ವರ್ಚುವಲ್ ಮೂಲಕ U-DIGITAL ನ ‘ ಯು- ಸ್ಟ್ರೀಮ್ ಒಟಿಟಿ ‘ ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ.

mysore-u-digital-anniversary-hdk

ಮೈಸೂರು, ಮಾ.06, 2022 : (www.justkannada.in news ) : ರಾಜ್ಯದ ಜನಪ್ರಿಯ ಎಂ.ಎಸ್.ಒ, ಮೈಸೂರು ಮೂಲದ ಯು-ಡಿಜಿಟಲ್ ಸಂಸ್ಥೆಯ ‘ ಯು- ಸ್ಟ್ರೀಮ್ ಒಟಿಟಿ ‘ ಗೆ ಚಾಲನೆ ನೀಡಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಭಕೋರಿದರು.

ಶನಿವಾರ ಮೈಸೂರು ಹೊರ ವಲಯದ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಯು-ಡಿಜಿಟಲ್ ಸಂಸ್ಥೆಯ ಎರಡನೇ ವರ್ಷದ ಸಂಭ್ರಮಚಾರಣೆ ಸಮಾರಂಭದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಖುದ್ದು ಭಾಗವಹಿಸಬೇಕಿತ್ತು. ಆದರೆ ಕೆಲ ಅನಿವಾರ್ಯ ಕಾರಣಗಳಿಂದ ಸಮಾರಂಭಕ್ಕೆ ಗೈರಾದ ಎಚ್ಡಿಕೆ, ವರ್ಚುವಲ್ ಮೂಲಕವೇ ಸಂಸ್ಥೆಗೆ ಶುಭ ಹಾರೈಸುವ ಮೂಲಕ ‘ ಯು- ಸ್ಟ್ರೀಮ್ ಒಟಿಟಿ ‘ ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಆರಂಭವಾದ ಅತೀ ಕಡಿಮೆ ಸಮಯದಲ್ಲೇ ಯು-ಡಿಜಿಟಲ್ ಸಂಸ್ಥೆ ಅತೀ ವೇಗವಾಗಿ ರಾಜ್ಯದ ಜನ ಮನ್ನಣೆ ಪಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 11 ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯರಂಭ ಮಾಡಿರುವ ಯು-ಡಿಜಿಟಲ್, ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಿಸಲಿ ಎಂದು ಹೇಳುವ ಮೂಲಕ ಸಂಸ್ಥೆಯ ಮುಖ್ಯಸ್ಥ ಕೆ.ಎಂ.ಮಂಜುನಾಥ್ ಅವರಿಗೆ ಶುಭ ಕೋರಿದರು.

ಯು ಡಿಜಿಟಲ್ ನೆಟ್‌ವರ್ಕ್‌‌ನ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾದ್ಯಮ ಕ್ಷೇತ್ರದ ಹಿರಿಯರು ಭಾಗವಹಿಸಿದ್ದರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್ ಮಾತನಾಡಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ಆರಂಭವಾದ ಯು-ಡಿಜಿಟಲ್ ಸಂಸ್ಥೆ, ಒಂದೇ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಮುಖ್ಯ ಕಾರಣ ಕೇಬಲ್ ಆಪರೇಟರ್ ಗಳ ಒಗ್ಗಟ್ಟು ಹಾಗೂ ಇದರ ರೂವಾರಿಯಾಗಿರುವ ಯು-ಡಿಜಿಟಲ್ ಸಂಸ್ಥೆ ಮುಖ್ಯಸ್ಥರಾದ ಕೆ.ಎಂ.ಮಂಜುನಾಥ್ ಅವರ ಅವಿರತ ಶ್ರಮ ಹಾಗೂ ಬದ್ಧತೆ ಎಂದರು.

ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್ ಮುಖ್ಯಸ್ಥ ರವಿ ಹೆಗಡೆ ಮಾತನಾಡಿ, ಮಾದ್ಯಮಗಳಿಗೆ ಆಧಾರಸ್ತಂಭವೇ ಕೇಬಲ್‌ ಆಪರೇಟರ್‌ಗಳು. ಕೇಬಲ್ ಆಪರೇಟರ್‌ಗಳಿಲ್ಲದಿದ್ರೆ ಸುದ್ದಿಗಳು ಸ್ಟುಡಿಯೋ‌ಗೆ ಸೀಮಿತವಾಗುತ್ತಿದ್ದವು. ಕೋವಿಡ್‌ನಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆರಂಭಿಸಿ ಸಾಧನೆ ಮಾಡಿರುವ ನಿಮಗೆ ಹ್ಯಾಟ್ಸ್‌ಆಫ್. ಮೂರು ಲಕ್ಷ ಸೆಟ್ ಟಾಪ್‌ ಬಾಕ್ಸ್‌ಗಳನ್ನ ಹೊಂದುವುದು ಸುಲಭದ ಮಾತಲ್ಲ‌. ಮುಂದೊಮ್ಮೆ‌ ಯು ಡಿಜಿಟಲ್ ಇಡೀ ಕರ್ನಾಟಕವನ್ನ ಆವರಿಸಿಕೊಳ್ಳುತ್ತೆ. ಯು ಡಿಜಿಟಲ್‌ ಕೇವಲ ನೆಟ್‌ವರ್ಕ್‌ ಅಷ್ಟೇ ಅಲ್ಲ, ಓಟಿಟಿ ಪ್ಲಾಟ್‌ಫಾರ್ಮ್‌ಗೆ ಹೋಗಿರುವುದು ಸಾಧನೀಯ. ಓಟಿಟಿಯಲ್ಲಿ ಕನ್ನಡ ಸುದ್ದಿ ಮಾದ್ಯಮಗಳನ್ನ ಹೆಚ್ಚು ಪ್ರಸಾರ ಮಾಡಿ ಎಂದು ಮನವಿ ಮಾಡಿದರು.

