ಮೈಸೂರು,ಡಿಸೆಂಬರ್,31,2020(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗಾಯಣವನ್ನು 1989ರಲ್ಲಿ ಮೈಸೂರಿನಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಇದು ಖ್ಯಾತ ರಂಗತಜ್ಞರು, ಪದ್ಮಶ್ರೀ ಪುರಸ್ಕೃತರೂ ಆಗಿರುವ ದಿ. ಬಿ.ವಿ.ಕಾರಂತರ ಕನಸಿನ ಕೂಸು ಎಂದರೂ ತಪ್ಪಾಗಲಾರದು. ಅವರು ಹಾಕಿಕೊಟ್ಟ ಮಾರ್ಗದರ್ಶನ, ಕಲ್ಪನೆ, ಕನಸುಗಳು ಇಂದು ಸಾಕಾರದತ್ತ ಹೊರಟಿವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೆಚ್ಚುಗೆವ್ಯಕ್ತಪಡಿಸಿದರು.ರಂಗಭೂಮಿ ಸೇರಿದಂತೆ ಎಲ್ಲ ತರಹದ ಕಲೆಗಳಿಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಲೇ ಬಂದಿವೆ. ಅನೇಕ ಪ್ರಾಧಿಕಾರಗಳನ್ನು ರಚಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ರಂಗಾಯಣದಿಂದ ಸಾವಿರಾರು ಕಲಾವಿದರು ಮೂಡಿಬಂದಿದ್ದಾರೆ. ಅವರೀಗ ದೇಶ-ವಿದೇಶಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಹೆಸರು ಮಾಡಿದ್ದಾರೆ ಎಂದು ಸ್ಮರಿಸಿದರು.
ರಂಗಭೂಮಿಯಲ್ಲಿ ಸಾಧನೆ ಮಾಡಿದ್ದಲ್ಲದೆ, ಸಿನೆಮಾ ರಂಗದಲ್ಲೂ ಸಹ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ವರ್ಷ ಅನೇಕ ಯುವಜನತೆಯನ್ನು ತನ್ನತ್ತ ಸೆಳೆಯುವಲ್ಲಿ ರಂಗಾಯಣ ಯಶಸ್ವಿಯಾಗಿದೆ ಎಂದರು.ರಂಗ ಚಟುವಟಿಕೆ ಮೂಲಕ ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಸಮಾಜದ ಕಟ್ಟುಪಾಡು, ಓರೆ-ಕೋರೆಗಳು, ರಾಜಕೀಯ ವಿಡಂಬನೆಗಳು ಸೇರಿದಂತೆ ಜೀವನದಲ್ಲಿ ಪ್ರತಿನಿತ್ಯ ನಡೆಯುವ ಅನೇಕ ಸಂಗತಿಗಳನ್ನು ಕಣ್ಣಿಗೆ ಕಟ್ಟಿದಂತೆ ಸಾದರಪಡಿಸುವ ಅತ್ಯುತ್ತಮ ಕಲೆ ಎಂದೇ ಹೇಳಬಹುದಾಗಿದೆ ಎಂದು ಹೇಳಿದರು.
ಇಂದು ನಾವು ಕೆಲವೊಂದು ಸರ್ಕಾರಿ ಯೋಜನೆಗಳು, ಜನಜಾಗೃತಿಗಳಿಗೆ ಬೀದಿನಾಟಕ ಸೇರಿದಂತೆ ಕೆಲವು ನಾಟಕಗಳಂತಹ ವೇದಿಕೆಯ ಮೊರೆಹೋಗುತ್ತೇವೆ, ಅಷ್ಟರಮಟ್ಟಿಗೆ ಇದರ ಗಟ್ಟಿತನವಿದೆ ಎಂದು ಹೇಳಬಹುದು. ಜನರ ನಡುವಿನ ಬಾಂಧವ್ಯವನ್ನು ಬೆಸೆಯುವಲ್ಲಿಯೂ ಸಹ ರಂಗವೇದಿಕೆ ಸಹಕಾರಿಯಾಗಿದೆ.
ಇಲ್ಲಿ ನಮ್ಮ ಕನ್ನಡ ನಾಡಿನ ಸತ್ವವಾದ ಕರಾವಳಿ, ಮಲೆನಾಡು, ಹೈದರಾಬಾದ್ ಕರ್ನಾಟಕ ಹಾಗೂ ಮೈಸೂರು ಕರ್ನಾಟಕ ಭಾಗಗಳಲ್ಲಿ ರಂಗಾಯಣವನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಅಂದರೆ, ಆಯಾ ಭಾಗಗಳ ಭಾಷೆ, ಸಂಸ್ಕೃತಿ, ಕಲೆ ಸೇರಿದಂತೆ ಇನ್ನಿತರ ಚಟುವಟಿಕೆಯು ರಂಗ ಕಲೆ ಮೂಲಕ ಹೊರಹೊಮ್ಮಲು ಸಹಾಯಕವಾಗಿದೆ ಎಂದರು.
ಮೈಸೂರು ರಂಗಾಯಣವು ದಿಟ್ಟತನದಿಂದ ಕೋವಿಡ್ ಸಂಕಷ್ಟವನ್ನೂ ಮೆಟ್ಟಿನಿಂತು ಅನೇಕ ರಂಗಚಟುವಟಿಕೆಯನ್ನು ಹಮ್ಮಿಕೊಂಡಿರುವುದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ. ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಸರಸ್ವತಿ ಸಮ್ಮಾನ್ ಡಾ.ಎಸ್.ಎಲ್.ಭೈರಪ್ಪ ಅವರ “ಪರ್ವ” ಕಾದಂಬರಿಯು ರಂಗರೂಪ ಪಡೆಯುತ್ತಿರುವುದು ಪ್ರಶಂಸನೀಯ ಸಂಗತಿ. ಇದು ಬರೋಬ್ಬರಿ 6 ಗಂಟೆಗಳ ರಂಗಪ್ರದರ್ಶನವಿದೆ ಎಂದರೆ, ನಿರ್ದೇಶಕರು ಹಾಗೂ ಕಲಾವಿದರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
key words : Mysore-theater-Performance-huge-Minister-S.T. Somashekhar- Appreciation …!