ಮೈಸೂರು,ಫೆ.18,2021(www.justkannada.in): ಸಮಾಜದಲ್ಲಿ ಮಂಗಳಮುಖಿಯರು ಎಂದರೇ ಸಾಕು ಎಲ್ಲರೂ ತಿರಸ್ಕತ ಭಾವದಿಂದ ನೋಡುತ್ತಾರೆ. ಮಂಗಳಮುಖಿಯರು ಶಿಕ್ಷಣ, ಔದ್ಯೋಗಿಕ ಕ್ಷೇತ್ರದಿಂದ ದೂರ ಉಳಿದಿದ್ದು, ಬಹುತೇಕ ಮಂಗಳಮುಖಿಯರು ಬಿಕ್ಷಾಟನೆ ಅವಲಂಭಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಮದ್ಯೆ ಇಲ್ಲೊಬ್ಬರು ಮಂಗಳಮುಖಿ ನಿಂದನೆಯನ್ನೇ ಛಲವಾಗಿ ಸ್ವೀಕರಿಸಿ ಕಾನೂನು ಪದವಿ ಪಡೆಯುವ ಮೂಲಕ ರಾಜ್ಯದ ಮೊಟ್ಟ ಮೊದಲ ತೃತೀಯ ಲಿಂಗಿ ನ್ಯಾಯವಾದಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಹೌದು, ಮೈಸೂರಿನ ಜಯನಗರದ ನಿವಾಸಿ ಶಶಿ ಅಲಿಯಾಸ್ ಶಶಿಕುಮಾರ್ ಮೈಸೂರು ಜಿಲ್ಲೆಯಲ್ಲಿ ಕಾನೂನು ಪದವಿ ಪಡೆದ ಮೈಸೂರು ಮಾತ್ರವಲ್ಲದೆ ರಾಜ್ಯದ ಮೊದಲ ತೃತೀಯ ಲಿಂಗಿ ಎನಿಸಿದ್ದಾರೆ. 14 ವರ್ಷದವರೆಗೂ ಶಶಿಕುಮಾರ್ ಆಗಿದ್ದ ಶಶಿ, ನಂತರ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸವಾಗಿ ಹುಡುಗಿಯರಂತೆ ಉಡುಪು ಧರಿಸುವುದು, ಮೇಕಪ್ ಮಾಡಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿದೆ. ಈ ಬಯಕೆ ಹೆಚ್ಚಾಗುತ್ತಿದ್ದಂತೆ ಸಹಪಾಠಿಗಳೂ ಶಶಿಕುಮಾರ್ ಹತ್ತಿರ ಸುಳಿಯಲಿಲ್ಲ. ಇದರಿಂದಾಗಿ ಶಶಿ ಬಹಳ ನೋವು ಅನುಭವಿಸಿದ್ದರು.
ಇನ್ನು ಅಶೋಕಪುರಂನ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿ, ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ವಿಜ್ಞಾನ(ಪಿಸಿಎಂಬಿ) ಹಾಗೂ ಕುವೆಂಪುನಗರದ ಸೋಮಾನಿ ಕಾಲೇಜಲ್ಲಿ ಕಲಾ ವಿಭಾಗದಲ್ಲಿ ಶಶಿ ಶಿಕ್ಷಣ ಪಡೆದಿದ್ದಾರೆ.
ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶಶಿ ಅಪಹಾಸ್ಯ, ನಿಂದನೆಗೆ ಒಳಗಾಗುತ್ತಲೇ ಇದ್ದರು. ಈ ಮಧ್ಯೆ ಹಾಸಿಗೆ ಹಿಡಿದಿದ್ದ ಹಿರಿಯ ನಾಗರೀಕರೊಬ್ಬರ ಕೇರ್ ಟೇಕರ್ ಆಗ ಕೆಲಸ ಮಾಡುತ್ತಿದ್ದ ಶಶಿ ಅವರಿಗೆ ಆಯುರ್ವೇದ ಮತ್ತು ಪಂಚಕರ್ಮ ವೈದ್ಯರಾದ ಡಾ.ಜೆ.ರಶ್ಮಿರಾಣಿ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಿದರು. ಶಶಿಗೆ ವಿವೇಕಾನಂದ ವೃತ್ತದ ಬಳಿ ಇರುವ ಚಿರಂತ್ ಆಯುರ್ವೇದ ಕ್ಲಿನಿಕ್ ಹಾಗೂ ಆಪ್ತಸಮಾಲೋಚನ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ನೀಡಿದ್ದಲ್ಲದೆ, ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.
