ಅವರ ಬಗ್ಗೆಯೇ ಒಂದು ಕಾದಂಬರಿ ಬರೆಯಬಹುದು ಸದ್ಯದಲ್ಲೇ ಅವರ ಅನುಮತಿ ಪಡೆದು ಅವರ ಯಶೋಗಾಥೆಯನ್ನು ಬರೆಯುವ ಪ್ರಯತ್ನ ಮಾಡುತ್ತೇನೆ )
ಕೊನೆ ಮಾತು
ಶಾಂತಲ ಚಿತ್ರಮಂದಿರ ಇನ್ನು ನೆನಪು ಮಾತ್ರ. ಸಿನಿಮಾಮಂದಿರದ ಫೇವರೇಟ್ ನಮೋ ವೆಂಕಟೇಶ ಹಾಡಿನೊಂದಿಗೆ ಚಿತ್ರಮಂದಿರ ತನ್ನ ಪಯಣವನ್ನು ನಿಲ್ಲಿಸಿದೆ. ಜನರ ವಿಚಾರವಾಗಿ ಹೇಳುವ ಮಾತಿನಂತೆ ಎಷ್ಟು ವರ್ಷ ಬದುಕಿದರು ಅನ್ನುವುದಕ್ಕಿಂತ ಹೇಗೆ ಬದುಕಿದರು ಅನ್ನೋದು ಮುಖ್ಯ ಅಂತಾ. ಈ ಧಾಟಿಯಲ್ಲಿ ಹೇಳುವುದಾದರೆ ಶಾಂತಲ ಚಿತ್ರಮಂದಿರ ಧೀರ್ಘ ಕಾಲ ಚಾಲ್ತಿಯಲ್ಲಿದ್ದು ತನ್ನ ಉದ್ದೇಶ ತತ್ವ ಸಿದ್ದಾಂತಗಳನ್ನು ಬಿಟ್ಟುಕೊಡದೆ, ಯಾವುದಕ್ಕೂ ರಾಜಿಯಾಗದೆ ಮೈಸೂರಿಗರಿಗೆ ಸಿನಿಮಾ ನೋಡುವ ವಿಶಿಷ್ಠ ಅನುಭವ ನೀಡಿದ, ಎಂದೂ ಬದಲಾಗದ ಸದಾ ಕಾಲ ನೆನಪಿನ ಪುಟಗಳಲ್ಲಿ ಉಳಿಯಬಹುದಾದ ಚಿತ್ರಮಂದಿರವಾಗಿತ್ತು. ಬದಲಾವಣೆ ಜಗದ ನಿಯಮ. ಆ ಬದಲಾವಣೆಯ ಗಾಳಿ ಬೀಸಿದೆ ಶಾಂತಲ ಚಿತ್ರಮಂದಿರ ಇತಿಹಾಸದ ಪುಟ ಸೇರಿದೆ. ಆದರೆ ಸಿನಿಮಾ ಮಂದಿರದ ನೆನಪುಗಳು ಮಾತ್ರ ಸದಾ ಶಾಶ್ವತವಾಗಿ ಸ್ಮೃತಿಪಟಲದಲ್ಲಿ ಉಳಿಯಲಿದೆ.
ರಾಮ್
ಮೈಸೂರು