ಸಮಾಜದ ಸ್ವಾಸ್ಥ್ಯ ಕದಡುವ ಭಾಷಣ’ಕೋರ’ರು..!

Mysore-speakers-controversy-apology

 

ಮೈಸೂರು, ಮಾ.25, 2022 : (www.justkannada.in news ) ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಹೌದು, ಆಡಿದ ಮಾತು ಬಿಟ್ಟ ಬಾಣ ತಿರುಗಿ ಬರುವುದಿಲ್ಲ. ಒಂದು ಮಾತನಾಡುವ ಮುನ್ನ ಸಾವಿರ ಬಾರಿ ಯೋಚಿಸಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ.

ಸಾಮಾಜಿಕ ಜಾಲತಾಣಗಳು, ಕ್ಯಾಮೆರಾ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಕಾಲ. ಎಲ್ಲೋ ಯಾರೋ ಆಡಿದ ಮಾತುಗಳು ಕ್ಷಣಮಾತ್ರದಲ್ಲಿ ನಮ್ಮ ಕೈಲಿರುವ ಮೊಬೈಲ್‌ಗೆ ಬರುವ ಕಾಲಘಟ್ಟದಲ್ಲಿರುವ ನಾವು ಎಷ್ಟು ಸೂಕ್ಷ್ಮವಾಗಿ ವರ್ತಿಸಿದರೂ ಕಡಿಮೆಯೆ. ಕೋಮು ಭಾವನೆ ಕೆರಳಿಸಿ ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆಗಳು ಬಹುಬೇಗನೆ ವೈರಲ್ ಆಗುತ್ತವೆ. ರಾಜಕಾರಣಿಗಳು ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಅಥವಾ ಓಟ್ ಬ್ಯಾಂಕ್ ಭದ್ರ ಮಾಡಿಕೊಳ್ಳಲು ಹೇಳಿಕೆ ಕೊಡುವುದು, ತಮ್ಮ ಎದುರಾಳಿಯ ವಿರುದ್ಧ ವಾಚಾಮಗೋಚರವಾಗಿ ಬೈದು ಬೆಂಬಲಿಗರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಮಾಮೂಲಾಗಿದೆ.

ಚುನಾವಣೆ ಹತ್ತಿರ ಬಂದ್ರೆ ಸಾಕು ಇಂಥಹ ರಾಜಕೀಯ ನಾಯಕರ ಬೈಗುಳಗಳು ಜನರಿಗೆ ಸಾಮಾನ್ಯವೇ ಆಗಿವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಕೆಸರೆರೆಚಾಟವನ್ನೂ ಯಾರೂ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ತಮ್ಮ ನಾಲಗೆ ಹರಿಬಿಡೋದ್ರಿಂದ ರಾಜಕಾರಣಿಗಳಿಗೇನೋ ಲಾಭವಿದೆ ಆದರೆ ಸಂಸ್ಕೃತಿ ಚಿಂತಕರೆನಿಸಿಕೊಂಡವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವುದು, ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳುವುದು ಯಾಕೆ ಅನ್ನೋದೆ ಸದ್ಯದ ಪ್ರಶ್ನೆ.
ಮೊನ್ನೆ ಮೈಸೂರಿನ ರಂಗಾಯಣದಲ್ಲಿ ‘ ತಾಯಿ’ ಶೀರ್ಷಿಕೆಯಡಿ ಬಹುರೂಪಿ ನಾಟಕೋತ್ಸವ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅತಿಥಿಯಾದ್ದ ವಾಗ್ಮಿ ಹಿರೇಮಗಳೂರು ಕಣ್ಣನ್, ಹಿಜಾಬ್ ಕುರಿತು ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ತುಸು ಅಶ್ಲೀಲವಾಗಿಯೇ ಮಾತನಾಡಿದ್ರು. ಮುಖ ಮುಚ್ಚಿಕೊಂಡು ಶಾಲೆಗೆ ಹೋಗೋದಲ್ಲ. — ಮುಚ್ಕೊಂಡು ಶಾಲೆಗೆ ಹೋಗಿ ಎಂದು ಹೈಕೋರ್ಟ್ ಒಂದೇ ಲೈನ್‌ನಲ್ಲಿ ತೀರ್ಪು ನೀಡಿದೆ ಎಂದು ವ್ಯಂಗ್ಯ ಮಾಡಿದ್ರು. ಸಭಿಕರು ನಕ್ಕಿದ್ದೇ ನಕ್ಕಿದ್ದು.

ಇದರಿಂದ ಉತ್ತೇಜಿತರಾದ ಕಣ್ಣನ್ ಅವರು ಮುಂದುವರಿದು, ವೈದ್ಯರ ಬಳಿ ಹೋದಾಗ ಎಲ್ಲವನ್ನೂ ಬಿಚ್ಚಿ ತೋರಿಸ್ತೀರಿ ಆವಾಗ ಏನೂ ಅನ್ನಿಸಲ್ವಾ ಎಂದು ವ್ಯಂಗ್ಯ ಮಾಡಿದ್ರು.

