ಮೈಸೂರು, ಜ.22, 2021 : ( www.justkannada.in news ) ಈವರೆಗೂ ಪ್ರವೇಶಾತಿಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳಿಗೆ ಮೈಸೂರು ವಿವಿ , ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಮತ್ತೊಂದು ಅವಕಾಶ ಕಲ್ಪಿಸಿದೆ.
ಪೋರ್ಟಲ್‌ನಲ್ಲಿ ಈಗಾಗಲೇ ಹೆಸರು ನೋಂದಾಯಿಸಿದ್ದು, ಪ್ರವೇಶಾತಿ ಪಡೆಯದ ವಿದ್ಯಾರ್ಥಿಗಳು ೧ ಸಾವಿರ ರೂ. ಶುಲ್ಕ ಪಾವತಿಸಿ ಜ.೨೨ರಿಂದ ೨೭ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಜತೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪುನ: ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಲ್ಲಿ, ಮೊದಲೇ ಅರ್ಜಿ ಸಲ್ಲಿಸಿದ್ದ ಕೋರ್ಸ್‌ಗಳಿಗೇ ಅವರ ಹೆಸರನ್ನು ಪರಿಗಣಿಸಲಾಗುತ್ತದೆ .ಆದ್ದರಿಂದ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ಬೇರೆ ಕೋರ್ಸ್‌ಗಳಿಗೆ ಪ್ರವೇಶ ಬಯಸಿದಲ್ಲಿ ೧ ಸಾವಿರ ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಇ-ಗವರ್ನೆನ್ಸ್ ತಂಡವು ಸಿದ್ಧಪಡಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಆಯ್ಕೆ ಸಮಿತಿಯು ಜ.೨೮, ೨೯ರಂದು ಪರಿಶೀಲಿಸಿ, ಜ.೩೦ರಂದು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಈ ಸಂಬಂದ ಅಧ್ಯಯನ ವಿಭಾಗಗಳ ಅಧ್ಯಕ್ಷರುಗಳಿಗೆ ಸೂಚನೆಗಳನ್ನು ನೀಡಿರುವ ವಿವಿ ಅದನ್ನು ಚಾಚುತಪ್ಪದೆ ಅನುಸರಿಸುವಂತೆ ತಿಳಿಸಿದೆ.
ಆಯಾ ವಿಭಾಗದ ಮುಖ್ಯಸ್ಥರು ‘ಎ’ ಸ್ಕೀಮ್ ಸೀಟುಗಳು ಖಾಲಿಯಿದ್ದಲ್ಲಿ, ಎ ಸ್ಕೀಮ್ ಭರ್ತಿಯಾದ ನಂತರವೇ ‘ಬಿ’ ಸ್ಕೀಮ್‌ನಲ್ಲಿ ಪ್ರವೇಶಾತಿ ನೀಡಬೇಕು. ಒಂದು ವೇಳೆ ‘ಬಿ’ ಸ್ಕೀಮ್ ಸೀಟುಗಳು ಭರ್ತಿಯಾಗಿ, ಎ ಸ್ಕೀಮ್ ಸೀಟುಗಳು ಖಾಲಿಯಿದ್ದಲ್ಲಿ, ಅವುಗಳನ್ನು ‘ಎ’ ಸ್ಕೀಮ್‌ಗೆ ಪರಿವರ್ತಿಸಿ, ‘ಬಿ’ ಸ್ಕೀಮ್ ಅಡಿಯಲ್ಲೇ ಪ್ರವೇಶಾತಿ ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನಿಂದ ಬಂದಿದ್ದಲ್ಲಿ ಮೆರಿಟ್ ಆಧಾರದ ಮೇಲೆ ವರ್ಗವಾರು ೫ ಸಾವಿರ ರೂ. ಪಾವತಿಸಿಕೊಂಡು ಪ್ರವೇಶಾತಿ ನೀಡಬೇಕು. ಕುಟುಂಬದ ವಾರ್ಷಿಕ ಆದಾಯ ೨.೫ ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ ಮಾತ್ರ ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಬೇಕು.
ಮುಖ್ಯವಾಗಿ ಫೆ.೧ರಂದು ಬೆಳಿಗ್ಗೆ ೧೦ ರಿಂದ ೧ ಗಂಟೆ ಒಳಗೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ ವಿದ್ಯಾರ್ಥಿಗಳ ಆಯ್ಜೆ ಪಟ್ಟಿಯನ್ನು ಮಾತ್ರವೇ ಪ್ರವೇಶಾತಿಗೆ ಪರಿಗಣಿಸಲಿದ್ದು, ಫೆ.೧ ಮತ್ತು ೨ ರಂದು ಪ್ರವೇಶಾತಿ ನೀಡುವ ಕ್ರಮವನ್ನು ಅನುಸರಿಸಬೇಕು ಎಂದು ಮೈಸೂರು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
0000
key words : mysore university- admission open- reopen entry- to student