ನಂತರ 2018ರಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಶಶಿಯನ್ನು ಕಾನೂನು ಪದವಿ ಶಿಕ್ಷಣ ಪಡೆಯಲು ದಾಖಲು ಮಾಡಿಸಿ ಸ್ವತಃ . ಡಾ.ಜೆ.ರಶ್ಮಿರಾಣಿ ಅವರೇ ಪ್ರತಿ ವರ್ಷ ಕಾಲೇಜು ಶುಲ್ಕ 30 ಸಾವಿರ ರೂ. ಪಾವತಿಸಿದ್ದಾರೆ. ಇಷ್ಟೆಲ್ಲಾ ನಿಂದನೆ, ನೋವು ಅನುಭವಿಸಿ ಶಿಕ್ಷಣ ಪದವಿ ಸ್ನಾತಕೋತ್ತರ ಪದವಿ ಕಾನೂನು ಪದವಿ ಪಡೆದಿರುವ ಶಶಿ ಅವರು ಈಗ ಹಿರಿಯ ವಕೀಲರಾದ ಟಿ.ನಾಗರಾಜು ಅವರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಶಶಿ, ನಿಂದನೆ, ಲೈಂಗಿಕ ಕಿರುಕುಳದಿಂದ ಜೀವನವೇ ಸಾಕೆನಿಸಿದರೂ, ಆದರೂ ಛಲವೊಂದು ಬೆಂಬಡದೆ ಕಾಡುತ್ತಿತ್ತು. ಮನೆ ಕೆಲಸ ಮಾಡಿ ಪದವಿ ಶಿಕ್ಷಣ ಪಡೆದಿದ್ದೆ. ನಾನು ಓದುವ ಹಂಬಲ ವ್ಯಕ್ತಪಡಿಸಿದ್ದಾಗಲೂ ಕೆಲವರು ಓದುವುದು ನಿಮ್ಮಂತಹವರಿಗಲ್ಲ, ಸಿಗ್ನಲ್‍ನಲ್ಲಿ ನಿಂತು ಬಿಕ್ಷೆ ಬೇಡುವಂತೆಯೂ, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆಯೂ ಛೇಡಿಸಿದ್ದಾರೆ. ಅದೆಲ್ಲವನ್ನು ಬದಿಗೊತ್ತಿ ಇಂದು ಕಾನೂನು ಪದವಿ ಪಡೆದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಕಾನೂನು ಪದವಿ ಪಡೆದ ನಂತರ ಹಿರಿಯ ವಕೀಲರಾದ ಟಿ.ನಾಗರಾಜು ಪ್ರಾಕ್ಟೀಸ್‍ಗೆ ಅವಕಾಶ ನೀಡಿ, ವಾದ ಮಂಡಿಸುವುದು, ಕಲಾಪ ಹೇಗಿರಬೇಕು ಎನ್ನುವುದನ್ನು ಹೇಳಿಕೊಟ್ಟರಲ್ಲದೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದಾರೆ. ಎಸಿ ಕೋರ್ಟ್‍ನ ನ್ಯಾಯಾಧೀಶರಾದ ಡಾ.ಎನ್.ಸಿ.ವೆಂಕಟರಾಜು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನನಗೆ ನ್ಯಾಯಾಧೀಶರಾಗಬೇಕೆಂಬ ಹಂಬಲವಿದೆ. ಅದಕ್ಕಾಗಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ನನ್ನಂತೆ ಕಿರುಕುಳಕ್ಕೆ ಒಳಗಾದವರಿಗೆ ನೆರವು ನೀಡಬೇಕೆನ್ನುವುದು ನನ್ನ ಉದ್ದೇಶವಾಗಿದೆ ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.
Key words: Mysore- Transgender- embrace- abuse – become -lawyer