* ರಿಂಗ್ ರಸ್ತೆ ಮೇಲೆ ಹರಿದ ನೀರು
* ವಾಹನ ಸವಾರರ ಪರದಾಟ
* ಕೆಲ ರಸ್ತೆಗಳ ಸಂಚಾರ ಬಂದ್
* ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು
ಮೈಸೂರು, ಅಕ್ಟೋಬರ್ 25, 2021 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿಗೆ ಕಿರೀಟ ಪ್ರಾಯದಂತಿರುವ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಪೊಲೀಸ್ ಬಡಾವಣೆ ಅಕ್ಷರಶಃ ಜಲಾವೃತವಾಗಿದೆ.
ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ.
ಮಾತ್ರವಲ್ಲ, ಬಡಾವಣೆಗೆ ತಾಕಿಕೊಂಡಂತೆ 19 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ತಿಪ್ಪಯ್ಯನ ಕೆರೆ ತುಂಬಿ ತುಳುಕುತ್ತಿದೆ. ಪರಿಣಾಮ, ಕೆರೆಯ ಎರಡು ಕಡೆಗಳಲ್ಲಿರುವ ಕೋಡಿ ಮೇಲೆ ಸುಮಾರು ಎರಡು ಅಡಿ ಎತ್ತರದಲ್ಲಿ ನೀರು ಹೊರಭಾಗಕ್ಕೆ ಹರಿಯುತ್ತಿದೆ.
ಕೆರೆಯಿಂದ ಹೊರಹೋದ ನೀರು ಒಂದು ಕಡೆ ರಿಂಗ್ ರಸ್ತೆ ಮೇಲೆ ಹರಿಯುತ್ತಿದ್ದರೆ, ಮತ್ತೊಂದೆಡೆ ಇದೀಗ ತಾನೇ ನಿರ್ಮಾಣ ಮಾಡಲಾಗುತ್ತಿದ್ದ ಸರ್ವೀಸ್ ರಸ್ತೆ ಮೇಲೆ ನೀರು ರಭಸವಾಗಿ ಹರಿದ ಪರಿಣಾಮ ಇಡೀ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿದೆ.
ಕೆರೆಯ ಮತ್ತೊಂದು ಕೋಡಿ ಭಾಗದಲ್ಲೂ ನಿರೀಕ್ಷೆಗೂ ಮೀರಿ ನೀರು ಹರಿದಿದ್ದು, ಪೊಲೀಸ್ ಬಡಾವಣೆಯ ಕೆಲ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಬಡಾವಣೆಯ ನಿವಾಸಿಗಳು ಪರದಾಡುವಂತಾಗಿದೆ. ಇವೆಲ್ಲವುಗಳ ನಡುವೆ ನೀರಿನಿಂದ ಪ್ರಾಣ ರಕ್ಷಿಸಿಕೊಳ್ಳುವ ಸಲುವಾಗಿ ಹಾವು, ಚೇಳು, ಮುಂಗುಸಿಯಂತಹ ಪ್ರಾಣಿಗಳು ಬಡಾವಣೆಯಲ್ಲಿರುವ ಬಹುತೇಕ ಮನೆಗಳಿಗೆ ಹೊಕ್ಕುತ್ತಿರುವುದು, ನಿವಾಸಿಗಳ ನೆಮ್ಮದಿ ಕೆಡಿಸಿದೆ.