ತಾಯಿ ಶೀರ್ಷಿಕೆಯಡಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಬಗ್ಗೆ ತಾನು ಹೀಗೆ ಮಾತನಾಡಬಹುದೇ ಎಂಬ ಆಲೋಚನೆಯೂ ಅವರಲ್ಲಿ ಬರಲಿಲ್ಲ. ನಾಡಿನುದ್ದಕ್ಕೂ ಅಭಿಮಾನಿಗಳನ್ನು ಹೊಂದಿರುವ ಕಣ್ಣನ್ ಅವರು ಇಂಥ ಹೇಳಿಕೆಯ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಳಿಕ ಪತ್ರಿಕಾ ಪ್ರಕಟಣೆಯ ಮೂಲಕ ಇಂದು ಕ್ಷಮೆಯನ್ನೂ ಕೇಳಿದ್ದಾರೆ .

ಇದೇ ರೀತಿ, ತಮ್ಮ ನಾಟಕಗಳ ಮೂಲಕ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ರಂಗಭೂಮಿ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮೈಸೂರಿನಲ್ಲಿ ಕೆಲ ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ತೀರಾ ಅಶ್ಲೀಲ ಭಾಷೆ ಬಳಸಿ ( ಇಲ್ಲಿ ಉಲ್ಲೇಖಿಸಲು ಯೋಗ್ಯವಲ್ಲದ ) ನಿಂದಿಸಿದ್ದರು. ಕಾರ್ಯಕ್ರಮ ಮುಗಿಯುವ ಮೊದಲೇ ಸಿದ್ದರಾಮಯ್ಯ ಬೆಂಬಲಿಗರು ಮತ್ತು ಅಭಿಮಾನಿಗಳು ಪ್ರತಿಭಟನೆ ಆರಂಭಿಸಿದ್ರು. ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ತಮ್ಮ ತಪ್ಪಿನ ಅರಿವಾಗಿ ಮಾಸ್ಟರ್ ಹಿರಣ್ಣಯ್ಯ ನೇರವಾಗಿ ಸಿದ್ದರಾಮಯ್ಯನವರ ಮೈಸೂರಿನ ನಿವಾಸಕ್ಕೆ ತೆರಳಿ ಕ್ಷಮೆ ಯಾಚಿಸಿದರು. ಅಲ್ಲದೆ ಇನ್ಮುಂದೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವುದಿಲ್ಲವೆಂದು ಶಪಥ ಮಾಡಿದ್ರು.

ಇನ್ನು ಕೆಲ ತಿಂಗಳುಗಳ ಹಿಂದೆ ನಾದಬ್ರಹ್ಮ ಹಂಸಲೇಖ, ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಪೇಜಾವರ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದ್ರು. ಶ್ರೀಗಳು ದಲಿತರ ಮನೆಯಲ್ಲಿ ಹಣ್ಣು ಹಂಪಲು ಸೇವಿಸಿದ್ದಾರೆ. ಕೋಳಿ ಕೊಟ್ರೆ ಸೇವಿಸುತ್ತಿದ್ರಾ ಎಂಬ ಹೇಳಿಕೆ ಶ್ರೀಗಳ ಅಭಿಮಾನಿಗಳನ್ನು ಕೆರಳಿಸಿತ್ತು. ದೂರು ದಾಖಲಾಗಿ ಪ್ರತಿಭಟನೆ ಶುರುವಾಗುತ್ತಿದ್ದಂತೆ ಎಚ್ಚೆತ್ತ ಹಂಸಲೇಖ ನಾನು ಮಾತನಾಡಿದ್ದು ತಪ್ಪು ಎಂದು ಕ್ಷಮೆ ಯಾಚಿಸಿದ್ರು.

ಸಾಹಿತ್ಯ, ಹಿರಿಯ ಪತ್ರಕರ್ತರು, ಮೈಸೂರು

ಈ ಎಲ್ಲಾ ವಿವಾದಾತ್ಮಕ ಹೇಳಿಕೆಗಳಿಗೂ ವೇದಿಕೆ ಮಾತ್ರ ಸಾಂಸ್ಕೃತಿಕ ನಗರಿ ಮೈಸೂರು ಅನ್ನೋದೇ ಬೇಸರದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಹಿರಿಯರು, ವಾಗ್ಮಿಗಳು, ಚಿಂತಕರೆನಿಸಿಕೊಂಡವರು ಕೈಗೆ ಮೈಕ್ ಸಿಕ್ಕ ಉತ್ಸಾಹದಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಸಮಾಜದ ಶಾಂತಿ ಕದಡುವ ಕೆಲಸಕ್ಕೆ ಮುಂದಾಗುವುದು ವಿಪರ್ಯಾಸವೇ ಸರಿ. ನಮ್ಮ ಮಾತು ಸಮಾಜಕ್ಕೆ ಬೆಳಕಾಗಬೇಕೇ ಹೊರತು ಬೆಂಕಿಯಾಗಬಾರದು ಎಂಬ ಪರಿಜ್ಞಾನ ಭಾಷಣಕಾರರಲ್ಲಿ ಮೂಡಿದರೆ ಸಮಾಜಕ್ಕೆ ಒಳಿತು.

  • ಸಾಹಿತ್ಯ ಯಜಮಾನ್,  ಹಿರಿಯ ಪತ್ರಕರ್ತರು

key words : Mysore-speakers-controversy-apology