ನ್ಯೂಸ್‌ಫಸ್ಟ್ ಮುಖ್ಯಸ್ಥ ಎಸ್.ರವಿಕುಮಾರ್ ಮಾತನಾಡಿ, ನಾನು ಮೊದಲ ವರ್ಷ ಬಂದಾಗ ಒಂದು ಲಕ್ಷ ಇದ್ದ ಸೆಟ್ ಟಾಪ್ ಬಾಕ್ಸ್ ಇಂದು ಮೂರು ಲಕ್ಷಕ್ಕೆ ಏರಿದೆ. ಕರ್ನಾಟಕದ ಬಹುತೇಕ ಭಾಗವನ್ನ ಯು ಡಿಜಿಟಲ್ ಆವರಿಸಿದೆ. ಯಾವುದೇ ಸಂಸ್ಥೆ ಬೆಳೆಯಬೇಕೆಂದ್ರೆ ಟೀಂ ವರ್ಕ್ ಮುಖ್ಯ. ಹೆಬ್ಬಾಳು ಮಂಜು ಅವರ ತಂಡದ ಪರಿಶ್ರಮದಿಂದ ಇಂದು ಯು ಡಿಜಿಟಲ್ ಯಶಸ್ಸು ಕಂಡಿದೆ. ಎರಡು ವರ್ಷದಲ್ಲಿ ಯು ಡಿಜಿಟಲ್ ಬೃಹತ್‌ ಸಾಧನೆ ಮಾಡಿದೆ. ಕೇಬಲ್, ಬ್ರಾಡ್‌ಕಾಸ್ಟ್ ಒಂದೇ ನಾಣ್ಯದ ಎರಡು ಮುಖಗಳು. ನಾವು ಮಾಡುವ ಸುದ್ದಿಗಳನ್ನ ಮನೆ ಮನೆಗೆ ತಲುಪಿಸಿದ್ದೀರಿ. ಹಗಲಿರುಳು ಎನ್ನದೆ ಮನೆ, ಎಷ್ಟೆ ಒತ್ತಡ ಬೆದರಿಕೆಗಳು ಬಂದರೂ ನಮ್ಮ ಚಾನೆಲ್‌ಗಳನ್ನ ಮನೆ ಮನೆಗೆ ತಲುಪಿಸುತ್ತಿದ್ದೀರ.

ನಾವು ಪ್ರಸಾರ ಮಾಡುವ ಸುದ್ದಿಗಳ ಔಟ್‌ಪುಟ್‌ ಬಗ್ಗೆ ಪರಿಶೀಲನೆಗಾಗಿ ನಾನು ಎಲ್ಲಾ ಕೇಬಲ್‌ ನೆಟ್‌ವರ್ಕ್‌ಗಳಿಗೆ ಭೇಟಿ ಮಾಡಿದ್ದೇನೆ. ಆದರೆ ಮಂಜು ಮೇಲಿನ ವಿಶ್ವಾಸದಿಂದ ನಾನು ಯು ಡಿಜಿಟಲ್‌ಗೆ ಭೇಟಿ ಮಾಡಿಲ್ಲ. ಅಷ್ಟರ ಮಟ್ಟಿಗೆ ತುಂಬಾ ಕ್ವಾಲಿಟಿಯೊಂದಿಗೆ ಸುದ್ದಿವಾಹಿನಿಗಳನ್ನ ಪ್ರಸಾರ ಮಾಡುತ್ತಿದ್ದಾರೆ. ಯು ಡಿಜಿಟಲ್‌ ಬಗ್ಗೆ ಈವರೆಗೂ ಯಾವುದೇ ದೂರುಗಳು ನಮಗೆ ಬಂದಿಲ್ಲ‌. ಇಂದಿನ ಎಂಎಸ್‌ಓಗಳ ಮಧ್ಯೆ ಯು ಡಿಜಿಟಲ್ ಇಷ್ಟು ವೇಗವಾಗಿ ಬೆಳೆಯುವುದು ಸುಲಭವಲ್ಲ. ಇಡೀ ರಾಜ್ಯದಲ್ಲೇ ಮನೆ ಮಾತಾಗಿ ಉತ್ತುಂಗಕ್ಕೆ ಏರಲಿ ಅಂತ ನಾನು ಆಶಿಸುತ್ತೇನೆ ಎಂದರು.

ಯು ಡಿಜಿಟಲ್ ನೆಟ್‌ವರ್ಕ್‌‌ನ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಎಲ್. ನಾಗೇಂದ್ರ ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥ ಕೆ.ಎಂ.ಮಂಜುನಾಥ್ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರಿಗೆ ವಂದನೆ ಸಲ್ಲಿಸಿದರು.

ಸನ್ಮಾನ :

ಇದೇ ವೇಳೆ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಬಿ,ಆರ್. ಪೂರ್ಣಿಮಾ, ನ್ಯೂಸ್ ಆಯ್ಯಂಕರ್ಸ್ ಗಳಾದ ಟಿವಿ-9 ನ ಹರಿಪ್ರಸಾದ್ , ಸುವರ್ಣ ನ್ಯೂಸ್ ನ ಭಾವನ ನಾಗಯ್ಯ, ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್, ನ್ಯೂಸ್ ಫಸ್ಟ್ ನ ನಿಖಿಲ್ ಜೋಷಿ ಹಾಗೂ ದಿಗ್ವಿಜಯ ನ್ಯೂಸ್ ನ ರಕ್ಷತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

key words : mysore-u-digital-anniversary-hdk